ಕೆ.ಕಸ್ತೂರಿರಂಗನ್
ಸಾಮಾನ್ಯವಾಗಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಜವಾಬ್ದಾರಿಯುತವಾದ ಉನ್ನತ ಹುದ್ದೆಯಲ್ಲಿದ್ದವರು ಆ ಕ್ಷೇತ್ರಗಳಿಗೆ ತಮ್ಮ ಶಕ್ತ್ಯಾನುಸಾರ ಉತ್ತಮವಾದ ಕೊಡುಗೆಯನ್ನು ನೀಡುತ್ತಾರೆ. ಆದರೆ ಅಂತಹ ವ್ಯಕ್ತಿಗಳು ಇತರ ಅನೇಕ ಕ್ಷೇತ್ರಗಳಿಗೂ ಪ್ರಮುಖವಾದ ಕೊಡುಗೆಯನ್ನು ನೀಡುವುದು ಬಹು ವಿರಳ. ಆ ಬಗೆಯ ವಿರಳವಾದ ವ್ಯಕ್ತಿಗಳಲ್ಲಿ ಒಬ್ಬರು ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು. ಭಾರತೀಯ ಅಂತರಿಕ್ಷ ಕಾರ್ಯಕ್ರಮದ ನೇತೃತ್ವವನ್ನು ಸುಮಾರು ಒಂದು ದಶಕದಷ್ಟು ಕಾಲ ವಹಿಸಿ ಅದನ್ನು ಯಶಸ್ವಿಯಾಗಿ ಮುನ್ನಡೆಸಿದ ಕಸ್ತೂರಿರಂಗನ್ ಅವರು ಅಂತರಿಕ್ಷ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲದೇ ಶಿಕ್ಷಣ, ಸಂಶೋಧನೆ, ಪರಿಸರ, ಸಂಸದೀಯ ಪ್ರಜಾಪ್ರಭುತ್ವ, ಆಡಳಿತ, ಆರ್ಥಿಕತೆ, ಸಂವಹನ, ಹೀಗೆ ವೈವಿಧ್ಯಮಯವಾದ ಕ್ಷೇತ್ರಗಳಿಗೆ ಪ್ರಮುಖವಾದ ಕೊಡುಗೆ ನೀಡಿದರು. ಹೀಗಾಗಿ ಇವರ ವ್ಯಕ್ತಿತ್ವ ಅನನ್ಯವಾದುದು.
ಕಸ್ತೂರಿರಂಗನ್ ಅವರು 1940ರ ಅಕ್ಟೋಬರ್ 24ರಂದು ಕೇರಳದ ಎರ್ನಾಕುಲಂನಲ್ಲಿ ಜನಿಸಿದರು. ಇವರ ಬಾಲ್ಯ ಕಳೆದುದು ಮುಂಬೈಯಲ್ಲಿ. ವಿಕ್ರಂ ಸಾರಾಭಾಯಿಯವರು ಸ್ಥಾಪಿಸಿದ ‘ಭೌತಿಕ ಸಂಶೋಧನಾ ಪ್ರಯೋಗಶಾಲೆ’ಯಲ್ಲಿ (ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ) ತಮ್ಮ ಡಾಕ್ಟರೇಟ್ ಪದವಿಯನ್ನು ಭೌತವಿಜ್ಞಾನದಲ್ಲಿ ಪಡೆದ ಕಸ್ತೂರಿರಂಗನ್ ಅವರು ನಂತರ ಅಲ್ಲೇ ಭಾರತೀಯ ಉಪಗ್ರಹ ಕಾರ್ಯಕ್ರಮದ ಪಿತಾಮಹರಾದ ಪ್ರೊ. ಯು ಆರ್.ರಾವ್ ಅವರ ಜೊತೆ ಕೆಲಸಮಾಡುತ್ತಿದ್ದರು. 1972ರಲ್ಲಿ ಪ್ರೊ.ರಾವ್ ಅವರು ಭಾರತದ ಮೊದಲ ಉಪಗ್ರಹ ಯೋಜನೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ಇಲ್ಲಿಗೆ ಬಂದಾಗ ಅವರ ಜೊತೆಗೆ ಬಂದ ವಿಜ್ಞಾನಿಗಳ ಪೈಕಿ ರಂಗನ್ ಅವರು ಪ್ರಮುಖರಾಗಿದ್ದರು. ನಂತರ ‘ಆರ್ಯಭಟ’ ಎಂದು ನಾಮಕರಣ ಮಾಡಲ್ಪಟ್ಟ ಭಾರತದ ಪ್ರಥಮ ಉಪಗ್ರಹಕ್ಕೆ ಅವರು ಪ್ರೊ.ರಾವ್ ಅವರೊಂದಿಗೆ ಶ್ರಮಿಸಿದರು.
ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ ಅಬ್ದುಲ್ ಕಲಾಂ ಅವರೊಂದಿಗೆ ಕಸ್ತೂರಿ ರಂಗನ್
ಆ ಬಳಿಕ ಭಾರತದ ಉಪಗ್ರಹ ಕಾರ್ಯಕ್ರಮ ಬೆಳೆದು, ‘ಭಾಸ್ಕರ’ ಸರಣಿಯ ಎರಡು ಉಪಗ್ರಹಗಳ ನಿರ್ಮಾಣದ ನೇತೃತ್ವವನ್ನು ರಂಗನ್ ಅವರು ವಹಿಸಿದರು. 1979 ಹಾಗೂ 1981ರಲ್ಲಿ ಉಡಾಯಿಸಲ್ಪಟ್ಟ ಆ ಉಪಗ್ರಹಗಳು ಸಂಕೀರ್ಣವಾದ ಮತ್ತು ಅನೇಕ ವರ್ಷಗಳ ಕಾಲ ಅಡೆತಡೆಯಿಲ್ಲದೇ ತಮಗೆ ವಹಿಸಿದ ಕಾರ್ಯವನ್ನು ನಂಬಿಕಾರ್ಹವಾಗಿ ನಿರ್ವಹಿಸುವ ದೊಡ್ಡ ‘ಕಾರ್ಯವಾಹಿ’ (ಆಪರೇಷನಲ್) ಉಪಗ್ರಹಗಳನ್ನು ನಿರ್ಮಿಸುವ ಬಗ್ಗೆ ಭಾರತೀಯ ವಿಜ್ಞಾನಿಗಳಿಗೆ ಆತ್ಮವಿಶ್ವಾಸವನ್ನು ನೀಡಿದವು. ಇದಕ್ಕೆ ಸಂಬಂಧಿಸಿದಂತೆ 1988ರಲ್ಲಿ ಉಡಾಯಿಸಲಾದ ಭಾರತದ ಮೊದಲ ಕಾರ್ಯವಾಹಿ ಭೂವೀಕ್ಷಣಾ ಉಪಗ್ರಹ ಐಆರ್‌ಎಸ್-1ಎ ಯೋಜನೆಯ ನೇತೃತ್ವವನ್ನೂ ರಂಗನ್ ವಹಿಸಿದ್ದರು.
1990ರ ದಶಕದಲ್ಲಿ ಅವರು ಇಸ್ರೊ ಉಪಗ್ರಹ ಕೇಂದ್ರದ (ಇಂದಿನ ಯು.ಆರ್.ರಾವ್ ಉಪಗ್ರಹ ಕೇಂದ್ರ) ನಿರ್ದೇಶಕರಾಗಿ, ಆ ನಂತರ 1994ರಲ್ಲಿ ಭಾರತೀಯ ಅಂತರಿಕ್ಷ ಕಾರ್ಯಕ್ರಮದ ಅಧ್ಯಕ್ಷರ ಹುದ್ದೆಯನ್ನು ಅಲಂಕರಿಸಿದರು. ಆ ನಂತರದ ಒಂದು ದಶಕ ರಂಗನ್ ಅವರು ಆ ಹುದ್ದೆಯಲ್ಲಿದ್ದ ವೇಳೆಯಲ್ಲಿ ಉಂಟಾದ ‘ಯಶಸ್ಸುಗಳ ಸರಣಿ’ಯಿಂದಾಗಿ ಅಂದು ಇಸ್ರೊ ವಲಯಗಳಲ್ಲಿ ಕಸ್ತೂರಿರಂಗನ್ ಅವರ ಚಮತ್ಕಾರ (ಕಸ್ತೂರಿರಂಗನ್ಸ್ ಮ್ಯಾಜಿಕ್)’ ಎಂಬ ಮಾತು ಪ್ರಚಲಿತವಾಗಿತ್ತು.
