ADVERTISEMENT

ಮರೆಯಲಾಗದ ಚಿಂತಕ ಪ್ರೊ. ಮುಜಾಫರ್ ಅಸ್ಸಾದಿ, ಅವರ ಹುಟ್ಟೂರಿನ ಸ್ಫೂರ್ತಿಯ ನೆನಪುಗಳು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 11:18 IST
Last Updated 18 ಆಗಸ್ಟ್ 2025, 11:18 IST
<div class="paragraphs"><p>ಪ್ರೊ.ಮುಜಾಫರ್ ಅಸ್ಸಾದಿ</p></div>

ಪ್ರೊ.ಮುಜಾಫರ್ ಅಸ್ಸಾದಿ

   

ಆಗಸ್ಟ್ 24 ಪ್ರೊ. ಮುಜಾಫರ್ ಎಚ್‌. ಅಸ್ಸಾದಿ ಅವರ ಜನ್ಮದಿನ. ಆದರೆ ಈ ವರ್ಷ ಅವರು ನಮ್ಮೊಂದಿಗೆ ಇಲ್ಲ. 2025ರ ಜನವರಿ 04ರಂದು ಅವರು ಹೃದಯ ಶಸ್ತ್ರಚಿಕಿತ್ಸೆ ವೇಳೆ ಅಕಾಲಿಕ ನಿಧನವಾದರು. 63 ವರ್ಷದ ಜೀವನದಲ್ಲಿ ಅರ್ಧ ಭಾಗದಷ್ಟು ಅವರು ವಿದ್ಯಾರ್ಥಿಯಾಗಿದ್ದರು. ಉಳಿದ ಅರ್ಧ ಭಾಗ ವಿಶ್ವ ವಿದ್ಯಾಲಯದಲ್ಲಿ ಭೋಧಕರಾಗಿದ್ದರು.

ಬೋಧಕರಾಗಿದ್ದಾಗ ಅವರ ಚಿಂತನೆ ಮತ್ತು ಬರವಣಿಗೆ ಮಹತ್ವದ್ದಾಗಿತ್ತು. ಕನ್ನಡದಲ್ಲಿ ನೂರಕ್ಕೂ ಹೆಚ್ಚು ಲೇಖನಗಳು, 15ಕ್ಕೂ ಅಧಿಕ ಪುಸ್ತಕಗಳು, 500ಕ್ಕೂ ಮಿಕ್ಕಿ ಸಂಶೋಧನಾ ಮಂಡನೆಗಳ ಮೂಲಕ ಅವರೊಬ್ಬ ಮರೆಯಲಾಗದ ಚಿಂತಕ ಎಂದು ಹೆಸರುಗಳಿಸಿದ್ದರು. ಮೈಸೂರು ವಿ.ವಿ.ಯ ಕಲಾವಿಬಾಗದ ಡೀನ್ ಮತ್ತು ಹಂಗಾಮಿ ಉಪಕುಲಪತಿ ಸ್ಥಾನಗಳನ್ನು ಆಲಂಕರಿಸಿ ಎಲ್ಲರ ಪ್ರೀತಿ ಪಾತ್ರರಾಗಿದ್ದಾರು. ಸಾರ್ವಜನಿಕವಾಗಿ, ಪ್ರಜಾಪ್ರಭುತ್ವದಲ್ಲಿ ಧೃಡ ಭರವಸೆ ಇಟ್ಟು ಸಾಮಾಜಿಕ ನ್ಯಾಯಕ್ಕೆ ಧೈರ್ಯದಿಂದ ನಿಂತ ಬುದ್ಧಿ ಜೀವಿಯಾಗಿಯೂ ಪರಿಚಿತರಾಗಿದ್ದರು.

ADVERTISEMENT

ಆದರೆ ಅವರ ವಿದ್ಯಾರ್ಥಿ ಜೀವನದ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಪ್ರಾಥಮಿಕದಿಂದ ಪದವಿವರೆಗೂ ಓದಿದ್ದು ಹುಟ್ಟೂರಿನಲ್ಲೀಯೇ. ಈ ಸಮಯದಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ಮಾಡಿದರು. ಕನ್ನಡ ಮತ್ತು ಕನ್ನಡ ಸಾಹಿತ್ಯದ ಅಧ್ಯಯನ, ಪದವಿಪೂರ್ವದಲ್ಲಿ ಕಲಿತ ವಿಜ್ಞಾನ ವಿಭಾಗವನ್ನು ಬಿಟ್ಟು ಪದವಿಗೆ ಕಲಾವಿಭಾಗಕ್ಕೆ ಸೇರಿದ್ದು. ಪದವಿಯಲ್ಲಿ ರಾಜಕೀಯ ವಿಜ್ಞಾನ ಆಯ್ಕೆ ಮಾಡಿಕೊಂಡದ್ದು ಇದರಲ್ಲಿ ಮುಖ್ಯವಾದದ್ದು.

