ADVERTISEMENT

ಸದಾ ಹಸಿರಿನ ವೃಕ್ಷ ಮಾಧವ ಗಾಡ್ಗೀಳ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2026, 6:55 IST
Last Updated 8 ಜನವರಿ 2026, 6:55 IST
   
ಪರಿಸರ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಶ್ರಮಿಸಿದ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ.

ಆರಂಭಿಕ ಜೀವನ:

ಗಾಡ್ಗೀಳ್ ಅವರು, 1942ರ ಮೇ 24ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. ತಂದೆ ಧನಂಜಯ್ ರಾಮಚಂದ್ರ ಗಾಡ್ಗೀಳ್, ತಾಯಿ ಪ್ರಮೀಳಾ. 1963ರಲ್ಲಿ ಫರ್ಗುಸನ್ ಕಾಲೇಜಿನಲ್ಲಿ ಜೀವಶಾಸ್ತ್ರದಲ್ಲಿ ಪದವಿ ಪಡೆದರು. 1965ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಗಾಡ್ಗೀಳ್ ನೇತೃತ್ವದಲ್ಲಿ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ:

ವಿಶ್ವದ ಜೀವವೈವಿಧ್ಯಗಳ ಕಣಜ, ನಿತ್ಯ ಹರಿದ್ವರ್ಣ ಕಾನನದ ತವರು ಎಂದೆಲ್ಲ ಗುರುತಿಸುವ ಪಶ್ಚಿಮಘಟ್ಟ ನಾಶವಾಗುತ್ತದೆ ಎನ್ನುವ ಆತಂಕದ ಮಾತುಗಳು ಎಲ್ಲೆಡೆ ಕೇಳಿಬಂದ ಪರಿಣಾಮ ಕೇಂದ್ರ ಸರ್ಕಾರ 2009ರಲ್ಲಿ ಮಾಧವ್‌ ಗಾಡ್ಗೀಳ್ ನೇತೃತ್ವದಲ್ಲಿ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯನ್ನು ರಚಿಸಿತ್ತು.

ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿನ ಮಾನವ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು ಎಂದು ಗಾಡ್ಗೀಲ್‌ ನೇತೃತ್ವದ ತಜ್ಞರ ಸಮಿತಿಯು 2011ರಲ್ಲಿ ವರದಿ ನೀಡಿತ್ತು. ಆದರೆ, ಈ ವರದಿಗೆ ಭಾರಿ ಪ್ರತಿರೋಧ ಎದುರಾಗಿತ್ತು. ಘಟ್ಟ ಪ್ರದೇಶದ ಜನರು ಮತ್ತು ರಾಜಕೀಯ ನಾಯಕರು ಕೂಡ ವರದಿಯನ್ನು ವಿರೋಧಿಸಿದ್ದರು.

ADVERTISEMENT

ಬಯೋಸ್ಪಿಯರ್ ರಿಸರ್ವ್ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ

1986ರಲ್ಲಿ ದೇಶದ ಮೊದಲ ಬಯೋಸ್ಪಿಯರ್ ರಿಸರ್ವ್ (ನೀಲಗಿರಿ) ಸ್ಥಾಪಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕಾಗಿ ಅವರು ಪಶ್ಚಿಮ ಘಟ್ಟದ 3 ರಾಜ್ಯಗಳ ಅರಣ್ಯದಲ್ಲಿ ಪಾದಯಾತ್ರೆ ನಡೆಸಿ, ಅಲ್ಲಿನ ಆದಿವಾಸಿಗಳು ಮತ್ತು ಅರಣ್ಯವಾಸಿಗಳೊಂದಿಗೆ ದಿನಗಳನ್ನು ಕಳೆದು ಪರಿಸರ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಿದ್ದರು.

ವೈಜ್ಞಾನಿಕ ಸಲಹಾ ಮಂಡಳಿಯಲ್ಲಿ ಕಾರ್ಯ

1986 ರಿಂದ 1990ರ ವರೆಗೆ ಪ್ರಧಾನ ಮಂತ್ರಿಯವರ (ರಾಜೀವ್ ಗಾಂಧಿ ಮತ್ತು ವಿ.ಪಿ. ಸಿಂಗ್) ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿಯೂ ಗಾಡ್ಗೀಳ್‌ ಕಾರ್ಯ ನಿರ್ವಹಿಸಿದ್ದರು.

ಪ್ರಶಸ್ತಿಗಳು

‘ಚಾಂಪಿಯನ್ಸ್ ಆಫ್ ದಿ ಅರ್ತ್’ ಪ್ರಶಸ್ತಿ

ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಕುರಿತು ಮಾಧವ ಗಾಡ್ಗೀಳ್ ಅವರು ಮಾಡಿರುವ ಕಾರ್ಯಗಳನ್ನು ಪರಿಗಣಿಸಿ ವಿಶ್ವಸಂಸ್ಥೆಯು 2024ರಲ್ಲಿ ‘ಚಾಂಪಿಯನ್ಸ್ ಆಫ್ ದಿ ಅರ್ತ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಜನಸಂಖ್ಯಾ ಒತ್ತಡ, ಹವಾಮಾನ ಬದಲಾವಣೆ ಹಾಗೂ ಅಭಿವೃದ್ಧಿ ಚಟುವಟಿಕೆಯಿಂದ ಪಶ್ಚಿಮ ಘಟ್ಟಗಳಲ್ಲಿ ಆಗುತ್ತಿರುವ ಬದಲಾವಣೆ ಕುರಿತು ಅಧ್ಯಯನ ಮಾಡಲು ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿ ಗಾಡ್ಗೀಳ್ ಕೆಲಸ ಮಾಡಿದ್ದರು. 2011ರಲ್ಲಿ ಈ ಸಮಿತಿಯು ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಬೇಕು ಎಂದು ವರದಿ ಸಲ್ಲಿಸಿತ್ತು.

  • 1981ರಲ್ಲಿ ಪದ್ಮಶ್ರೀ ಮತ್ತು 2006ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಮುಖ ಹೇಳಿಕೆಗಳು

  • ಜನರನ್ನು ಹೊರದಬ್ಬುವ ಮೂಲಕ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಸ್ಥಳೀಯ ಸಮುದಾಯಗಳು ಸಮಸ್ಯೆಯಲ್ಲ, ಅವುಗಳೇ ಪರಿಹಾರ.

  • ಅಭಿವೃದ್ಧಿ ಉಚಿತವಲ್ಲ. ಅದು ಯಾವಾಗಲೂ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳನ್ನು ಒಳಗೊಂಡಿರುತ್ತದೆ.

  • ಪಶ್ಚಿಮ ಘಟ್ಟಗಳು ಕೇವಲ ನಕ್ಷೆಯಲ್ಲಿರುವ ಕೇವಲ ಒಂದು ರೇಖೆಯಲ್ಲ, ಬದಲಾಗಿ ಅದು ಒಂದು ಜೀವ ವ್ಯವಸ್ಥೆ

–ಮಾಧವ ಗಾಡ್ಗೀಳ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.