ನವದೆಹಲಿ, ಆಗಸ್ಟ್ 15 (ಪಿಟಿಐ)– ದೂರಗಾಮಿ ಸಾಮರ್ಥ್ಯದ ‘ಅಗ್ನಿ–2’ ಕ್ಷಿಪಣಿ ಸದ್ಯದಲ್ಲೇ ದೇಶದ ಶಸ್ತ್ರಾಗಾರ ಸೇರಿಕೊಳ್ಳಲಿದೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ಘೋಷಿಸಿದರು.
ದೇಶದ 53ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಐತಿಹಾಸಿಕ ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು ಈಗ ಹಿಂದೆಂದಿಗಿಂತಲೂ ಪ್ರಬಲರಾಗಿದ್ದೇವೆ; ಪೊಖ್ರಾನ್ ಅಣುಸಾಧನ ಸ್ಫೋಟ ದೇಶಕ್ಕೆ ಅಗತ್ಯವಾದ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ನೀಡಿದೆ. ಭಾರಿ ಒತ್ತಡದ ಮಧ್ಯೆಯೂ ಅಗ್ನಿ–2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದೇವೆ’ ಎಂದು ಹೇಳಿದರು.
ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲವನ್ನು ಸ್ಥಗಿತಗೊಳಿಸುವವರೆಗೆ ಆ ರಾಷ್ಟ್ರದ ಜತೆ ದ್ವಿಪಕ್ಷೀಯ ಮಾತುಕತೆ ಪುನರಾರಂಭಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಹೃದಯ ವೈಶಾಲ್ಯ ಮೆರೆಯಲಿ: ಪಟೇಲ್
ಬೆಂಗಳೂರು, ಆಗಸ್ಟ್ 15– ಭಾರತೀಯರೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಲು ಮನೋಭೂಮಿಕೆ ಸಿದ್ಧಪಡಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಇಲ್ಲಿ ಕರೆ ನೀಡಿದರು.
‘ದೇಶದಲ್ಲಿ ಜಾತಿ, ಮತ, ಧರ್ಮ, ಭಾಷೆ ಹಾಗೂ ಪ್ರಾಂತ್ಯಗಳಂತಹ ಅತಿ ಸೂಕ್ಷ್ಮ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿ ಸ್ಫೋಟಕ ಪರಿಸ್ಥಿತಿಗೆ ಅವಕಾಶವಾಗದಂತೆ ಹೃದಯ ವೈಶಾಲ್ಯ ಮೆರೆಯಬೇಕಿದೆ’ ಎಂದರು.
ಫೀಲ್ಡ್ ಮಾರ್ಷಲ್ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮಾತನಾಡುತ್ತಿದ್ದ ಅವರು, ಗಡಿ ರೇಖೆಯನ್ನು ದಾಟಿ ಒಳನುಗ್ಗುವ ಶತ್ರುಗಳನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದರೆ ದೇಶದ ಒಳಗಡೆ ಸಂಚು ನಡೆಸುತ್ತಿರುವ ಆಂತರಿಕ ಶತ್ರುಗಳನ್ನು ಹೊಣೆಗಾರಿಕೆಯಿಂದ ಪ್ರಜೆಗಳು ಹತ್ತಿಕ್ಕಬೇಕಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.