ಇಂದು ಭಾರತದ, ಅಷ್ಟೇಕೆ ಜಾಗತಿಕ ಮಟ್ಟದಲ್ಲೂ ಒಂದು ನಂಬಿಕಾರ್ಹವಾದ ಉಪಗ್ರಹ ಉಡಾವಣಾ ವಾಹನವೆಂಬ ಖ್ಯಾತಿಯನ್ನು ಪಡೆದಿರುವ ‘ಪಿಎಸ್ಎಲ್‌ವಿ’ ತನ್ನ ಮೊದಲ ಯಶಸ್ಸನ್ನು ಕಂಡದ್ದು ರಂಗನ್ ಅವರು ಇಸ್ರೊ ಅಧ್ಯಕ್ಷರಾಗಿದ್ದಾಗಲೇ. ಅದೇ ವೇಳೆಯಲ್ಲಿ ನಮ್ಮ ದೂರಸಂವೇದಿ ಅಥವಾ ಭೂವೀಕ್ಷಣಾ ಉಪಗ್ರಹಗಳು ಕಳುಹಿಸುತ್ತಿದ್ದ ಚಿತ್ರರೂಪದ ಮಾಹಿತಿಯನ್ನು ಅನೇಕ ಅಭಿವೃದ್ಧಿ ಕೆಲಸಗಳಿಗಾಗಿ ಬಳಸುವ ಪದ್ಧತಿ ನಮ್ಮ ದೇಶದಲ್ಲಿ ಪ್ರಾರಂಭವಾಯಿತು. ಇದರೊಂದಿಗೆ ಆ ಮಾಹಿತಿ ಅಮೆರಿಕವೂ ಸೇರಿದಂತೆ ವಿದೇಶಗಳಲ್ಲೂ ವಿತರಿಸುವ ಕಾರ್ಯ ಆರಂಭವಾಯಿತು.
1999ರಲ್ಲಿ ಉಡಾಯಿಸಲಾದ ಇನ್ಸಾಟ್-2ಇ ಉಪಗ್ರಹದ ಸಂಪರ್ಕ ಸಾಮರ್ಥ್ಯವನ್ನು ಜಾಗತಿಕ ಸಂಸ್ಥೆ ಇಂಟೆಲ್ಸಾಟ್ ಗುತ್ತಿಗೆ ಪಡೆಯಿತೆನ್ನುವ ವಿಷಯ ಭಾರತದ ಅಂತರಿಕ್ಷ ಸಾಮರ್ಥ್ಯದ ಬಗ್ಗೆ ಹೊರಜಗತ್ತಿಗಿರುವ ನಂಬಿಕೆಯನ್ನು ಉತ್ತಮವಾಗಿ ಪ್ರತಿಬಿಂಬಿಸುತ್ತಿತ್ತು. ಇಷ್ಟೇ ಸಾಲದೆಂಬಂತೆ ಭಾರತದ ರಾಕೆಟ್‌ಗಳಲ್ಲಿ ಹೊರದೇಶಗಳ ಉಪಗ್ರಹಗಳನ್ನು ಉಡಾಯಿಸುವ ಕಾರ್ಯವೂ ಕಸ್ತೂರಿರಂಗನ್ ಅವರ ಕಾಲದಲ್ಲೇ ಪ್ರಾರಂಭವಾಯಿತು. 1999ರಲ್ಲಿ ಕೊರಿಯ ಹಾಗೂ ಜರ್ಮನಿಯ ತಲಾ ಒಂದೊಂದು ಉಪಗ್ರಹಗಳು ಪಿಎಸ್‌ಎಲ್‌ವಿಯಲ್ಲಿ ಕಕ್ಷೆಗೆ ಯಶಸ್ವಿಯಾಗಿ ತೆರಳಿದವು.
