ಲೇಖಕಿ ಬಾನು ಮುಷ್ತಾಕ್
–ಪ್ರಜಾವಾಣಿ ಚಿತ್ರ
ಬಾನು ಮುಷ್ತಾಕ್ ಅವರು ಲೇಖಕಿಯಷ್ಟೇ ಅಲ್ಲ, ಪತ್ರಕರ್ತೆ, ವಕೀಲೆ ಮತ್ತು ರೈತ, ದಲಿತ, ಪ್ರಗತಿಪರ ಹೋರಾಟಗಾರ್ತಿ ಕೂಡ. ಲಂಕೇಶ್ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿ ಬರವಣಿಗೆ ಆರಂಭಿಸಿದರು ಅವರು. ಶಿವಮೊಗ್ಗ, ಹಾಸನ, ಮೈಸೂರು ಭಾಗದಲ್ಲಿ ಲಂಕೇಶ್ ಪತ್ರಿಕೆಗೆ ಬರೆಯುತ್ತ ಲಂಕೇಶ್ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಈ ಒಡನಾಟವೇ ಅವರಲ್ಲಿ ಸಾಮಾಜಿಕ ಹಿನ್ನೆಲೆಯೊಂದನ್ನು ರೂಪುಗೊಳಿಸಿತು. ನಂತರದ ದಿನಗಳಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಬರೆಯುವುದು ಕಡಿಮೆಯಾದ ಬಳಿಕ ವಕೀಲ ವೃತ್ತಿ ಆರಂಭಿಸಿದರು. ಜತೆ ಜತೆಯಲ್ಲೇ ಚಂದ್ರಪ್ರಸಾದ್ ತ್ಯಾಗಿ ಅವರೊಂದಿಗೆ ದಲಿತ ಹೋರಾಟ, ವೆಂಕಟೇಶಮೂರ್ತಿ, ಮಂಜುನಾಥದತ್ತ ಅವರೊಂದಿಗೆ ಸೇರಿ ರೈತ ಹೋರಾಟದಲ್ಲಿ ತೊಡಗಿಸಿಕೊಂಡರು. ಇದರ ನಡುವೆ ಒಮ್ಮೆ ಕಾಂಗ್ರೆಸ್ ಪಕ್ಷದಿಂದ ನಗರಸಭೆ ಸದಸ್ಯೆಯೂ ಆಗಿ ಜನರ ಧ್ವನಿಯಾಗಿದ್ದರು. ರಾಜಕೀಯ ಅವರ ಮನಃಸ್ಥಿತಿಗೆ ಒಗ್ಗದ ಕಾರಣ ವಕೀಲ ವೃತ್ತಿಯೊಂದಿಗೆ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಂಡರು. ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡರು.
ಚಿಕ್ಕಮಗಳೂರಿನ ಸೌಹಾರ್ದದ ತಾಣ ಬಾಬಾಬುಡನ್‌ಗಿರಿಯನ್ನು ಸಂಘಪರಿವಾರದ ಗುಂಪು ಕೋಮು ರಾಜಕೀಯದ ಪ್ರಯೋಗಶಾಲೆ ಮಾಡಲು ಹೊರಟಾಗ ಅದರ ವಿರುದ್ಧ ರೂಪುಗೊಂಡ ಚಳವಳಿಯಲ್ಲಿ ಸಕ್ರಿಯರಾಗಿದ್ದರು. 2003ರಲ್ಲಿ ಗಿರೀಶ ಕಾರ್ನಾಡ, ಯು.ಆರ್.ಅನಂತಮೂರ್ತಿ, ಕೆ.ಮರುಳಸಿದ್ದಪ್ಪ, ಗೌರಿ ಲಂಕೇಶ್, ಶೂದ್ರ ಶ್ರೀನಿವಾಸ್ ಇತ್ಯಾದಿ ಪ್ರಮುಖರ ಜತೆಗೆ ಬಾಬಾಬುಡನ್ ಗಿರಿ ಸತ್ಯಶೋಧನಾ ಸಮಿತಿ ಭಾಗವಾಗಿ, ವರದಿ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅದೇ ಸಂದರ್ಭದಲ್ಲಿ ಬಾಬಾಬುಡನ್‌ಗಿರಿ ಉಳಿಸಿ ಹೋರಾಟ ತೀವ್ರಗೊಳ್ಳುತ್ತಿತ್ತು. ಅದರಲ್ಲಿ ಬಾನು ಅವರದ್ದು ಸಕ್ರಿಯ ಪಾತ್ರ. ಮುಸ್ಲಿಂ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧ ಬರವಣಿಗೆಯ ಮೂಲಕವೂ ಬಹಿರಂಗವಾಗಿಯೂ ಧ್ವನಿ ಎತ್ತಿದರು. ಮಹಿಳೆಯರಿಗೆ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಕೇಳಿದ್ದರು. ಆಗ ಅವರ ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಕೊಲೆ ಬೆದರಿಕೆಯೂ ಬಂದಿತ್ತು. ಆದರೂ ಅವರು ಮುಸ್ಲಿಂ ಸಮುದಾಯದ ಮಹಿಳೆಯರಿಗೂ ಧಾರ್ಮಿಕ ಹಕ್ಕು ಬೇಕು ಎಂದು ಪ್ರತಿಪಾದಿಸಿದ್ದರು.
ಜನನುಡಿ ಸಮ್ಮೇಳನ, ಉಡುಪಿ ಚಲೋ ರೀತಿಯ ಹೋರಾಟಗಳನ್ನು ಸಂಘಟಿಸವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಧಾರ್ಮಿಕ ಸೂಕ್ಷ್ಮತೆ, ಅಸ್ಪೃಶ್ಯತೆ, ಕೋಮುವಾದದ ವಿಷಯ ಬಂದಾಗ ನೇರವಾಗಿ ನಿಂತು ಮಾತನಾಡುವ ಗಟ್ಟಿಗಿತ್ತಿ. ಅಸ್ಪೃಶ್ಯತೆ ವಿರುದ್ಧ ನಡೆದ ಸಿಗರನಹಳ್ಳಿ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಮಹಿಳೆಯರ ಮೇಲಿನ ಅನ್ಯಾಯಗಳ ವಿರುದ್ಧ, ಪ್ರಜ್ವಲ್ ರೇವಣ್ಣ ವಿರುದ್ಧ ನಡೆದ ದೊಡ್ಡಮಟ್ಟದ ಹೋರಾಟ ಸಂಘಟಸುವಲ್ಲಿ ಅವರು ತೊಡಗಿಕೊಂಡಿದ್ದರು. ಹಾಸನದಲ್ಲಿ ಪ್ರಗತಿಪರ ಸಮುದಾಯ, ಜನಪರ ಸಮುದಾಯ ಎಂದಾಗ ಬಾನು ಮುಷ್ತಾಕ್ ಹೆಸರು ಮುಖ್ಯವಾಗಿ ಕೇಳಿಬರುತ್ತದೆ.
ಲೇಖಕ: ಸಿಐಟಿಯು ಹಾಸನ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.