ADVERTISEMENT

25 ವರ್ಷಗಳ ಹಿಂದೆ | ಸೋಮವಾರ 7/8/1995

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 15:49 IST
Last Updated 6 ಆಗಸ್ಟ್ 2020, 15:49 IST

ಕೊಜೆಂಟ್ರಿಕ್ಸ್‌ ತಿರಸ್ಕರಿಸುವ ಪ್ರಶ್ನೆಯೇ ಇಲ್ಲ – ದೇವೇಗೌಡ

ಬೆಂಗಳೂರು, ಆ. 6– ಕೊಜೆಂಟ್ರಿಕ್ಸ್‌ ವಿದ್ಯುತ್‌ ಯೋಜನೆಯನ್ನು ತಿರಸ್ಕರಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರು ರಾಜ್ಯ ಸರ್ಕಾರದ ನಿಲುವನ್ನು ಇಂದು ಇಲ್ಲಿ ಪುನರುಚ್ಚರಿಸಿದರು.

ಇಂತಹ ಯೋಜನಾ ಘಟಕಗಳಿಂದ ಸಮುದ್ರಕ್ಕೆ ಕಲುಷಿತ ನೀರು ಹರಿದು ಅಲ್ಲಿಯ ಜಲಚರಗಳಿಗೆ ಕುತ್ತು ಬರುವ ಸಂಭವವಿದೆ. ಆಧುನಿಕ ತಂತ್ರಜ್ಞಾನ ಬಳಸಿ ಅದನ್ನು ತಡೆಯುವ ಸಲುವಾಗಿ ಸಿಂಗಪುರದ ತಂತ್ರಜ್ಞರನ್ನು ರಾಜ್ಯಕ್ಕೆ ಆಹ್ವಾನಿಸಲಾಗಿದ್ದು ಅವರು ಸದ್ಯದಲ್ಲೇ ಬರುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

ADVERTISEMENT

ಕೊಜೆಂಟ್ರಿಕ್ಸ್‌ ಯೋಜನೆಯ ಹಿಂದೆ ‘ಕಿಕ್‌ ಬ್ಯಾಕ್‌’ (ರುಷುವತ್ತು) ನಡೆದಿದೆ ಎಂಬ ಬಿಜೆಪಿ ಆರೋಪಕ್ಕೆ ಮುಖ್ಯಮಂತ್ರಿ ಅವರು ‘ಕಿಕ್ಕೂ ಇಲ್ಲ ಬ್ಯಾಕೂ ಇಲ್ಲ. ಅನುಭವ ಇರುವವರು ಹೇಳ್ತಾರೆ’ ಎಂದು ಚುಚ್ಚಿ ಹೇಳಿದರು.

ನಗರದ ಆಸ್ತಿ ತೆರಿಗೆ ವಂಚನೆ ಡಿಜಿಐ ತನಿಖೆ

ಬೆಂಗಳೂರು, ಆ.6– ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದಿರುವ ಆಸ್ತಿ ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಲು ಎರಡು ವಾರದೊಳಗೆ ಡಿಜಿಐ ಮಟ್ಟದ ಪೊಲೀಸ್‌ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ದಳ ರಚಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರು ಇಂದು ಇಲ್ಲಿ ಪ್ರಕಟಿಸಿದರು.

ನಗರದ ಬಹಳಷ್ಟು ಶ್ರೀಮಂತರು ಸಣ್ಣ ಕಟ್ಟಡಗಳನ್ನು ನಿರ್ಮಿಸಲು ಪರವಾನಗಿಪಡೆದು, ಆಕ್ರಮವಾಗಿ ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಜೊತೆಗೆ ತೆರಿಗೆಯನ್ನೂ ಹೆಚ್ಚಿಗೆ ನೀಡುತ್ತಿಲ್ಲ. ಈ ಎಲ್ಲ ತೆರಿಗೆ ವಂಚನೆ ಪ್ರಕರಣಗಳಲ್ಲಿ ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೂ ಶಾಮೀಲಾಗಿದ್ದು, ಸಂಬಂಧಪಟ್ಟ ಎಲ್ಲರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸುವುದು ಎಂದು ಅವರು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.