ನಿಯಾಸ್ ನಿರ್ದೇಶಕರಾಗಿದ್ದ ಕಸ್ತೂರಿರಂಗನ್ ಅವರು 2006ರ ಆಗಸ್ಟ್‌ನಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಖಗೋಳ ವೀಕ್ಷಣಾಲಯವನ್ನು ಉದ್ಘಾಟಿಸಿದ್ದರು
2001ರಲ್ಲಿ ಭಾರತದ ಜಿಎಸ್ಎಲ್‌ವಿ ರಾಕೆಟ್ ವಾಹನ ಉಡಾವಣೆಗೆ ಸಿದ್ಧವಾಯಿತು. ಅದುವರೆವಿಗೂ ನಿರ್ಮಿಸಲಾಗಿದ್ದ ಭಾರತೀಯ ಉಪಗ್ರಹ ಉಡಾವಣಾ ರಾಕೆಟ್‌ಗಳಿಗಿಂತ ಶಕ್ತಿಶಾಲಿಯಾಗಿದ್ದ, ಆಧುನಿಕವಾಗಿದ್ದ ಹಾಗೂ ಸಂಕೀರ್ಣವಾಗಿದ್ದ ಆ ವಾಹನ 2001ರ ಏಪ್ರಿಲ್ 18ರಂದು ತನ್ನ ಮೊದಲ ಯಾನದಲ್ಲೇ ಯಶಸ್ಸನ್ನು ಕಂಡದ್ದು ರಂಗನ್ ಅವರ ಮತ್ತೊಂದು ಹೆಗ್ಗಳಿಕೆ.
ಅದೇ ರೀತಿ ಅದುವರೆವಿಗೂ ಭೂಮಿಯ ಸುತ್ತಲಿನ ಕಕ್ಷೆಯಲ್ಲೇ ‘ಬಂಧಿಯಾಗಿದ್ದ’ ಭಾರತೀಯ ಅಂತರಿಕ್ಷ ಕಾರ್ಯಕ್ರಮವನ್ನು ಅದರಾಚೆ ಚಂದ್ರನತ್ತ ಕೊಂಡೊಯ್ದವರೂ ರಂಗನ್. ಚಂದ್ರಯಾನ-1 ಅನ್ನು ತರ್ಕಬದ್ಧವಾಗಿ ಆಲೋಚಿಸಿ, ಆ ನಿಟ್ಟಿನಲ್ಲಿ ಅಧ್ಯಯನಗಳನ್ನು ಪ್ರಾರಂಭಿಸಿ, ವೈಜ್ಞಾನಿಕ ಹಾಗೂ ಎಂಜಿನಿಯರಿಂಗ್ ಸಮೂಹವನ್ನು ಇದಕ್ಕಾಗಿ ಹುರಿದುಂಬಿಸಿ ಅಂತಿಮವಾಗಿ ಸರ್ಕಾರದಿಂದ ಅದಕ್ಕೆ ಒಪ್ಪಿಗೆಯನ್ನು ಪಡೆವ ಮಹತ್ತರವಾದ ಕಾರ್ಯವನ್ನು ಮಾಡಿದರು. ಇಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿದ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಗಿರುವಾಗ ಈ ದಿಸೆಯಲ್ಲಿ ಚಂದ್ರಯಾನ ಕಾರ್ಯಕ್ರಮಕ್ಕೆ ಭದ್ರವಾದ ಬುನಾದಿಯನ್ನು ಹಾಕಿದ ರಂಗನ್ ಅವರನ್ನು ನಾವು ಸ್ಮರಿಸುವುದು ಅತ್ಯಗತ್ಯ.
ಬೆಂಗಳೂರಿನಲ್ಲಿ 2016ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಂದಿನ ಇಸ್ರೊ ಅಧ್ಯಕ್ಷ
ಎಸ್.ಕಿರಣ್ ಕುಮಾರ್ ಅವರಿಗೆ ಹಸ್ತಲಾಘವ ನೀಡಿದ್ದರು
ತಮ್ಮ ಸಾಧನೆಗಳಿಂದಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಗೌರವಾದರಗಳನ್ನು ಗಳಿಸಿದ ಕಸ್ತೂರಿ ರಂಗನ್ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪುರಸ್ಕಾರಗಳೂ ಸಂದಿವೆ. ಬಹುಮುಖ ವ್ಯಕ್ತಿತ್ವದ ಸಜ್ಜನ ವ್ಯಕ್ತಿ ಕೆ.ಕಸ್ತೂರಿ ರಂಗನ್ ಅವರು ಇನ್ನು ನೆನಪು ಮಾತ್ರ. ಆದರೆ, ಅವರ ಜೀವನ ಹಾಗೂ ಸಾಧನೆ ನಮ್ಮ ವಿದ್ಯಾರ್ಥಿಗಳಿಗೆ ಸದಾಕಾಲ ದಾರಿದೀಪವಾಗಬಲ್ಲದು.
ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆ 2003ರಲ್ಲಿ ಇಸ್ರೊದ ಅಧ್ಯಕ್ಷ ಪದವಿಯಿಂದ ನಿವೃತ್ತರಾದ ನಂತರ ರಂಗನ್ ಅವರು ರಾಜ್ಯಸಭಾ ಸದಸ್ಯರಾದರು. ಆ ನಡುವೆ ಅವರು ವಿಜ್ಞಾನ ಹಾಗೂ ತಂತ್ರಜ್ಞಾನದ ನೀತಿಗಳನ್ನು ರೂಪಿಸುವ ಸಂಬಂಧ ತೋರಿದ ಆಸಕ್ತಿ ಆಡಿದ ಮಾತುಗಳು ಗಮನಾರ್ಹ. ಅದೇ ವೇಳೆಯಲ್ಲಿ ಅವರು ಬೆಂಗಳೂರಿನ ‘ನಿಯಾಸ್’ ಶಿಕ್ಷಣ/ಸಂಶೋಧನಾ ಸಂಸ್ಥೆಯ ನಿರ್ದೇಶಕರೂ ಆಗಿ ಆ ಕ್ಷೇತ್ರಗಳ ಮುನ್ನಡೆಗೂ ಗಮನಾರ್ಹವಾದ ಕೊಡುಗೆ ನೀಡಿದರು. ನಂತರ 2009ರಲ್ಲಿ ಅವರಿಗೆ ಯೋಜನಾ ಆಯೋಗದ ಸದಸ್ಯರಾಗುವ ಅವಕಾಶವೂ ದೊರೆಯಿತು. ಅದರ ಕಾರ್ಯನಿರ್ವಹಣೆಯಲ್ಲೂ ಅವರು ಚಟುವಟಿಕೆಯಿಂದ ಭಾಗವಹಿಸಿ ಸರ್ಕಾರ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸೂಕ್ತವಾದ ಸಲಹೆಗಳನ್ನು ನೀಡುತ್ತಿದ್ದರು. ಶಿಕ್ಷಣ ಕ್ಷೇತ್ರಕ್ಕೇ ಬಂದರೆ ಇಂದಿನ ಹಾಗೂ ಮುಂದಿನ ಭಾರತವನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಿದ ‘2020ರ ರಾಷ್ಟ್ರೀಯ ಶಿಕ್ಷಣ ನೀತಿ’ಯ (ಎನ್‌ಇಪಿ) ನೇತಾರರು ಇವರು ಎನ್ನಲು ಅಡ್ಡಿಯಿಲ್ಲ. ಪಶ್ಚಿಮ ಘಟ್ಟಗಳ ಪರಿಸರದ ರಕ್ಷಣೆಗೆ ಹಾಗೂ ಸುಸ್ಥಿರವಾದ ಅಭಿವೃದ್ಧಿಗೆ ಸಂಬಂಧಿಸಿದಂತೆಯೂ ಇವರು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆಯೂ ಕಸ್ತೂರಿ ರಂಗನ್ ಅವರಿಂದ ಸೇವೆ ಸಂದಿದೆ. 2008ರಲ್ಲಿ ಸ್ಥಾಪಿಸಲಾದ ಕರ್ನಾಟಕದ ‘ಜ್ಞಾನ ಆಯೋಗ’ದ ನೇತೃತ್ವವನ್ನೂ ಅವರು ವಹಿಸಿದ್ದರು.
2003ರಲ್ಲಿ ಇಸ್ರೊದ ಅಧ್ಯಕ್ಷ ಪದವಿಯಿಂದ ನಿವೃತ್ತರಾದ ನಂತರ ರಂಗನ್ ಅವರು ರಾಜ್ಯಸಭಾ ಸದಸ್ಯರಾದರು. ಆ ನಡುವೆ ಅವರು ವಿಜ್ಞಾನ ಹಾಗೂ ತಂತ್ರಜ್ಞಾನದ ನೀತಿಗಳನ್ನು ರೂಪಿಸುವ ಸಂಬಂಧ ತೋರಿದ ಆಸಕ್ತಿ, ಆಡಿದ ಮಾತುಗಳು ಗಮನಾರ್ಹ.
