ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಶುಕ್ರವಾರ, 19 ಸೆಪ್ಟೆಂಬರ್ 2025

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 19:30 IST
Last Updated 18 ಸೆಪ್ಟೆಂಬರ್ 2025, 19:30 IST
   

‘ಅನುಕಂಪ’ ಮರೆತ ಶಿಕ್ಷಣ ಇಲಾಖೆ

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಸ್ವೀಕೃತಗೊಂಡ, ಅನುಕಂಪ ಆಧಾರದ ನೌಕರರ ಅರ್ಜಿಗಳನ್ನು 90 ದಿನಗಳೊಳಗೆ ಇತ್ಯರ್ಥಪಡಿಸ ಬೇಕು. ಇದು ಸರ್ಕಾರದ ಆದೇಶ. ಇದಕ್ಕೆ ಹೈಕೋರ್ಟ್‌ ಕೂಡ ಸಮ್ಮತಿಸಿದೆ. ಆದರೆ, ಆಯುಕ್ತರ ಕಚೇರಿಯಲ್ಲಿ 210 ದಿನಗಳಿಂದ ಅರ್ಜಿ ವಿಲೇವಾರಿ ಮಾಡದೆ ವಿಳಂಬ ಮಾಡಲಾಗುತ್ತಿದೆ. ಇದರಿಂದ ಅನುಕಂಪ ಆಧಾರಿತ ಉದ್ಯೋಗ ನಿಯಮ–1996ರ ಮೂಲ ಆಶಯವೇ ಮೂಲೆಗುಂಪಾಗಿದೆ. ಕುಟುಂಬಕ್ಕೆ ಆಸರೆಯಾಗಿರುವ ವ್ಯಕ್ತಿಯನ್ನು ಕಳೆದುಕೊಂಡಾಗ ಇಡೀ ಕುಟುಂಬ ಆಘಾತಕ್ಕೆ ಒಳಗಾಗುತ್ತದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ. ಹಾಗಾಗಿ, ಪ್ರತಿ ಮೂರು ತಿಂಗಳಿಗೊಮ್ಮೆ ಅನುಕಂಪ ಆಧಾರದ ನೌಕರಿ ನೇಮಕಾತಿಯ ಕೌನ್ಸೆಲಿಂಗ್‌ ನಡೆಸಲು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಕ್ರಮವಹಿಸಬೇಕಿದೆ.

ಕೃಷ್ಣೇಗೌಡ ಎಂ.ಆರ್‌., ಮೈಸೂರು

ADVERTISEMENT

*************

ಭೂರಹಿತರಿಗೆ ಜಮೀನು ಬೇಡವೇ?

ರಾಜ್ಯದಲ್ಲಿ ಸಣ್ಣ ರೈತರು, ದಲಿತರು, ಹಿಂದುಳಿದವರು, ಭೂರಹಿತರು ಕಳೆದ ಐವತ್ತು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡು ತ್ತಿರುವುದು ಸರಿಯಷ್ಟೆ. ಇಂತಹವರಿಗೆ ಸಾಗುವಳಿ ಭೂಮಿಯನ್ನು ನಿರ್ದಿಷ್ಟ ಎಕರೆಗೆ ಮಿತಿಗೊಳಿಸಿ ಬಗರ್‌ಹುಕುಂ ಹೆಸರಿನಡಿ ಮಂಜೂರು ಮಾಡಲು ಅವಕಾಶವಿದೆ. 2015ರಲ್ಲಿ ಹೈಕೋರ್ಟ್‌ ಕೂಡ ಸಣ್ಣ ಹಿಡುವಳಿದಾರರನ್ನು ಒಕ್ಕಲೆಬ್ಬಿಸಬಾರದು
ಎಂದು ಆದೇಶಿಸಿದೆ. ಸರ್ಕಾರಿ ಭೂಮಿಯಲ್ಲಿ ವ್ಯವಸಾಯ ಮಾಡುವವರಿಗೆ ಉತ್ತರ
ಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಂದಾಯ ನಿಗದಿ ಮಾಡಿದ್ದಾರೆ. ಆ ಮಾದರಿಯಲ್ಲಿ ಅಥವಾ ಭೋಗ್ಯದ ಆಧಾರದಲ್ಲಿ ಸಾಗುವಳಿದಾರರಿಗೆ ನಮ್ಮಲ್ಲೂ ಜಮೀನು ಮಂಜೂರು ಮಾಡಲು ಸರ್ಕಾರ ಮುಂದಾಗಬೇಕಿದೆ.

