ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ದಸರಾ ಮತ್ತು ನಾಡಹಬ್ಬದ ಔಚಿತ್ಯ
ಸ್ವಾತಂತ್ರ್ಯಪೂರ್ವದ ಅರಸೊತ್ತಿಗೆ, ಮತ ಧಾರ್ಮಿಕತೆಗಳ ಬದಲು ದೇಶವು ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವವನ್ನು ಆಯ್ದುಕೊಂಡಿದೆ. ಅದಕ್ಕೆ ಅನುಗುಣ ವಾಗಿ ರಾಜ್ಯ, ರಾಜ್ಯೋತ್ಸವ, ನಾಡಹಬ್ಬದ ಪರಿಕಲ್ಪನೆಗಳೂ ಬದಲಾಗಬೇಕಿದೆ. ಸಂಸ್ಥಾನದ ರಾಜರೊಬ್ಬರು ರಾಜ್ಯಪಾಲರಾಗಿ ಮುಂದುವರಿದುದರಿಂದ ಮತಧರ್ಮ ನಿರಪೇಕ್ಷ ರಾಜ್ಯ ವ್ಯವಸ್ಥೆಯಲ್ಲಿ ‘ರಾಜತ್ವ’ದ ಆಚರಣೆಗಳಾದ ನಾಡಹಬ್ಬ, ದಸರಾ ಪಳೆಯುಳಿಕೆಗಳಾಗಿ ಮುಂದುವರಿದಿವೆ. ಈಗ ದಸರಾವನ್ನು ನಾಡಹಬ್ಬವಾಗಿ ಆಚರಿಸುವುದರಲ್ಲಿ ಔಚಿತ್ಯವಿಲ್ಲ. ರಾಜ್ಯೋತ್ಸವವನ್ನು ರಾಜ್ಯದಾದ್ಯಂತ ನಾಡಹಬ್ಬವಾಗಿ ಮತಧರ್ಮ ನಿರಪೇಕ್ಷವಾಗಿ ಎಂದರೆ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಗಳಂತೆಯೇ ಆಚರಿಸಬೇಕಿದೆ. ಆಗ ನಾಡಹಬ್ಬದ ಉದ್ಘಾಟನೆಯೂ ಮತಧರ್ಮ ನಿರಪೇಕ್ಷವಾಗಿ ನಡೆಯುವಂತಾಗು ತ್ತದೆ. ನಾಗರಿಕರು ಮತಧರ್ಮ ರಾಜತ್ವಗಳ ಮುಜುಗರವಿಲ್ಲದೆ ಭಾಗವಹಿಸಲು ಸಾಧ್ಯವಾಗುತ್ತದೆ. ರಾಜವಂಶಸ್ಥರು ಖಾಸಗಿ ಸಿಂಹಾಸನದಲ್ಲಿ ಕೂರಬಹುದಾದರೆ, ಅಂಬಾರಿಯಲ್ಲೂ ಕುಳಿತು ಖಾಸಗಿ ಜಂಬೂ ಸವಾರಿ ಆಚರಿಸಿಕೊಳ್ಳಬಹುದು.
⇒ಪಂಡಿತಾರಾಧ್ಯ, ಮೈಸೂರು
ಹೆತ್ತಕರುಳು ಪದವೇ ಸುಳ್ಳಾಯಿತೆ?
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ ತಾಯಿಯೇ ಒಂದು ದಿನದ ಹಸುಳೆಯನ್ನು ಸಿಸೇರಿಯನ್ ಬ್ಲೇಡಿನಿಂದ ಕತ್ತು ಸೀಳಿ ಸಾಯಿಸಿದ ಸುದ್ದಿ
(ಪ್ರ.ವಾ., ಆಗಸ್ಟ್ 25) ಓದಿ ಆಘಾತವಾಯಿತು. ಹೆತ್ತಕರುಳು ಎನ್ನುವ ಪದವೇ ಸುಳ್ಳಾಯಿತೆ? ಮನುಜಕುಲವೇ ತಲೆ ತಗ್ಗಿಸುವಂತಹ ಈ ಹೇಯಕೃತ್ಯಕ್ಕೆ ಯಾವ ಶಿಕ್ಷೆಯೂ ಸಮನಾಗಲಾರದು.
⇒ಶ್ರೀಧರ್ ಈಳಿ, ಸಾಗರ
‘ಎಚ್‌ಡಿಎಂಸಿ’ ವಿಭಜನೆ ಯಾವಾಗ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜಿಸಿ ಐದು ನಗರ ಪಾಲಿಕೆ ರಚಿಸಲಾಗಿದೆ. ಹಾಗೆಯೇ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯನ್ನು (ಎಚ್‌ಡಿಎಂಸಿ) ವಿಭಜಿಸಿ, ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸಲು ಸಾಮಾನ್ಯ ಸಭೆಯಲ್ಲಿ ಒಮ್ಮತದ ತೀರ್ಮಾನವಾಗಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದ ಪ್ರತ್ಯೇಕ ಪಾಲಿಕೆಗಳ ರಚನೆಗೆ ಸಂಪುಟ ಸಭೆಯಲ್ಲಿ ಅನುಮೋದನೆಯೂ ಸಿಕ್ಕಿದೆ. ಈ ವರ್ಷದ ಜನವರಿಯಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗಿದ್ದರೂ ಈವರೆಗೆ ಅಂತಿಮ ಅಧಿಸೂಚನೆ ಪ್ರಕಟಿಸಿಲ್ಲ. ಇದಕ್ಕಾಗಿ ಸರ್ಕಾರದಿಂದ ರಾಜ್ಯಪಾಲರ ಅನುಮೋದನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅವರಿಂದ ಈವರೆಗೆ ಅಂತಿಮ ಅಧಿಸೂಚನೆ ಅನುಮೋದನೆಗೊಂಡಿಲ್ಲ. ಇದಕ್ಕೆ ಸರ್ಕಾರ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೂ ಕಾರಣವಾಗಿದೆ.