ಅದೇ ವೇಳೆಯಲ್ಲಿ ಅವರು ಬೆಂಗಳೂರಿನ ‘ನಿಯಾಸ್’ ಶಿಕ್ಷಣ/ಸಂಶೋಧನಾ ಸಂಸ್ಥೆಯ ನಿರ್ದೇಶಕರೂ ಆಗಿ ಆ ಕ್ಷೇತ್ರಗಳ ಮುನ್ನಡೆಗೂ ಗಮನಾರ್ಹವಾದ ಕೊಡುಗೆ ನೀಡಿದರು. ನಂತರ 2009ರಲ್ಲಿ ಅವರಿಗೆ ಯೋಜನಾ ಆಯೋಗದ ಸದಸ್ಯರಾಗುವ ಅವಕಾಶವೂ ದೊರೆಯಿತು. ಅದರ ಕಾರ್ಯನಿರ್ವಹಣೆಯಲ್ಲೂ ಚಟುವಟಿಕೆಯಿಂದ ಭಾಗವಹಿಸಿ ಸರ್ಕಾರ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸೂಕ್ತ ಸಲಹೆಗಳನ್ನು ನೀಡುತ್ತಿದ್ದರು.
ಶಿಕ್ಷಣ ಕ್ಷೇತ್ರಕ್ಕೆ ಬಂದರೆ ಇಂದಿನ ಹಾಗೂ ಮುಂದಿನ ಭಾರತವನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಿದ ‘2020ರ ರಾಷ್ಟ್ರೀಯ ಶಿಕ್ಷಣ ನೀತಿ’ಯ (ಎನ್‌ಇಪಿ) ನೇತಾರರು ಇವರು ಎನ್ನಲು ಅಡ್ಡಿಯಿಲ್ಲ. ಪಶ್ಚಿಮ ಘಟ್ಟಗಳ ಪರಿಸರದ ರಕ್ಷಣೆಗೆ ಹಾಗೂ ಸುಸ್ಥಿರವಾದ ಅಭಿವೃದ್ಧಿಗೆ ಸಂಬಂಧಿಸಿದಂತೆಯೂ ಇವರು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆಯೂ ಕಸ್ತೂರಿ ರಂಗನ್ ಅವರಿಂದ ಸೇವೆ ಸಂದಿದೆ. 2008ರಲ್ಲಿ ಸ್ಥಾಪಿಸಲಾದ ‘ಕರ್ನಾಟಕ ಜ್ಞಾನ ಆಯೋಗ’ದ ನೇತೃತ್ವವನ್ನೂ ಅವರು ವಹಿಸಿದ್ದರು.
ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿದ್ದ ಕೆ.ಕಸ್ತೂರಿರಂಗನ್ ಅವರು 2012ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಆಯೋಗದ ಅಂತಿಮ ಶಿಫಾರಸುಗಳನ್ನು ಸಲ್ಲಿಸಿದ ಸಂದರ್ಭ. ಎಚ್.ಪಿ.ಕಿಂಚಾ, ಪ್ರೊ.ಎಂ.ಕೆ.ಶ್ರೀಧರ್ ಜೊತೆಗಿದ್ದರು
ಆರು ರಾಜ್ಯಗಳಲ್ಲಿ ಹರಡಿರುವ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಕಾಪಾಡುವ ಮತ್ತು ಅಲ್ಲಿನ ಜನರ ಅಭಿವೃದ್ಧಿಯ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಕೇಂದ್ರ ಸರ್ಕಾರವು ಪ್ರೊ.ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅದು 2011ರಲ್ಲಿ ವರದಿ ಸಲ್ಲಿಸಿತು. ಅದರ ವಿರುದ್ಧ ಟೀಕೆಗಳು ವ್ಯಕ್ತವಾದಾಗ ಕೇಂದ್ರವು ಕಸ್ತೂರಿರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿತು. ಅದು 2013ರಲ್ಲಿ ವರದಿ ಸಲ್ಲಿಸಿತು. ಅದರಲ್ಲಿ ರಾಜ್ಯದ 20,668 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿತ್ತು. ರಾಜ್ಯದ 10 ಜಿಲ್ಲೆ, 33 ತಾಲ್ಲೂಕುಗಳ 1533 ಗ್ರಾಮಗಳು ಅದರ ವ್ಯಾಪ್ತಿಯಲ್ಲಿದ್ದವು.