ಈಗಿನಂತೆಯೇ ಆಗಲೂ, ಕನ್ನಡ ಮಾಧ್ಯಮ, ಕನ್ನಡ ಸಾಹಿತ್ಯದ ಅಧ್ಯಯನ ಮತ್ತು ಕಲಾವಿಬಾಗದ ರಾಜಕೀಯ ವಿಜ್ಞಾನದಲ್ಲಿ ಆಸಕ್ತಿಯಿಂದ ಕಲಿಯುವರ ಸಂಖ್ಯೆ ಕಡಿಮೆಯೇ ಇತ್ತು. ಆದರೂ, ಅಸ್ಸಾದಿ ಅವರು ಅಸಾಧಾರಣ ಆಸಕ್ತಿ, ನಿರಂತರ ಶ್ರಮ ಮತ್ತು ಗಮನಾರ್ಹ ಸಾಧನೆಯ ಮೂಲಕ ಪ್ರವಾಹದ ವಿರುದ್ಧ ಈಜಿ ತನ್ನ ಜೀವನದ ಸಕ್ಸಸ್ ಸ್ಟೋರಿಯನ್ನು ಕನ್ನಡ ಮತ್ತು ರಾಜಕೀಯ ವಿಜ್ಞಾನದ ಮೂಲಕ ರಚಿಸಿದ್ದರು. ಇದರ ಪೌಂಡೇಷನ್‌ ಅವರ ಹೂಟ್ಟೂರಿನ ಶಿಕ್ಷಣವಾಗಿತ್ತು. ಅದರ ಕೆಲ ವಿವರಗಳನ್ನು ಇಲ್ಲಿಡಲು ಪ್ರಯತ್ನ ಮಾಡಲಾಗಿದೆ.

ಅಸ್ಸಾದಿ ಹುಟ್ಟೂರು ಶಿರ್ವ
ಕರಾವಳಿಯ ಉಡುಪಿ ಜಿಲ್ಲೆಯ, ಕಾಪು ತಾಲೂಕಿನ, ಶಿರ್ವ ಗ್ರಾಮದ ಟಿ. ಖಲೀಮುಲ್ಲಾ ಅಸ್ಸಾದಿ ಮತ್ತು ಸಯ್ಯಿದಾತಾಜುನ್ನಿಸಾರವರ ಕೊನೆಯ ಮಗ ಅಸ್ಸಾದಿ. ಹುಟ್ಟಿದ್ದು 1961ರಲ್ಲಿ.

ಸಮುದ್ರದಿಂದ 6 ಕಿ.ಮಿ. ದೂರವಿರುವ ಶಿರ್ವ ಶಾಂತ ಪರಿಸರದಲ್ಲಿದೆ. ಗ್ರಾಮದ ಮಧ್ಯೆ ಹಾದು ಹೋಗುವ ರಸ್ತೆ ಮತ್ತು ಅದರ ಎರಡೂ ಬದಿಯಲ್ಲಿರುವ ಅಂಗಡಿಗಳು ಗ್ರಾಮದ ಲ್ಯಾಂಡ್ ಮಾರ್ಕ್. ಶಿರ್ವ ಬಸ್ ಸ್ಟ್ಯಾಂಡ್ ಇರುವ ಗ್ರಾಮದ ಪೇಟೆಯ ಭಾಗ 'ಮಂಚಕಲ್' ಎಂಬ ಹೆಸರಿನಿಂದಲೂ ಪ್ರಸಿದ್ಧ. ಒಂದು ಕಾಲದಲ್ಲಿ ಇಲ್ಲಿ ಇದ್ದ ಹುಲ್ಲು ಛಾವಣಿಯ ಅಂಗಡಿಗಳು ಈಗ ಇಲ್ಲ.

