ADVERTISEMENT

ಬುಧವಾರ 7– 12– 1994

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 17:27 IST
Last Updated 6 ಡಿಸೆಂಬರ್ 2019, 17:27 IST

ಇಂದು ಸಂಸತ್ ಚಳಿಗಾಲದ ಅಧಿವೇಶನ ಆರಂಭ

ನವದೆಹಲಿ, ಡಿ. 6– ನಾಳೆಯಿಂದ ಎರಡು ವಾರಗಳ ಕಾಲ ನಡೆಯಲಿರುವ ಸಂಸತ್‌ನ ಚಳಿಗಾಲದ ಅಧಿವೇಶನ ನಿರೀಕ್ಷೆಯಂತೆ ಬಿಸಿ ಬಿಸಿ ಚರ್ಚೆಯ ಅಧಿವೇಶನವಾಗಲಿದೆ. ಕೆಲವು ಹೊಸ ವಿಧೇಯಕಗಳ ಜತೆಗೆ ಕಳೆದ ಅಧಿವೇಶನದಲ್ಲಿ ಸಾಕಷ್ಟು ಗದ್ದಲ ಎಬ್ಬಿಸಿದ್ದ ಷೇರು ಹಗರಣ ಕುರಿತ ಸರ್ಕಾರದ ಕ್ರಿಯಾ ವರದಿ ಮತ್ತು ಸಕ್ಕರೆ ಹಗರಣ ಮತ್ತೆ ಪ್ರತಿಧ್ವನಿಸುವುದಲ್ಲದೆ, ಈ ಬಾರಿ ಉತ್ತರಾಖಂಡ ಚಳವಳಿ, ಉತ್ತರ ಪ್ರದೇಶದಲ್ಲಿ ಆಗಾಗ್ಗೆ ವರದಿಯಾದ ಹಿಂಸಾಚಾರ ಪ್ರಕರಣಗಳು, ವಿದೇಶಗಳಿಗೆ ಇಸ್ರೊ ಮಾಹಿತಿ ಮಾರಾಟ, ನಾಗಪುರದ ಕಾಲ್ತುಳಿತ ಪ್ರಕರಣ ಮುಂತಾದವು ಪ್ರತಿಪಕ್ಷಗಳ ಟೀಕೆಗೆ ಗ್ರಾಸ ಒದಗಿಸಿದ್ದು, ಇಡೀ ಕಲಾಪ ಕೋಲಾಹಲದಲ್ಲಿ ಮುಳುಗುವ ಸಾಧ್ಯತೆಯಿದೆ.

ಖಾರದ ರಕ್ಷಣೆ

ADVERTISEMENT

ಷಿಲ್ಲಾಂಗ್, ಡಿ. 6 (ಯುಎನ್‌ಐ)– ದೇಶದಲ್ಲಿಯೇ ಅತ್ಯಂತ ಖಾರವಾದ ಮೆಣಸಿನಕಾಯಿಯನ್ನು ಮೇಘಾಲಯದಲ್ಲಿ ಬೆಳೆಯಲಾಗುತ್ತಿದೆ. ವಿದೇಶಿ ತಳಿಯ ಈ ಸಣ್ಣ ಮೆಣಸನ್ನು ಈಗ ಮಹಿಳೆಯರು ಅತ್ಯಾಚಾರಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬಳಸುತ್ತಿದ್ದಾರೆ!

ಅಮೆರಿಕದಲ್ಲಿ ಈ ಮೆಣಸಿಗೆ ಭಾರೀ ಬೇಡಿಕೆಯಿದೆ. ಅಲ್ಲಿನ ಮಹಿಳೆಯರು ಈ ಮೆಣಸನ್ನು ಪುಡಿ ಮಾಡಿ ಅದರಿಂದ ಒಂದು ದ್ರವವನ್ನು ತಯಾರಿಸುತ್ತಾರೆ. ಪಿಸ್ತೂಲಿನಂತಹ ಪಿಚಕಾರಿಗೆ ಈ ದ್ರವವನ್ನು ತುಂಬಿ ಅದನ್ನು ಅವರು ತಮ್ಮೊಂದಿಗೆ ಒಯ್ಯುತ್ತಾರೆ. ಯಾರಾದರೂ ಅವರನ್ನು ಲೈಂಗಿಕವಾಗಿ ಶೋಷಿಸಲು ಯತ್ನಿಸಿದರೆ ಈ ಪಿಚಕಾರಿಯಿಂದ ದ್ರವ ಚಿಮ್ಮುತ್ತದೆ.

ಆಹಾರ ಸಾಮಗ್ರಿಗೆ ವೀರಪ್ಪನ್ ಬೇಡಿಕೆ

ಕೊಯಮತ್ತೂರು, ಡಿ. 6 (ಯುಎನ್‌ಐ)– ದಂತಚೋರ ವೀರಪ್ಪನ್ ಇಂದು ಕೊಯಮತ್ತೂರು ಜಿಲ್ಲಾಧಿಕಾರಿ ಸಿ.ವಿ. ಶಂಕರ್ ಅವರನ್ನು ಸಂಪರ್ಕಿಸಿದ್ದಾನೆ. ಇದರಿಂದಾಗಿ ತಮಿಳುನಾಡಿನ ಡಿಎಸ್‌ಪಿ ಚಿದಂಬರನಾಥ್ ಸೇರಿದಂತೆ ಅಪಹರಣ
ಕ್ಕೊಳಗಾಗಿರುವ ಮೂವರನ್ನು ಆತ ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎಂಬ ಆಶಾಭಾವವನ್ನು ಇದು ಮೂಡಿಸಿದೆ.

ಬೇಹುಗಾರಿಕೆ: ಬೆಂಗಳೂರಿನ 17 ಮಂದಿ ಬಂಧನ

ಬೆಂಗಳೂರು, ಡಿ. 6– ಭಾರತದ ಬಾಹ್ಯಾಕಾಶ ತಂತ್ರಜ್ಞಾನ ರವಾನೆ ಬೇಹುಗಾರಿಕೆ ಸಂಬಂಧ ನಗರದ 17 ಮಂದಿಯನ್ನು ಸಿಬಿಐ ಅಧಿಕಾರಿಗಳು ಇಂದು ಬಂಧಿಸಿದ್ದಾರೆ.

ಇತ್ತೀಚೆಗಷ್ಟೇ ಬಂಧನಕ್ಕೆ ಒಳಗಾದ ಚಂದ್ರಶೇಖರನ್ ಅವರ ಕಾರ್ಖಾನೆಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಲ್ಲದೇ, ಚಂದ್ರಶೇಖರನ್ ಪದಾಧಿಕಾರಿಯಾಗಿದ್ದ ‘ಈಸ್ಟ್‌ ಕಲ್ಚರಲ್‌ ಅಸೋಸಿಯೇಷನ್‌’ಗೂ ಅಧಿಕಾರಿಗಳು ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.