1940ರ ಅ.24: ಕೇರಳದ ಎರ್ನಾಕುಲಂನಲ್ಲಿ ಜನನ; ತಂದೆ ಕೃಷ್ಣಸ್ವಾಮಿ ಅಯ್ಯರ್, ತಾಯಿ ವಿಶಾಲಾಕ್ಷಿ
l ಎರ್ನಾಕುಲಂ, ಬಾಂಬೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ; ಬಾಂಬೆ ವಿ.ವಿಯಿಂದ ಭೌತಶಾಸ್ತ್ರದಲ್ಲಿ ಎಂಎಸ್‌ಸಿ
1971: ವಿಕ್ರಮ್ ಸಾರಾಭಾಯ್ ಮಾರ್ಗದರ್ಶನದಲ್ಲಿ ಅಹಮದಾಬಾದ್ ವಿ.ವಿಯಿಂದ ಪಿಎಚ್.ಡಿ
1971: ಇಸ್ರೊದಲ್ಲಿ ಉದ್ಯೋಗಿಯಾಗಿ ಸೇರ್ಪಡೆ; ಮೂರು ದಶಕಗಳ ಕಾಲ ಮಹತ್ವದ ಹುದ್ದೆಗಳ ನಿರ್ವಹಣೆ
1994–2003: ಇಸ್ರೊ 5ನೇ ಅಧ್ಯಕ್ಷರಾಗಿ ಸೇವೆ; ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಅಭಿವೃದ್ಧಿಪಡಿಸಿದ ಶ್ರೇಯಸ್ಸು
l ಭೂ ವೀಕ್ಷಣಾ ಉಪಗ್ರಹಗಳಾದ ಭಾಸ್ಕರ್ 1, ಭಾಸ್ಕರ್ 2 ತಯಾರಿಕೆಯಲ್ಲಿ ಯೋಜನಾ ನಿರ್ದೇಶಕರಾಗಿ ಕೆಲಸ
l ಐಆರ್‌ಎಸ್–1ಎ, 1ಬಿ, 1ಸಿ ಮತ್ತು 1ಡಿ ಮತ್ತು ಇನ್‌ಸ್ಯಾಟ್ 2 ಉಪಗ್ರಹಗಳ ಉಡ್ಡಯನಕ್ಕೆ ಮಾರ್ಗದರ್ಶನ
l ಚೆನ್ನೈ ಐಐಟಿ, ರೂರ್ಕಿ ಐಐಟಿ, ಬೆಂಗಳೂರಿನ ಐಐಎಸ್‌ಸಿ ಆಡಳಿತ ಮಂಡಳಿ ಸದಸ್ಯ; ವಿಶ್ವಸಂಸ್ಥೆಯ ಬಾಹ್ಯಾಕಾಶ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣ ಕೇಂದ್ರ, ರಾಮನ್ ಸಂಶೋಧನಾ ಕೇಂದ್ರ ಮತ್ತು ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿ ಅಧ್ಯಕ್ಷರಾಗಿ ಸೇವೆ
l ದೇಶದ ನಾಲ್ಕು ವಿಜ್ಞಾನ ಅಕಾಡೆಮಿಗಳು ಮತ್ತು ಹಲವು ವಿದೇಶಿ ಅಕಾಡೆಮಿಗಳು, ಸಂಸ್ಥೆಗಳ ಸದಸ್ಯರಾಗಿ ಸೇವೆ
2003–2009: ರಾಜ್ಯಸಭಾ ಸದಸ್ಯ
2004–2009: ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ನಿಯಾಸ್) ನಿರ್ದೇಶಕ
2009-2014: ಯೋಜನಾ ಆಯೋಗದ ಸದಸ್ಯ
2013: ಪಶ್ಚಿಮ ಘಟ್ಟ ಅಧ್ಯಯನ ಸಮಿತಿ ನೇತೃತ್ವ
2020: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕರಡು ಸಮಿತಿಯ ಅಧ್ಯಕ್ಷ
l ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕುಲಪತಿಯಾಗಿ ಕರ್ತವ್ಯ, ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ ಸೇವೆ
ಪ್ರಶಸ್ತಿಗಳು: ಶಾಂತಿಸ್ವರೂಪ್ ಭಟ್ನಾಗರ್ ಪ್ರಶಸ್ತಿ ((1983), ಪದ್ಮಶ್ರೀ (1982), ಪದ್ಮಭೂಷಣ (1992) ಮತ್ತು ಪದ್ಮವಿಭೂಷಣ (2000), ಆರ್ಯಭಟ ಪ್ರಶಸ್ತಿ (2003), ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (2014)
ಶಿಕ್ಷಣ ಕ್ಷೇತ್ರವೂ ಸೇರಿದಂತೆ ಹಲವು ರಂಗಗಳಲ್ಲಿ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ 2008ರ ಸೆ.5ರಂದು ಕೆ.ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಕರ್ನಾಟಕ ಜ್ಞಾನ ಆಯೋಗವನ್ನು ರಚಿಸಲಾಗಿತ್ತು. ಆಯೋಗವು ಶಿಕ್ಷಣ, ಸಾರ್ವಜನಿಕ ಆರೋಗ್ಯ, ಸರ್ಕಾರಿ ಸೇವೆ, ಸಾಮುದಾಯಿಕ ಜ್ಞಾನ ಮತ್ತು ಅಭ್ಯಾಸಗಳು, ಕೌಶಲ ಅಭಿವೃದ್ಧಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ ಮುಂತಾದ ವಲಯಗಳಿಗೆ ಸಂಬಂಧಿಸಿದಂತೆ 89 ಶಿಫಾರಸುಗಳನ್ನು ಮಾಡಿ ವರದಿ ನೀಡಿತ್ತು.
