ADVERTISEMENT

50 ವರ್ಷಗಳ ಹಿಂದೆ | ಮಂಗಳವಾರ, 4–8–1970

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 19:30 IST
Last Updated 3 ಆಗಸ್ಟ್ 2020, 19:30 IST

ರೈಲುಗಳ ವಿಳಂಬ ಓಡಾಟಕ್ಕೆ ರಾಜ್ಯಸಭೆ ಸದಸ್ಯರ ಕೋಪ

ನವದೆಹಲಿ, ಆ. 3– ರೈಲುಗಳ ಸಂಚಾರದಲ್ಲಿ ಕಾಲನಿಷ್ಠೆಯಿಲ್ಲದಿರುವ ಬಗ್ಗೆ ಇಂದು ರಾಜ್ಯಸಭೆಯಲ್ಲಿ ಅನೇಕ ಸದಸ್ಯರು ಕೋಪ ವ್ಯಕ್ತಪಡಿಸಿದರು.

ವೇಳೆಗೆ ಸರಿಯಾಗಿ ರೈಲುಗಳ ಸಂಚಾರವಿಲ್ಲದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ರೈಲ್ವೆ ಸಚಿವ ನಂದಾ ಅವರು ವಿವಿಧ ದಿಸೆಯಲ್ಲಿ ಕೈಗೊಂಡಿರುವ ತೀವ್ರ ಕ್ರಮಗಳ ಫಲವಾಗಿ ರೈಲು ಸಂಚಾರ ಸುಧಾರಿಸಬಹುದೆಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

ADVERTISEMENT

ಕೆಲಸಗಾರರಲ್ಲಿ ಶಿಸ್ತಿನ ಕೊರತೆಯಿರುವುದು, ಟೆಲಿಸಂಪರ್ಕ ತಂತಿಗಳು ಮತ್ತು ಸಿಗ್ನಲ್‌ ಉಪಕರಣಗಳ ಕಳವು ಹಾಗೂ ಸಾರ್ವಜನಿಕ ಚಳವಳಿ ಇವುಗಳು ರೈಲುಗಳು ಕಾಲಕ್ಕೆ ಸರಿಯಾಗಿ ಬಂದು ಹೋಗದಿರುವುದಕ್ಕೆ ಕಾರಣವೆಂದು, ಕೆ.ಕೆ. ಮೆಹ್ತಾ ಅವರ ಪ್ರಶ್ನೆಗೆ ರೈಲ್ವೆ ಉಪಮಂತ್ರಿ ಯೂನಸ್‌ ಸಲೀಂ ಉತ್ತರ ಕೊಟ್ಟರು.

ಹಂಗಾಮಿ ಕಾರ್ಮಿಕರ ನೇಮಕ ಪದ್ಧತಿ ರದ್ದಿಗೆ ಸರ್ಕಾರದ ನಿರ್ಧಾರ

ನವದೆಹಲಿ, ಆ. 3– ಹಂಗಾಮಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪದ್ಧತಿಯನ್ನು ರದ್ದುಪಡಿಸಲು ಸರ್ಕಾರ ಉದ್ದೇಶಿಸಿದೆ ಎಂದು ಕೇಂದ್ರದ ಕಾರ್ಮಿಕ ಸಚಿವ ಡಿ.ಸಂಜೀವಯ್ಯ ಅವರು ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.

ಈ ವಿಷಯದ ಬಗ್ಗೆ ಕೆಲವು ಸದಸ್ಯರಲ್ಲಿ ತಪ್ಪು ಅಭಿಪ್ರಾಯ ಮೂಡಿರುವುದರಿಂದ, ಸರ್ಕಾರದ ನಿಲುವು ಏನೆಂಬುದನ್ನು ಸ್ಪಷ್ಟಪಡಿಸುವುದು ಅತ್ಯಗತ್ಯ ಎಂದು ತಾವು ಭಾವಿಸಿದುದಾಗಿಯೂ ಅವರು ನುಡಿದರು.

ಇಪ್ಪತ್ತಕ್ಕೂ ಕಡಿಮೆ ಸಂಖ್ಯೆಯ ಕಾರ್ಮಿಕರನ್ನು ನೇಮಿಸಿಕೊಂಡಿರುವ ಸಂಸ್ಥೆಗಳಿಗೆ ಈ ಶಾಸನದ ವಿನಾಯ್ತಿ ದೊರೆಯುವಂತೆ ಸೆಲೆಕ್ಟ್‌ ಸಮಿತಿ ಶಿಫಾರಸು ಮಾಡಿದೆ. ಹಂಗಾಮಿ ಕಾರ್ಮಿಕರ ರದ್ದು ಮಸೂದೆಯನ್ನು ಈ ಸಮಿತಿಗೆ ಒಪ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.