ಶಿರ್ವದ ಇನ್ನೊಂದು ಮುಖ ಈ ಗ್ರಾಮದ ಪರಿಧಿಯಲ್ಲಿರುವ ಶಿಕ್ಷಣದ ಸವಲತ್ತುಗಳು. ಸಂಕ್ಷಿಪ್ತವಾಗಿ ಹೇಳುವುದಾದರೆ ಜುಲೈ ತಿಂಗಳಲ್ಲಿ ಈ ಗ್ರಾಮದಲ್ಲಿ 5,000 ವಿದ್ಯಾರ್ಥಿಗಳನ್ನು ಮತ್ತು 200 ಶಿಕ್ಷಕರನ್ನು ನೀವು ಕಾಣಬಹುದು.

ಪ್ರಾಥಮಿಕ ಶಿಕ್ಷಣ ಹಿಂದೂ ಶಾಲೆಯಲ್ಲಿ
ಪ್ರೊ.ಅಸ್ಸಾದಿಯವರ ಶಿಕ್ಷಣದ ನಡೆ ಪಾರಂಭವಾದದ್ದು ಶತಮಾನ ದಾಟಿದ ಶಿರ್ವದ 'ಹಿಂದೂ ಹಿರಿಯ ಪ್ರಾಥಮಿಕ ಶಾಲೆ'ಯಿಂದ. ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ 1974ರಲ್ಲಿ ಮುಗಿಸಿದ್ದರು. ಅಂಗ್ಲಭಾಷೆಯ 'ಮೇರಿ ಹ್ಯಾಡ್ ಎ ಲಿಟಿಲ್ ಲ್ಯಾಂಬ್' ಪದ್ಯವನ್ನು ಅಸ್ಸಾದಿ ಅವರು, 'ಮೇರಿಯ ಕುರಿಮರಿ' ಎಂಬುದಾಗಿ ಕನ್ನಡಕ್ಕೆ ಭಾಷಾಂತರಿಸಿದ್ದು, ಶಾಲೆಯಲ್ಲೇ ಫೇಮಸ್‌ ಆಗಿತ್ತು. ಇದನ್ನೇ, ಮುಂದೆ 'ನಾನು ಆಡಿನ ಮರಿ ಆದ ಕತೆ' ಎಂಬ ಕವನ ಬರೆದು ಟೀಚರ್‌ಗೆ ಅ‍ರ್ಪಿಸಿದ್ದರು.

ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಆಗಿದ್ದ ಸಮಯ ಅವರ ಜೀವನದ ಸಂತೋಷದ ಸಮಯ ಆಗಿತ್ತು. ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳನ್ನು ಶಾಲೆಯ ಒಳಗೆ ಬಳಸಿದರೆ, ತುಳು, ಕೊಂಕಣಿ, ಉರ್ದು ಮಾತನಾಡುವ ಗೆಳೆಯರು ಶಾಲೆಯ ಹೊರಗಡೆ ಇದ್ದರು. ಈ ರೀತಿ 6 ಬಾಷೆಗಳ ಪರಿಚಯ ಬಾಲ್ಯದಲ್ಲೀಯೇ ಅವರಿಗಿತ್ತು.

ಮನೆಯಲ್ಲಿ ತಂದೆ, ತಾಯಿ, ಮೂವರು ಅಣ್ಣಂದಿರು, ಅಕ್ಕ ಮತ್ತು ಅಸ್ಸಾದಿ ಒಟ್ಟಿಗೆ ಇದ್ದರು. ದೊಡ್ಡಣ್ಣ ಸ್ಕೂಲಿನಲ್ಲಿ ಟಾಪರ್‌. ಮೈಸೂರಿನ ಮೇಡಿಕಲ್ ಕಾಲೇಜ್ ಸೇರಿದ್ದರು.

7ನೇ ತರಗತಿಯ ಬೋರ್ಡ ಪರೀಕ್ಷೆಯ ವೇಳೆ ಅಸ್ವಸ್ಥಗೊಂಡಿದ್ದ ಅವರ ತಾಯಿ, 1974ರ ಎಪ್ರಿಲ್ 04ರಂದು ತೀರಿಹೋದರು. ಬೇಸಿಗೆಯಲ್ಲಿ ಅಕ್ಕಪಕ್ಕದ ಮನೆಗಳಿಗೆ ನೀರಿನ ಆಸರೆ ಆಗಿದ್ದ ಅವರ ಮನೆ ಅಂದು ಇಡೀ ಪರಿಸರವನ್ನು ಶೋಕದಲ್ಲಿ ಮುಳುಗಿಸಿತ್ತು.

