ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ – ಭಾನುವಾರ 5.1.1997

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 19:30 IST
Last Updated 4 ಜನವರಿ 2022, 19:30 IST
   

ಸಂಸ್ಕೃತ ಅಧ್ಯಯನದಲ್ಲಿ ಆಧುನಿಕ ವಿಜ್ಞಾನ ಬಳಕೆಗೆ ಕರೆ

ಬೆಂಗಳೂರು, ಜ. 4– ಒಂದು ಕಾಲದಲ್ಲಿ ರಾಷ್ಟ್ರದ ಏಕತೆಯ ಸೇತುವೆಯಾದ ಸಂಸ್ಕೃತದ ಅಧ್ಯಯನಕ್ಕೆ ನಾಗಾಲೋಟದಲ್ಲಿ ಸಾಗಿರುವ ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಪ್ರಧಾನಿ ಎಚ್‌.ಡಿ. ದೇವೇಗೌಡರು ಇಂದು ಇಲ್ಲಿ ಕರೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಹತ್ತನೇ ವಿಶ್ವ ಸಂಸ್ಕೃತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸಂಸ್ಕೃತ ಕೇವಲ ಮೇಲ್ವರ್ಗದವರ ಭಾಷೆ ಎಂಬುದನ್ನು ತಿರಸ್ಕರಿಸಿ ‘ಸಂಸ್ಕೃತವನ್ನು ಗ್ರಾಂಥಿಕ ಭಾಷೆಯಾಗಿ ಪುರಾತನ ಸಾಹಿತ್ಯದ ಅಧ್ಯಯನಕ್ಕೆ ಮಾತ್ರ ಮೀಸಲಾಗಿದೆ ಎಂದು ದೇಶದ ಒಳಗೆ ಮತ್ತು ಹೊರಗೆ ಹಲವು ಬಾರಿ ಅಭಿಪ್ರಾಯ ತಳೆದಿದ್ದಾರೆ. ಇದು ಕಲಿತವರ ಹಾಗೂ ಪ್ರಜ್ಞಾವಂತರ ಭಾಷೆ, ಇದಕ್ಕೂ ವಾಸ್ತವ ಬದುಕಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬ ಭಾವನೆಯ ಇದೆ. ಆದರೆ, ಇದು ತಪ್ಪು ಕಲ್ಪನೆ. ಸಂಸ್ಕೃತ ಅರಿಯದವರ ನಿರ್ಲಕ್ಷ್ಯದಿಂದ ಹುಟ್ಟಿರುವ ಕಲ್ಪನೆ ಇದು. ಒಂದು ವಿಷಯವನ್ನು ಸ್ಪಷ್ಟ ವಾಗಿ ಮನೋಜ್ಞವಾಗಿ ಸಂವಾದಿಸಬಲ್ಲ ವಿಶಿಷ್ಟ ಗುಣ ಸಂಸ್ಕೃತಕ್ಕಿದೆ’ ಎಂದು ಹೇಳಿದರು.

ADVERTISEMENT

‘ನಿದ್ರಿಸುವ ಪ್ರಧಾನಿ ನಾನಲ್ಲ’

ಬೆಂಗಳೂರು, ಜ. 4– ‘ಗಾಣದ ಎತ್ತಿನಂತೆ ದುಡಿಯುವುದು ಗೊತ್ತು; ಅದಕ್ಕೆಂದೇ ದಿನಕ್ಕೆ 18–19 ತಾಸು ದುಡಿಯುತ್ತೇನೆ. ಆದರೆ ಮಾಧ್ಯಮಗಳು ನನ್ನನ್ನು ನಿದ್ರೆ ಮಾಡುವ ಪ್ರಧಾನಿ ಎಂದು ಚಿತ್ರಿಸುತ್ತಿವೆ...’

‘ಹಗಲಿರುಳೂ ನನಗೆ ಈ ದೇಶದ ಬಡವರಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂಬ ಹಂಬಲ. ಇದನ್ನೇ ಯೋಚಿಸುತ್ತ ತಲೆಗೋ, ಹಣೆಗೋ ಕೈಯಿಟ್ಟು ಕುಳಿತರೆ ಅದನ್ನೇ ನಿದ್ರೆ ಎಂದು ತಿಳಿದು ಫೋಟೋ ಹಾಕಿ ಬರೆಯುತ್ತಾರೆ... ಬರೆಯಲಿ...’

ರಾಜ್ಯ ಸರ್ಕಾರಿ ನೌಕರರ ಸಂಘದ ಅಮೃತ ಮಹೋತ್ಸವವನ್ನು ಉದ್ಘಾಟಿಸಿ ಪ್ರಧಾನಿ ಎಚ್.ಡಿ. ದೇವೇಗೌಡ ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.