– ಎಸ್. ಮಂಜುನಾಥ, ಚಿತ್ರದುರ್ಗ

*************

ಗೌರವಕ್ಕೆ ಚ್ಯುತಿ ತಂದ ಕ್ರಿಕೆಟಿಗರ ನಡೆ

‌ಬದುಕಿನಲ್ಲಿ ಕ್ರೀಡಾಸ್ಫೂರ್ತಿ ಮತ್ತು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಸ್ಪರ್ಧಿಸುವ ಎರಡು ತಂಡಗಳು ಆಟದ ಮುಂಚೆ ಮತ್ತು ಮುಗಿದ ಬಳಿಕ ಪರಸ್ಪರ ಹಸ್ತಲಾಘವ ಮಾಡುವುದು ಸತ್ಸಂಪ್ರದಾಯವಾಗಿ ರೂಢಿಯಲ್ಲಿದೆ. ಏಷ್ಯಾ ಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಆಡಬೇಕಾಗಿ ಬರುವುದರಿಂದ ಸ್ಪರ್ಧೆಯಲ್ಲಿ ಭಾಗವಹಿಸುವ ಜರೂರಾದರೂ ಭಾರತದ ಕ್ರಿಕೆಟ್‌ ತಂಡಕ್ಕೆ ಏನಿತ್ತು? ಸ್ಪರ್ಧಿಸುವ ನಿರ್ಧಾರ ಮಾಡಿದ ಮೇಲೆ ಕ್ರೀಡಾಂಗಣದಲ್ಲಿ ಅನುಸರಿಸುವ ನಡವಳಿಕೆಗಳಿಗೆ ಅನುಗುಣವಾಗಿ ವರ್ತಿಸಬೇಕಿತ್ತು. ಇಷ್ಟಕ್ಕೂ ಪಂದ್ಯಾವಳಿಯು ಯುದ್ಧರಂಗವೇ? ನಮ್ಮ ಕ್ರಿಕೆಟಿಗರು ಈಗ ನಡೆದುಕೊಂಡ ರೀತಿ ಅವರಿಗೂ, ಕ್ರಿಕೆಟಿಗೂ ಮತ್ತು ದೇಶಕ್ಕೂ ಗೌರವ ತರುವಂಥದ್ದಲ್ಲ.

– ಸಾಮಗ ದತ್ತಾತ್ರಿ, ಬೆಂಗಳೂರು 

*************

ಸೂರಿಲ್ಲದವರಿಗೆ ಮಠದ ಸಾರಥ್ಯವೆಲ್ಲಿ?

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಚಾರದ ಕಾವು ಏರುತ್ತಿದ್ದಂತೆ ಕೆಲವು ಪ್ರಭಾವಿ ಮಠಾಧೀಶರು ತಮ್ಮ ಜಾತಿಗಳಿಗೆ ಉಚಿತವಾಗಿ ಸಲಹೆ ನೀಡಲಾರಂಭಿಸಿ ದ್ದಾರೆ. ‘ಸರ್ವ ಜನಾಂಗದ ಶಾಂತಿಯ ತೋಟ’ ಆಗಬೇಕಾದ ಕರ್ನಾಟಕವನ್ನು ಜಾತಿಗಳ ಕಿರು ಒರತೆಗಳಲ್ಲಿ ಮುಳುಗಿಸಿಡುವ ತಂತ್ರ ಸಾಗಿದೆ. ಜಾತಿಯಿಂದ ಮುಂದುವರಿದವರು ಮಠಮಾನ್ಯಗಳ ಮೂಲಕ ದೊಡ್ಡ ಪಾಲನ್ನು ಕಸಿದುಕೊಳ್ಳುವ ಧಾವಂತದಲ್ಲಿದ್ದಾರೆ. ಮಠಾಧೀಶರ ಮಾತಿಗೆ ಸರ್ಕಾರಗಳೇ ತಲೆದೂಗುವ ಕಾಲ ಬಂದಿದೆ. ಮಠಗಳೇ ಇಲ್ಲದ, ನಾಗರಿಕತೆಯ ಸ್ಪರ್ಶವೇ ಇಲ್ಲದೆ ಒಂದೊತ್ತಿನ ಅನ್ನಕ್ಕಾಗಿ ಊರೂರು ಅಲೆಯುವ ಅಲೆಮಾರಿಗಳಿಗೆ ಯಾವ ಗುರುವಿದ್ದಾನೆ, ಗುರುಪೀಠವಿದೆ? ಅಲೆಮಾರಿ ಗಿರಿಜನರ ಬವಣೆ ಕೇಳುವವರಾರು?‌