ತಾಯಿಯ ಸಾವು ಅವರ ಜೀವನದ ಅತೀ ದುಃಖದ ಘಟನೆ ಮಾತ್ರ ಆಗಿರಲಿಲ್ಲ. ಹುಟ್ಟು, ಜೀವನ ಮತ್ತು ಸಾವು ಎಂದರೇನು? ಎಂಬಂತಹ ದೊಡ್ಡ ಪ್ರಶ್ನೆಗಳು ಅವರನ್ನು ಬಾಲ್ಯದಿಂದಲೇ ಕಾಡಲು ಶುರು ಮಾಡಿದವು.

ಸಂತ ಮೇರಿಯ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಹೈಸ್ಕೂಲು
ಸುಮಾರು 8 ವರ್ಷಗಳ ಕಾಲ ಅವರು ಶಿರ್ವದ ಸಂತ ಮೇರಿಯ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿದ್ದರು. ಈ ಸಮಯದಲ್ಲಿ ಅವರಿಗೆ ಪ್ರಭಾವಿ ಶಿಕ್ಷಕರ ಮತ್ತು ಉತ್ತಮ ಪ್ರಾಂಶುಪಾಲದ ಮಾರ್ಗದರ್ಶನ ದೊರೆಕಿತ್ತು. ಹೈಸ್ಕೂಲಿನಿಂದ ಪದವಿ ತನಕದ ಅವರ ಪಯಣ ಹಲವು ಸ್ವಾರಸ್ಯಕರ ಘಟನೆಗಳಿಂದ ಕೂಡಿತ್ತು.

ಪಾಠಕ್ಕಿಂತ ಪಠ್ಯೇತರ ಓದಿಗೆ ಆಕರ್ಷಣೆ
ಹೈಸ್ಕೂಲಿಗೆ ಸೇರಿದ್ದು 1974ರಲ್ಲಿ. ತಾಯಿಯ ಅಗಲುವಿಕೆಯ ನೋವು ಮತ್ತು ಅವರ ಮನಸ್ಸಿನಲ್ಲಿ ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರತಿದಿನ ಲೈಬ್ರರಿಯ ಕಡೆ ಹೆಜ್ಜೆಯಿಟ್ಟರು. ಗ್ರಂಥಪಾಲಕ ಗೋಪಾಲಕೃಷ್ಣ ಶೇರಿಗಾರೊಂದಿಗೆ ಗೆಳೆತನ ಈ ಸಮಯದಲ್ಲಿಯೇ ಆರಂಭವಾಗಿತ್ತು.

ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದ ಕೆ.ಎಮ್. ಹೊಳ್ಳರ ಪಾಠಗಳು ಅವರ ಕನ್ನಡ ಮತ್ತು ಸಾಹಿತ್ಯದ ಆಸಕ್ತಿ ಹೆಚ್ಚಿಸುವ ಕೆಲಸವನ್ನು ಕೂಡಾ ಮಾಡಿತ್ತು. ಅವರ ಪಾಠಗಳಲ್ಲಿ ಹೊಸ ಕನ್ನಡ, ಹಳೆ ಕನ್ನಡ, ಷಟ್ಪದಿ, ರಗಳೆ, ವಚನ, ಗದಾಯುದ್ಧ ಮತ್ತು ಯಕ್ಷಗಾನದ ಪ್ರಸಂಗಗಳು ಕೂಡಾ ಬರುತ್ತಿದ್ದವು.

ಇದರ ಪ್ರಭಾವವೋ ಏನೋ ಪ್ರತಿ ತಿಂಗಳೂ ಹೈಸ್ಕೂಲಿನ 'ಕುಸುಮ ತೂಗುಬತ್ತಳಿಕೆಯಲ್ಲಿ' ಮುಜಾಫರ್ ರವರ ಹನಿಕವನಗಳು ಕಾಣಸಿಗುತ್ತಿದ್ದವು.

