ADVERTISEMENT

50 ವರ್ಷಗಳ ಹಿಂದೆ ಸೋಮವಾರ 21.6.1971

50 ವರ್ಷಗಳ ಹಿಂದೆ ಸೋಮವಾರ 21.6.1971

ಪ್ರಜಾವಾಣಿ ವಿಶೇಷ
Published 20 ಜೂನ್ 2021, 21:16 IST
Last Updated 20 ಜೂನ್ 2021, 21:16 IST
   

ಬಾಂಗ್ಲಾ ದೇಶ: ಕಗ್ಗೊಲೆ ನಿಲ್ಲದೆ ಭಾರತ–ಪಾಕ್ ಶೃಂಗಸಭೆ ಅಸಾಧ್ಯ

ಶ್ರೀನಗರ, ಜೂನ್ 20–ಬಾಂಗ್ಲಾ ದೇಶದ ಬಗ್ಗೆ ಯಾವುದೇ ಶೃಂಗ ಸಮ್ಮೇಳನವನ್ನು ಕರೆಯುವ ಮುನ್ನ ‘ಅಲ್ಲಿ ನಡೆಯುತ್ತಿರುವ ಕಗ್ಗೊಲೆ ತತ್‌ಕ್ಷಣವೇ ನಿಲ್ಲಬೇಕಾಗಿದೆ’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.

ಮತ್ತೊಂದು ದೇಶ ಕರೆಯುವ ಇಂತಹ ಶೃಂಗಸಭೆಗೆ ಭಾರತ ಹಾಜರಾಗಬೇಕಾದರೆ ಇದೇ ಪ್ರಥಮ ಪೂರ್ವ ಅಗತ್ಯ ಎಂದು ಕಾಶ್ಮೀರ ಕಣಿವೆಗೆ ನೀಡಿದ್ದ ತಮ್ಮ ಎರಡು ದಿನಗಳ ಭೇಟಿಯ ನಂತರ ನವದೆಹಲಿಗೆ ತೆರಳಲು ವಿಮಾನ ಏರುವ ಮುನ್ನ ನಡೆಸಿದ 30 ನಿಮಿಷಗಳ ವಾರ್ತಾಗೋಷ್ಠಿಯಲ್ಲಿ ಶ್ರೀಮತಿ ಇಂದಿರಾ ಗಾಂಧಿ ಅವರು ತಿಳಿಸಿದರು.

ADVERTISEMENT

ಎಸ್ಸೆಸ್ಪಿ– ಪಿಎಸ್‌ಪಿ ವಿಲೀನ ಒಪ್ಪಂದಕ್ಕೆ ಸಹಿ; ಹೊಸ ಪಕ್ಷದ ಉದಯ

ನವದೆಹಲಿ, ಜೂನ್ 20– ಸಂಯುಕ್ತ ಸಮಾಜವಾದಿ ಪಕ್ಷ ಮತ್ತು ಪ್ರಜಾ ಸಮಾಜವಾದಿ ಪಕ್ಷ ವಿಲೀನದ ಒಪ್ಪಂದವೊಂದಕ್ಕೆ ಸಹಿ ಮಾಡಿದುದರಿಂದ ಇಂದು ‘ಭಾರತದ ಸಮಾಜವಾದಿ ಪಕ್ಷ’ ಅಸ್ತಿತ್ವಕ್ಕೆ ಬಂದಿತು.

ಅಕ್ಕಪಕ್ಕದಲ್ಲಿ ತಮ್ಮ ತಮ್ಮ ಪಕ್ಷಗಳ ಪ್ರಧಾನ ಕಾರ್ಯದರ್ಶಿಗಳೊಡನೆ ಇದ್ದ ಸಂಯಕ್ತ ಸಮಾಜವಾದಿ ಪಕ್ಷದ ಅಧ್ಯಕ್ಷ ಶ್ರೀ ಕರ್ಪೂರಿ ಠಾಕೂರ್ ಮತ್ತು ಪ್ರಜಾ ಸಮಾಜವಾದಿ ಪಕ್ಷದ ಅಧ್ಯಕ್ಷ ಶ್ರೀ ಎನ್.ಜಿ. ಗೋರೆ ಅವರು ಇಂದು ಬೆಳಿಗ್ಗೆ ಒಪ್ಪಂದಕ್ಕೆ ಸಹಿ ಹಾಕಿದರು.

ಕೊಳಲಿಗೆ ಕರೆ

ನವದೆಹಲಿ, ಜೂನ್ 20– ಸಿತಾರ್‌ ನಂತೆಯೇ ಭಾರತೀಯ ಕೊಳಲು ಸಹ ಪಾಶ್ಚಿಮಾತ್ಯ ದೇಶಗಳಲ್ಲಿ ತುಂಬಾಜನಪ್ರಿಯವಾಗುತ್ತಿದೆ.

ಈಗಾಗಲೇ ಸುಮಾರು 90 ಸಾವಿರ ಕೊಳಲುಗಳನ್ನು ರಫ್ತು ಮಾಡಿರುವ ಕೈಗಾರಿಕಾ ಸಹಕಾರ ಸಂಘಗಳ ರಾಷ್ಟ್ರೀಯ ಫೆಡರೇಷನ್ ಇನ್ನೂ 40 ಸಾವಿರ ಕೊಳಲುಗಳಿಗಾಗಿ ಇರುವ ವಿದೇಶಿ ಬೇಡಿಕೆಗಳನ್ನು ಪೂರೈಸಬೇಕಾಗಿದೆ.

ಲಂಡನ್ನಿನ ಆಕ್ಸ್‌ಫಾಮ್ ಆ್ಯಕ್ಟಿವಿಟೀಸ್ ಸಂಸ್ಥೆಯವರೇ ಭಾರತೀಯ ಕೊಳಲುಗಳ ಮುಖ್ಯ ಆಮದುಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.