⇒ವೆಂಕಟೇಶ ಮಾಚಕನೂರ, ಧಾರವಾಡ
ಎಲ್ಲ ಪಕ್ಷಗಳದ್ದು ಒಂದೇ ‘ಗುಣಧರ್ಮ’
‘ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲೇ ಕಮಿಷನ್ ಪ್ರಮಾಣ ಹೆಚ್ಚಾಗಿದೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹೇಳಿದ್ದಾರೆ. ಸಂಘದ ಹಿಂದಿನ ಅಧ್ಯಕ್ಷರಾಗಿದ್ದ ಕೆಂಪಣ್ಣ, ಬಿಜೆಪಿ ಸರ್ಕಾರದ ಮೇಲೆ ಶೇ 40ರಷ್ಟು ಕಮಿಷನ್ ಆರೋಪ ಹೊರಿಸಿದ್ದರು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕೆ ಈ ಆರೋಪವನ್ನು ಚತುರತೆಯಿಂದ ಬಳಸಿಕೊಂಡಿತ್ತು.
ಆಡಳಿತ ನಡೆಸುವ ಪಕ್ಷ ಯಾವುದೇ ಇರಲಿ ‘ಗುತ್ತಿಗೆಗೆ ಕಮಿಷನ್’ ನೀಡುವುದು ಇದ್ದೇ ಇರುತ್ತದೆ. ಆಡಳಿತ ನಡೆಸುವವರ ‘ಗುಣಧರ್ಮ’ ಒಂದೇ, ಅಂತಹ ವ್ಯತ್ಯಾಸವೇನೂ ಇಲ್ಲವೆಂಬುದು ಇದರಿಂದ ವೇದ್ಯವಾಗುತ್ತದೆ. ಸರ್ಕಾರ ನಡೆಸುವವರಿಗೆ ದೊಡ್ಡ ಮೊತ್ತದ ಕಮಿಷನ್ ನೀಡಬೇಕಾದ ಗುತ್ತಿಗೆದಾರರಿಂದ ಗುಣಮಟ್ಟದ ಕೆಲಸ ನಿರೀಕ್ಷಿಸುವುದು ಮೂರ್ಖತನ. ಗುಂಡಿಗಳಿಂದ ಎಂದೂ ಮುಕ್ತಿ ಹೊಂದದ ರಾಜಧಾನಿಯ ರಸ್ತೆಗಳೇ ಇದಕ್ಕೆ ಜ್ವಲಂತ ನಿದರ್ಶನ!
⇒ತಿಪ್ಪೂರು ಪುಟ್ಟೇಗೌಡ, ಬೆಂಗಳೂರು
ಸಾಂವಿಧಾನಿಕ ಮಾರ್ಗದಲ್ಲಿ ಹೋರಾಟ
ರಾಜ್ಯದಲ್ಲಿ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ‘ಕರ್ನಾಟಕ ರಾಷ್ಟ್ರ ಸಮಿತಿ’ ಪಕ್ಷದ ನಡೆಯು ಸಾಂವಿಧಾನಿಕ ಮಾರ್ಗದಲ್ಲಿಲ್ಲ ಎಂಬುದು ಕೆಲವರ ಆಕ್ಷೇಪ. ಆದರೆ, ಪಕ್ಷವು ಸಾಂವಿಧಾನಿಕ ಮಾರ್ಗದಲ್ಲಿಯೇ ಭ್ರಷ್ಟ ಅಧಿಕಾರಿಗಳ ಬಣ್ಣವನ್ನು ಬಯಲುಗೊಳಿಸುತ್ತಿದೆ. ಯಾವ ಕಾನೂನಿನಲ್ಲಿಯೂ ಅಕ್ರಮ, ಅನ್ಯಾಯ, ಭ್ರಷ್ಟಾಚಾರ ಪ್ರಶ್ನಿಸಬಾರದು ಹಾಗೂ ಪ್ರಶ್ನಿಸುವುದನ್ನು ವಿಡಿಯೊ ಪ್ರಸಾರ ಮಾಡಬಾರದು ಎಂದು ಹೇಳಿಲ್ಲ. ಕಾನೂನಿನಲ್ಲಿ ಪ್ರಶ್ನಿಸುವುದಕ್ಕೆ ಅವಕಾಶ ಇರುವಾಗ ಅದು ಸಂವಿಧಾನ ಬದ್ಧವೇ ಆಗಿದೆ. ಪಕ್ಷದಿಂದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ 500ಕ್ಕಿಂತಲೂ ಹೆಚ್ಚು ದೂರು ಸಲ್ಲಿಸಲಾಗಿದೆ. ಆದರೆ, ಒಂದು ಪ್ರಕರಣದಲ್ಲೂ ಅಕ್ರಮ ಎಸಗಿದವರಿಗೆ ಶಿಕ್ಷೆಯಾದ ಉದಾಹರಣೆ ಇಲ್ಲ. ನಾಗರಿಕರು ಲಂಚ ನೀಡದೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳ ಬಹುದು ಎಂಬುದನ್ನು ತಿಳಿಸುವುದೇ ನಮ್ಮ ಉದ್ದೇಶ. ಲಂಚ ಪಡೆಯುವವರಿಗೆ ತಮ್ಮ ತಪ್ಪಿನ ಅರಿವು ಮೂಡಿಸುವ ಗುರಿಯನ್ನೂ ಪಕ್ಷ ಹೊಂದಿದೆ.
⇒ಎಲ್. ಜೀವನ್, ಮಾಧ್ಯಮ ಸಂಯೋಜಕ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.