ಪದವಿಪೂರ್ವ ಶಿಕ್ಷಣ ಆಸಕ್ತಿ ಇಲ್ಲದ ವಿಜ್ಞಾನ ವಿಭಾಗದಲ್ಲಿ
1977 ದಿಂದ 1979 ತನಕದ ಅವರ ಸೈಂಟ್ ಮೇರೀಸ್ ಜೂನಿಯರ್ ಕಾಲೇಜಿನ ವಿಜ್ಞಾನ ವಿಭಾಗದ ಅವದಿ ಸ್ವಲ್ಪ ಭಿನ್ನವಾಗಿತ್ತು. ಇತರ ವಿದ್ಯಾರ್ಥಿಗಳಂತೆ ಅವರಿರಲಿಲ್ಲ. ಪ್ರತಿವರ್ಷ ಆಗ ವಿಜ್ಞಾನ ವಿಭಾಗದಿಂದ ಎರಡು- ಮೂರು ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಎಳೆಂಟು ವಿದ್ಯಾರ್ಥಿಗಳು ಇಂಜನಿಯರಿಂಗ್‌ಗೆ ಪ್ರವೇಶ ಪಡೆಯುತ್ತಿದ್ದರು. ಆಗ ವಿಜ್ಞಾನ ವಿಭಾಗದಲ್ಲಿ ಕಲಿಸಲು ಉತ್ತಮ ಶಿಕ್ಷಕರಿದ್ದರು. ಆದ್ದರಿಂದ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆದವರಲ್ಲಿ ಅಂಕಗಳಿಕೆಯ ಅಮಲಿನ ಪ್ರಭಾವ ಬೇಗನೆ ಕಂಡು ಬರುತ್ತಿತ್ತು. ಅದರೆ, ಅವರಿಗೆ ಅಂಕಗಳಿಕೆಯಲ್ಲಿ ಆಸಕ್ತಿ ಇರಲಿಲ್ಲ. ಇದಕ್ಕೆ ಸಾಕ್ಷಿಯಾಗಿ ಪಿಯುಸಿಯಲ್ಲಿ ಅವರು ಮಾಡಿದ ಕನ್ನಡದ ಅಯ್ಕೆ ಮತ್ತು ಮುಂದುವರಿಸಿದ ಅವರ ಪಠ್ಯೇತರ ಓದು. ಇದೆರಡನ್ನೂ ಎಲ್ಲರೂ ಗಮನಿಸಿದ್ದರು.

ಅಸ್ಸಾದಿ ಅವರ ನೆಚ್ಚಿನ ಕನ್ನಡ ಉಪನ್ಯಾಸಕರಾಗಿದ್ದ ಶ್ರೀಧರ ಮೂರ್ತಿ ಕೆ.ಎಸ್., 'ಕನ್ನಡ ಪಾಠಗಳನ್ನು ಆಸಕ್ತಿಯಿಂದ ಕೇಳುತ್ತಿದ್ದರು. ನಾನು ಪಾಠದ ಸಂದರ್ಭದಲ್ಲಿ ಹೇಳುತ್ತಿದ್ದ ಇತರ ವಿಚಾರಗಳನ್ನು ವಿಶೇಷ ಆಸಕ್ತಿಯಿಂದ ಅಸ್ವಾದಿಸುತ್ತಿದ್ದರು. ತೇಜಸ್ವಿ, ಲಂಕೇಶ್, ಅನಂತಮೂರ್ತಿ, ಇತರ ಲೇಖಕರ ಕೃತಿಗಳನ್ನು ಓದುವಂತೆ ಸೂಚಿಸುತ್ತಿದ್ದೆ. ಅಂತಹ ಓದನ್ನು ಪಿ.ಯು.ಸಿ. ಹಂತದಲ್ಲೇ ನಿಧಾನವಾಗಿ ರೂಢಿಸಿಕೊಳ್ಳತ್ತಿದ್ದರು. ಇತರ ವಿದ್ಯಾರ್ಥಿಗಳಿಗಿಂತ ಇವರು ವಿಭಿನ್ನರಾಗಿ ಬೆಳೆಯುತ್ತಿದ್ದಾರೆ ಎಂಬುದನ್ನೂ ಗಮನಿಸಿದ್ದೆ' ಎಂದಿದ್ದಾರೆ.