ರಾಜ್ಯದಲ್ಲಿ ಉನ್ನತ ಶಿಕ್ಷಣ ಕ್ಷೇತ್ರ ಅಭಿವೃದ್ಧಿಯಾಗಬೇಕು, ಜ್ಞಾನಾಧಾರಿತ ಸಮಾಜ ನಿರ್ಮಾಣವಾಗಬೇಕು ಎನ್ನುವುದು ಅವರ ಶಿಫಾರಸುಗಳ ಆಶಯವಾಗಿತ್ತು. ಕನ್ನಡದಲ್ಲಿ ‘ಕಣಜ’ ಮಾಹಿತಿ ಕೋಶ ರೂಪಿಸಬೇಕು, ಜನರು ಮತ್ತು ಸಂಸ್ಥೆಗಳು ಪೇಟೆಂಟ್ ಪಡೆಯುವುದನ್ನು ಉತ್ತೇಜಿಸಲು ಪ್ರಶಸ್ತಿ ನೀಡಬೇಕು ಎಂದೂ ಶಿಫಾರಸು ಮಾಡಿದ್ದರು.
ನಂತರ ರಾಜ್ಯದಲ್ಲಿ ಶಿಕ್ಷಣ ನೀತಿ ರೂಪಿಸುವಂತೆ ಸರ್ಕಾರವು ಕರ್ನಾಟಕ ಜ್ಞಾನ ಆಯೋಗವನ್ನು 2015ರಲ್ಲಿ ಕೋರಿತ್ತು. ಆಯೋಗವು ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ 70, ಉನ್ನತ ಶಿಕ್ಷಣದ ಕುರಿತು 79, ಶಿಕ್ಷಣ ಆಡಳಿತಕ್ಕೆ ಸಹಕಾರಿಯಾಗುವ 16 ಶಿಫಾರಸುಗಳನ್ನು ಮಾಡಿತ್ತು. ಮಕ್ಕಳಿಗೆ 1ರಿಂದ 4ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು. 5ನೇ ತರಗತಿಯಿಂದ ಮಾಧ್ಯಮದ ಆಯ್ಕೆಯ ಸ್ವಾತಂತ್ರ್ಯವು ವಿದ್ಯಾರ್ಥಿಗಳಿಗೆ ಇರಬೇಕು ಎನ್ನುವುದು ಅವರ ಮುಖ್ಯ ಶಿಫಾರಸು ಆಗಿತ್ತು.
ಪ್ರಶಸ್ತಿಗಳು: ಶಾಂತಿಸ್ವರೂಪ್ ಭಟ್ನಾಗರ್ ಪ್ರಶಸ್ತಿ ((1983), ಪದ್ಮಶ್ರೀ (1982), ಪದ್ಮಭೂಷಣ (1992) ಮತ್ತು ಪದ್ಮವಿಭೂಷಣ (2000), ಆರ್ಯಭಟ ಪ್ರಶಸ್ತಿ (2003), ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (2014)
ಲೇಖಕ: ಬೆಂಗಳೂರಿನ ಜವಹರಲಾಲ್ ನೆಹರೂ ತಾರಾಲಯದ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.