ಜಾತಿಜನಗಣತಿ ಹೆಸರಿನಲ್ಲಿ ಅಭಿವೃದ್ಧಿ ಬದಿಗೊತ್ತಿ, ಜನರ ಮನಸ್ಸನ್ನು ಎತ್ತೆತ್ತಲೋ ತೇಲಿಸುತ್ತಾ ಮಹಾಜಾಣರು ಆಡಳಿತದಲ್ಲಿ ಮೆರೆಯುವಂತಾಗಿದೆ.

– ತಿರುಪತಿ ನಾಯಕ್, ಕಲಬುರಗಿ 

*************

ಡ್ರಗ್‌ ಪೆಡ್ಲರ್‌ ಜತೆ ಪೊಲೀಸರ ನಂಟು

ಬೆಂಗಳೂರಿನಲ್ಲಿ ಮಾದಕವಸ್ತು ಮಾರಾಟಗಾರರ ಜತೆಗೆ ಪೊಲೀಸರು ಶಾಮೀಲಾಗಿರುವ ಸುದ್ದಿ ಪ್ರಕಟವಾಗಿದೆ. ಇದು ಪೊಲೀಸ್‌ ಇಲಾಖೆ ತಲೆತಗ್ಗಿಸುವ ವಿಚಾರ. ದಂಧೆಕೋರರ ಜೊತೆಗೆ ಸಂಪರ್ಕ ಬೆಸೆದುಕೊಂಡಿರುವ ಪೊಲೀಸ್‌ ಅಧಿಕಾರಿಗಳನ್ನು ಸರ್ಕಾರವು ಕೂಡಲೇ ಸೇವೆಯಿಂದ ವಜಾ ಮಾಡಬೇಕಿದೆ.

ಬೆಂಗಳೂರಿಗಷ್ಟೇ ಮಾದಕವಸ್ತುಗಳ ಮಾರಾಟ ಜಾಲ ಸೀಮಿತವಾಗಿಲ್ಲ. ಶೈಕ್ಷಣಿಕವಾಗಿ ಮುಂದುವರಿದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲೂ ಈ ಜಾಲ ಸಕ್ರಿಯವಾಗಿದೆ. ಡ್ರಗ್‌ ಪೆಡ್ಲರ್‌ಗಳಿಗೆ ಕಾಲೇಜು ವಿದ್ಯಾರ್ಥಿಗಳೇ ಮುಖ್ಯ ಗುರಿ. ಕಾಲೇಜು ಆಡಳಿತ ಮಂಡಳಿಗಳು ಈ ದಂಧೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಕರಣ ಬಯಲಿಗೆ ಬಂದರೆ ಸಂಸ್ಥೆಯ ಮರ್ಯಾದೆ ಬೀದಿಗೆ ಬರಲಿದೆ ಎನ್ನುವುದು ಅವುಗಳಿಗಿರುವ ಭಯ. ಸರ್ಕಾರ ಮಾದಕವಸ್ತು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕು.

– ನೇರಲಗುಡ್ಡ ಶಿವಕುಮಾರ್, ಶಿರಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.