ಶಿರ್ವದಲ್ಲಿ ಹೊಸ ಕಾಲೇಜುಗಳು
1980ರ ಜೂನ್‌ನಲ್ಲಿ ಶಿರ್ವ ಗ್ರಾಮದಲ್ಲಿ ಚಾರಿತ್ರಿಕ ಘಟನೆಯೊಂದು ನಡೆಯಿತು. ಗ್ರಾಮ ಪಂಚಾಯಿತಿಯ ಆವರಣದಲ್ಲಿ ಕರ್ನಾಟಕ ಸರ್ಕಾರ ಎರಡು ಪದವಿ ಕಾಲೇಜುಗಳಿಗೆ ಅನುಮತಿ ನೀಡಿತ್ತು. ಆಗ ಅವರು ವಿಜ್ಞಾನ ವಿಭಾಗ ಬಿಟ್ಟು ತನ್ನ ಹುಟ್ಟೂರಿನಲ್ಲಿ ಆರಂಭವಾದ ಹೊಸ ಸಂತ ಮೇರಿಯ ಕಾಲೇಜಿನಲ್ಲಿ ಜೂನ್ 1980ರಲ್ಲಿ ಬಿ.ಎ. ಪ್ರಥಮ ಬ್ಯಾಚ್ ವಿದ್ಯಾರ್ಥಿಯಾಗಿ ಪ್ರವೇಶ ಪಡೆದು ಕನ್ನಡ ಮತ್ತು ರಾಜಕೀಯ ಶಾಸ್ತ್ರಕ್ಕೆ ಅದ್ಯತೆ ನೀಡಿದ್ದರು.

ಈ ನಿರ್ಧಾರ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಹಿರಿಯ ಶಿಕ್ಷಕರೊಬ್ಬರು ಈ ನಿರ್ಧಾರದ ಬಗ್ಗೆ, 'ಈ ಘಟ್ಟದಲ್ಲಿ ಅವರು ತೆಗೆದುಕೊಂಡ ನಿರ್ಧಾರ ಎಷ್ಟೊಂದು ಮಹತ್ವದ್ದಾಗಿತ್ತು ಎಂದರೆ, ಈ ನಿರ್ಧಾರ ಮಾಡಿರದಿದ್ದರೆ ರಾಜಕೀಯ ವಿಜ್ಞಾನದ ಪ್ರೊಫೆಸರ್ ಮುಜಾಫರ್ ನಮಗೆ ದೊರಕುತ್ತಲೇ ಇರಲಿಲ್ಲವೆನಿಸುತ್ತದೆ. ಅಷ್ಟೇ ಅಲ್ಲ
ಬಿ.ಎ. ವಿದ್ಯಾರ್ಥಿ ಆಗಿದ್ದಾಗ ಅವರ ಕಾರ್ಯಚಟುವಟಿಕೆಗಳು ಬೆಳೆದವು. ಸಂಕೋಚ ಸ್ವಭಾವ ಕಳಚಿಹೋಯಿತು. ತಮ್ಮ ತನವನ್ನು ಗುರುತಿಸಿ ಕೊಂಡರು. ಚೈತನ್ಯ ಊರ್ಧ್ವಮುಖಿಯಾಗಿ ಬೆಳೆಯಲಾರಂಭಿಸಿತು' ಎಂದು ಸ್ಮರಿಸಿದ್ದಾರೆ.

ವಿದ್ಯಾರ್ಥಿಯೂ.. ಕನ್ನಡ ಲೇಖಕನೂ..
ಬಿ.ಎ. ವಿದ್ಯಾರ್ಥಿಯಾಗಿದ್ದಾಗ ಅವರು ಕನ್ನಡದ ಬರವಣಿಗೆಯನ್ನು, ಸಂತ ಮೇರಿ ಕಾಲೇಜಿನ ಆಗಿನ ಕನ್ನಡ ಪ್ರಾಧ್ಯಾಪಕ ಭಾವನಿ ಶಂಕರ್ ಮತ್ತು ಮುಜಾಪರ್ (ಗುರು- ಶಿಷ್ಯರ) ಅವರ ಗೆಳೆತನವನ್ನು ಗಮನಿಸದವರಿಲ್ಲ. ಈ ಗೆಳೆತನದ ನಡೆ ಅಂಕಗಳಿಕೆಯ ಕಡೆ ಹೋಗದೆ ಶಿರ್ವ ಗ್ರಾಮದ ಅರಿವು ಮತ್ತು ಅಗು–ಹೋಗುಗಳ ಕಡೆ ಇತ್ತು.

