ADVERTISEMENT

ನುಡಿ ನಮನ | ಎಚ್‌.ಎಸ್. ವೆಂಕಟೇಶಮೂರ್ತಿ: ಮೊದಲ ಓದುಗ, ಏಕವಚನದ ಗೆಳೆಯ

ಬಿ.ಆರ್.ಲಕ್ಷ್ಮಣರಾವ್
Published 30 ಮೇ 2025, 23:30 IST
Last Updated 30 ಮೇ 2025, 23:30 IST
<div class="paragraphs"><p>ಬಿ.ಆರ್ ಲಕ್ಷ್ಮಣ್ ರಾವ್ ಜತೆ ಎಚ್ಚೆಸ್ವಿ</p></div>

ಬಿ.ಆರ್ ಲಕ್ಷ್ಮಣ್ ರಾವ್ ಜತೆ ಎಚ್ಚೆಸ್ವಿ

   

 ಸಂಗ್ರಹ ಚಿತ್ರ: ರಂಜು ಪಿ

ನಾನು ರಚಿಸಿದ ಕೃತಿಗಳಿಗೆ ಮೊದಲ ಓದುಗ ಎಚ್‌.ಎಸ್. ವೆಂಕಟೇಶಮೂರ್ತಿಯಾದರೆ, ಆತ ರಚಿಸಿದ ಕೃತಿಗಳಿಗೆ ಮೊದಲ ಓದುಗ ನಾನು. ನಾವಿಬ್ಬರೂ ಏಕವಚನದ ಗೆಳೆಯರು. ಈಗ ಮೊದಲ ಓದುಗ ಹಾಗೂ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಆತನ ಅಗಲುವಿಕೆ ನನಗೆ ಮಾತ್ರ ಅಲ್ಲ, ಇಡೀ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. 

ADVERTISEMENT

ನಮ್ಮಿಬ್ಬರದ್ದು 50 ವರ್ಷಗಳ ಗೆಳೆತನ. 1976ರಲ್ಲಿ ಮೊದಲ ಬಾರಿ ಭೇಟಿ ಆಗಿದ್ದೆವು. ಅದಕ್ಕೂ ಮೊದಲು ನಾವು ಕವಿತೆಗಳನ್ನು ಪರಸ್ಪರ ಮೆಚ್ಚಿಕೊಂಡಿದ್ದೆವು. ಆ ವೇಳೆ ಆತ ‘ಸುಧಾ’ ವಾರಪತ್ರಿಕೆಯಲ್ಲಿ ಮಕ್ಕಳ ಸಾಹಸದ ಬಗ್ಗೆ ಧಾರವಾಹಿ ಬರೆಯುತ್ತಿದ್ದ. ಅದನ್ನು ನಾನು ತಪ್ಪದೆ ಓದುತ್ತಿದ್ದೆ. ಬೆಂಗಳೂರಿನ ತ್ಯಾಗರಾಜನಗರದ ಗಣೇಶನ ಗುಡಿ ರಸ್ತೆಯಲ್ಲಿದ್ದ ತಂಗಿ ಮನೆಗೆ ನಾನು ಆಗಾಗ ಹೋಗಿ, ಉಳಿದುಕೊಳ್ಳುತ್ತಿದ್ದೆ. ‘ವೆಂಕಟೇಶಮೂರ್ತಿ ಅವರು ನಮ್ಮ ಮನೆಯ ಎದುರಿನ ಮನೆಯಲ್ಲಿಯೇ ಇದ್ದಾರೆ’ ಎಂದು ಬಾವ ಹೇಳಿದರು. ಆಗ ಆತನನ್ನು ಭೇಟಿ ಮಾಡಿದ್ದೆ. ಬಳಿಕ ನಮ್ಮ ಭೇಟಿ ನಿರಂತರ ನಡೆಯಿತು. 

ಆತನ ‘ಸಿಂದಬಾದನ ಆತ್ಮಕಥೆ’ ಕವನ ಸಂಕಲನ ಮೆಚ್ಚಿ ಬರೆದ ಮೊದಲ ಪತ್ರದಲ್ಲಿ ಮಾತ್ರ ಆತನಿಗೆ ಬಹುವಚನವನ್ನು ಬಳಸಿದ್ದೆ. ಅದನ್ನು ಆತ ಸದಾ ಸ್ಮರಿಸುತ್ತಿದ್ದ. 

ಕಾವ್ಯ ಕ್ಷೇತ್ರದಲ್ಲಿ ಇಬ್ಬರೂ ಒಟ್ಟೊಟ್ಟಿಗೆ ಹೆಜ್ಜೆ ಹಾಕಿದೆವು. ಒಬ್ಬರಿಗೊಬ್ಬರು ನೆರವಾಗುತ್ತಿದ್ದೆವು. ಸುಗಮ ಸಂಗೀತ ಕ್ಷೇತ್ರಕ್ಕೂ ಒಟ್ಟಿಗೆ ಪ್ರವೇಶಿಸಿದೆವು. ಆಕಾಶವಾಣಿಯ ಕವಿಗೋಷ್ಠಿಗೆ ಹೋಗಿದ್ದಾಗ ಸಂಗೀತ ವಿಭಾಗದವರ ಮನವಿ ಆಧರಿಸಿ, ಗೀತೆಗಳನ್ನು ರಚಿಸಿದೆವು. ಆಗ ವೆಂಕಟೇಶಮೂರ್ತಿ ‘ಮರೆತ ಸಾಲುಗಳು’ ಹಾಗೂ ನಾನು ‘ಪ್ರೇಮ ಸುಳಿವ ಜಾಡು’ ಕವನ ಸಂಕಲನ ರಚಿಸಿ, ಆಕಾಶವಾಣಿಗೆ ನೀಡಿದೆವು. ಭಾವಗೀತೆ ಕ್ಷೇತ್ರದಲ್ಲಿಯೂ ಒಟ್ಟಿಗೆ ಸಾಗಿದೆವು. 

ಬಡತನದಲ್ಲಿ ಬೆಳೆದು ಬಂದ ಆತ, ಸಂಕಲ್ಪ ಬಲದಿಂದ ಸಾಹಿತ್ಯ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಿದ. ಆತ ನನಗೆ ಅಣ್ಣನ ಸ್ಥಾನದಲ್ಲಿಯೂ ಇದ್ದ. ಏನೇ ಬರೆದರೂ ಆತನಿಗೆ ತೋರಿಸುತ್ತಿದ್ದೆ. ಸೂಕ್ತ ಸಲಹೆ, ಮಾರ್ಗದರ್ಶನ ನೀಡುತ್ತಿದ್ದ. ಈಗ ಬರೆದ ಸಾಲುಗಳನ್ನು ಯಾರಿಗೆ ತೋರಿಸಲಿ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.