ಮೂರು ವರ್ಷಗಳಲ್ಲಿ (1980-1983) ಇವರಿಬ್ಬರು ಶಿರ್ವ ಗ್ರಾಮದ ಉದ್ದಗಲವನ್ನು ಆಳೆದಿದ್ದರು. ಯಾವುದನ್ನೂ ಬಿಡದೆ, ಪಾದೂರು, ಕಲತ್ತೂರು, ಕುತ್ಯಾರು, ಸೊರ್ಕಳ, ಗುರುಂಜ, ಪಿಲಾರು, ಪದವು, ಮಟ್ಟಾರು, ಅಟ್ಟಿಂಜ , ನಡಿಬೆಟ್ಟು, ಪಾಂಬೂರು ಮತ್ತು ಬಂಟಕಲ್‌ ಅನ್ನು ಅರಿತಿದ್ದರು. ಶಿರ್ವದ ಬಡ ಕುಟುಂಬಗಳ ಪರಿಚಯ ಮತ್ತು ಅವರು ಎದುರಿಸುತ್ತಿರುವ ಕಷ್ಟಗಳ ಅನುಭವ ಕೂಡ ಅವರಿಗಾಗಿತ್ತು. ಇದರ ಪರಿಣಾಮವೋ ಎನೋ ಇದೇ ಸಮಯದಲ್ಲಿ ಪತ್ರಿಕೆಗಳಲ್ಲಿ ಅವರ ಬರವಣಿಗೆ ಆರಂಭವಾಗಿತ್ತು. ಪ್ರಪಥಮವಾಗಿ ಸಣ್ಣ ಕವನಗಳು ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಪ್ರಕಟಣೆ ಕಂಡದ್ದು. ನಂತರ ಇದನ್ನು 'ಹೊಸ ಚಿಗುರು ಮತ್ತು ಹೂವಿನಂತಹ ಹುಡುಗಿ' ಪುಸ್ತಕ ರೂಪದಲ್ಲಿ ತಂದು ಖ್ಯಾತ ಲೇಖಕ ಪ್ರಶಾಂತ್ ಮಾಡ್ತರ ಕೈಯಿಂದ ನವೆಂಬರ 1982ರಲ್ಲಿ ಕಾಲೇಜಿನಲ್ಲಿದ್ದಾಗಲೇ ಬಿಡುಗಡೆ ಮಾಡಿದ್ದರು.

ರಾಜಕೀಯ ವಿಜ್ಞಾನ ಆಯ್ಕೆ; ದಾರಿದೀಪವಾದ ಶಿಕ್ಷಕರು
ಬಿ.ಎ. ಪದವಿ ವೇಳೆ ರಾಜಕೀಯ ವಿಜ್ಞಾನದ ಆಯ್ಕೆ ಸ್ವಾಭಾವಿಕ ಎನ್ನಲೇ ಬೇಕು. ಏಕೆಂದರೆ, ಒಬ್ಬ ಕ್ರೀಡಾಪಟು ಶಾಲೆ, ತಾಲೂಕು, ಜಿಲ್ಲೆ, ರಾಜ್ಯ, ದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಅಕಾಂಕ್ಷೆ ಇಟ್ಟು ಪ್ರತಿದಿನ ಅಭ್ಯಾಸ ಮಾಡುವ ರೀತಿಯಲ್ಲಿಯೇ, ಮುಜಾಫರ್ ರವರು ಬಾಲ್ಯದಿಂದ ಬೆಳಿಗ್ಗೆ 7 ಗಂಟೆಯ ಮೊದಲೇ ದಿನ ಪತ್ರಿಕೆಯನ್ನು ಓದುವ ಅಭ್ಯಾಸ ಹೊಂದಿದ್ದರು. ಅದರೊಂದಿಗೆ ಸಾಪ್ತಾಹಿಕ, ಅರ್ಧ ಮಾಸಿಕ ಮತ್ತು ಮಾಸಿಕ ಪತ್ರಿಕೆಗಳನ್ನು ಓದುವ ಅಭ್ಯಾಸ ಕೂಡ ಇತ್ತು.

ಪ್ರಬಾವಿಗಳಿಂದ ರಾಜಕೀಯ ವಿಜ್ಞಾನದ ಬೋಧನೆ
ಕಾಲೇಜಿನಲ್ಲಿ ರಾಜಕೀಯ ವಿಜ್ಞಾನ ಕಲಿಸಿದ ಪ್ರಭಾವಿ ಶಿಕ್ಷಕರಲ್ಲಿ ಪ್ರೊ. ಭಾಸ್ಕರ್ ಶೆಟ್ಟಿ, ಪ್ರೊ. ನೆರಿ ಕರ್ನೆಲಿಯೋ ಹಾಗೂ ಪುತ್ತೂರಿನ ಕೆ. ಸುಬ್ರಮಣ್ಯ ಪ್ರಮುಖರು.

ಅತ್ಯುತ್ತಮ ಅಂಕಗಳೊಂದಿಗೆ 1983ರಲ್ಲಿ ಪದವಿ ಪೂರ್ಣಗೊಳಿಸಿದ ಅಸ್ಸಾದಿ, ಮಂಗಳೂರು ವಿವಿಯಿಂದ ರಾಜಯಕೀಯ ವಿಜ್ಞಾನ ವಿಷಯದಲ್ಲಿ 1985ರಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು. 1987ರಲ್ಲಿ ದೆಹಲಿಯ ಜೆಎನ್‌ಯುನಿಂದ ಎಂ.ಫಿಲ್, 1992ರಲ್ಲಿ ಪಿಎಚ್.ಡಿ. ಹಾಗೂ ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದಿಂದ 1996-1997ರಲ್ಲಿ ಪೋಸ್ಟ್ ಡಾಕ್ಟೊರಲ್ ಪದವಿ ಪಡೆದಿದ್ದರು.

ಈ ರೀತಿ 25 ವರ್ಷಗಳ ವಿದ್ಯಾರ್ಥಿ ಜೀವನದಲ್ಲಿ ಕನ್ನಡ ಮತ್ತು ರಾಜಕೀಯ ಶಾಸ್ತ್ರ ದಿಕ್ಸೂಚಿಯ ಕೆಲಸ ಮಾಡಿದ್ದೂ ಸತ್ಯ. ಕರ್ನಾಟಕ ರೈತರ ಸಮಸ್ಯೆಗಳ ಕುರಿತ ಅಧ್ಯಯನ, ರಾಜಕೀಯ ವಿಶ್ಲೇಷಣೆಗಳನ್ನೊಳಗೊಂಡ ಕನ್ನಡ ಲೇಖನಗಳು, ಬೋಧನೆಯ ಕಾರ್ಯಕ್ಕೂ ಪೂರಕವಾಗಿದ್ದವು. ಅಷ್ಟೇ ಅಲ್ಲ, ಅವರ ಜೀವನಕ್ಕೆ ಸಂತೋಷ ಮತ್ತು ಯಶಸ್ಸುನ್ನು ದೊರಕಿಸಿಕೊಟ್ಟವು.

ವಿದ್ಯಾರ್ಥಿಗಳ ಆಸಕ್ತಿಯ ಕೊರತೆ ಕಾರಣದಿಂದ ಕನ್ನಡ ಮಾಧ್ಯಮ ಶಾಲೆಗಳು ಮತ್ತು ಕಲಾ ವಿಭಾಗದ ರಾಜಕೀಯ ಶಾಸ್ತ್ರದ ವಿಭಾಗಗಳು ತುಂಬಾ ಕಠಿಣ ಪರಿಸ್ಥಿತಿಯಲ್ಲಿವೆ. ಈ ಹೊತ್ತಿನಲ್ಲಿ ಅಸ್ಸಾದಿಯವರ ಹೂಟ್ಟೂರಿನ ವಿದ್ಯಾರ್ಥಿ ಜೀವನ, ಕನ್ನಡ ಮತ್ತು ರಾಜಕೀಯ ವಿಜ್ಞಾನ ಅಧ್ಯಯನದ 'ಯಶಸ್ಸಿನ ಕಥೆಯ' ಉದಾಹರಣೆಯು ಸ್ಪೂರ್ತಿದಾಯಕವಾಗಹುದು.

(ಲೇಖಕ ಫ್ರೊ. ಆಸ್ಸಾದಿಯವರ ಸಹಪಾಠಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.