ADVERTISEMENT

Raj Kapoor Birth Centenary: ‘ಶೋಮ್ಯಾನ್’ ಶತಮಾನೋತ್ಸವ

ವಿಶಾಖ ಎನ್.
Published 22 ಡಿಸೆಂಬರ್ 2024, 0:35 IST
Last Updated 22 ಡಿಸೆಂಬರ್ 2024, 0:35 IST
<div class="paragraphs"><p>ರಾಜ್‌ ಕಪೂರ್‌ </p></div>

ರಾಜ್‌ ಕಪೂರ್‌

   

ಎಐ ಚಿತ್ರಗಳು : ಕಣಕಾಲಮಠ

ಚಾರ್ಲಿ ಚಾಪ್ಲಿನ್ ಆಂಗಿಕ ಶೈಲಿ, ಭಾರತದ ನೆಲದ ಬಡತನ–ಭ್ರಷ್ಟಾಚಾರದ ಬಿಂಬವಾಗುವ ನಾಯಕ, ನಾಯಕಿಯರ ಸೌಂದರ್ಯ ದರ್ಶನ... ಎಲ್ಲವನ್ನೂ ಬೆಳ್ಳಿಪರದೆ ಮೇಲೆ ತಮ್ಮದೇ ಶೈಲಿಯಲ್ಲಿ ಕಟ್ಟಿಕೊಟ್ಟ ನಿರ್ಮಾಪಕ–ನಿರ್ದೇಶಕ–ನಟ ರಾಜ್ ಕಪೂರ್ ಅವರ ಜನ್ಮ ಶತಮಾನೋತ್ಸವ ಶುರುವಾಗಿದೆ. ಈ ಸಂದರ್ಭದಲ್ಲಿ ಅವರ ಸಿನಿಪಯಣದ ಪಕ್ಷಿನೋಟವಿದು...

‘ಮೇ ರಾ ಜೂತಾ ಹೈ ಜಪಾನಿ, ಯೇ ಪತ್ಲೂನ್ ಇಂಗ್ಲಿಸ್ತಾನಿ, ಸರ್ಪೆ ಲಾಲ್ಟೋಪಿ ರೂಸಿ, ಫಿರ್ಭಿ ದಿಲ್ಹೈ ಹಿಂದೂಸ್ಥಾನಿ’ (ನನ್ನ ಬೂಟು ಜಪಾನಿನದ್ದು, ಪ್ಯಾಂಟು ಇಂಗ್ಲಿಷ್ ದೇಶದ್ದು, ತಲೆ ಮೇಲಿನ ಕೆಂಪು ಟೋಪಿ ರಷ್ಯಾದ್ದು, ಇಷ್ಟಾದರೂ ಹೃದಯ ಹಿಂದೂಸ್ಥಾನದ್ದು)...

ADVERTISEMENT

‘ಶ್ರೀ 420’ ಸಿನಿಮಾ ಹಾಡಿನ ಈ ಸಾಲುಗಳು ರಾಜ್ ಕಪೂರ್ ದೃಷ್ಟಿಕೋನ ಕಾಣಿಸಬಲ್ಲ ಒಂದು ಪುಟ್ಟ ಟಿಪ್ಪಣಿ ಇದ್ದಂತೆ. ಮುಕೇಶ್ ಕಂಠದ ಈ ಹಾಡನ್ನು ರಾಜ್ ಕಪೂರ್ ಕೂಡ ಪದೇಪದೇ ಉಲ್ಲೇಖಿಸುತ್ತಿದ್ದರು. ದೇಶ, ರಾಜ್ಯವನ್ನು ಅವರು ಹೇಗೆ ಪರಿಭಾವಿಸಿದ್ದರು ಎನ್ನುವುದರ ಆಂತರ್ಯವನ್ನು ಅಡಗಿಸಿಟ್ಟುಕೊಂಡ ಹಾಡು ಇದು.

ರಾಜ್ ಕಪೂರ್ ಅವರೊಳಗೆ ಸಿನಿಮಾ ಪ್ರೀತಿ ಇತ್ತು. ದೇಶಭಕ್ತಿ ಇತ್ತು. ಬದುಕು ಕಟ್ಟಿಕೊಟ್ಟ ನೋವು–ನಲಿವಿನ ಬುತ್ತಿ ಇತ್ತು. ಅವನ್ನೆಲ್ಲ ಪರದೆಯ ಮೇಲೆ ತಂದ ಕಾರಣಕ್ಕೇ ಅವರು ‘ಶೋಮ್ಯಾನ್’ ಆದದ್ದು. ಪೆಶಾವರದ ಕಪೂರ್ ಹವೇಲಿಯಲ್ಲಿ ಹುಟ್ಟಿದವರು ರಾಜ್ ಕಪೂರ್. ಆಮೇಲೆ ಅವರ ಕುಟುಂಬ ಬಾಂಬೆಗೆ ಸ್ಥಳಾಂತರಗೊಂಡಿತು.

ಪೃಥ್ವಿರಾಜ್ ಕಪೂರ್ ಮಗ ಎನ್ನುವ ಕಾರಣಕ್ಕೆ ರಾಜ್ ಕಪೂರ್ ಅವರಿಗೆ ಉಣ್ಣಲು ಬೆಳ್ಳಿ ತಟ್ಟೆ ಸಿಕ್ಕಿತೆನ್ನುವುದು ನಿಜ. ಆದರೆ, ಸಿನಿಮಾ ಅವಕಾಶವನ್ನು ಯಾರೂ ಬೆಳ್ಳಿತಟ್ಟೆಯಲ್ಲಿ ಇಟ್ಟು ಕೊಡಲಿಲ್ಲ.

ಮೊದಲಿಗೆ, ಬಾಂಬೆ ಟಾಕೀಸ್ ಸ್ಟುಡಿಯೊದಲ್ಲಿ 1930ರ ದಶಕದಲ್ಲಿ ಕ್ಲಾಪ್ ಬಾಯ್ ಆಗಿ ರಾಜ್ ಕಪೂರ್ ಸಿನಿಮಾ ಸೂಕ್ಷ್ಮಗಳನ್ನು ಕಲಿಯಲು ಆರಂಭಿಸಿದರು. ಮಾಗುತ್ತಾ ಹೋದಂತೆ, ನಿರ್ದೇಶಕ ಕೇದಾರ್ ಶರ್ಮ ಅವರಿಗೆ ಸಹಾಯಕರಾಗಿ ಕೆಲಸ ಶುರುಮಾಡಿದರು. ಅದೇ ನಿರ್ದೇಶಕ 1947ರಲ್ಲಿ ‘ನೀಲ್ ಕಮಲ್’ ಸಿನಿಮಾದಲ್ಲಿ ಅಭಿನಯಿಸುವ ಅವಕಾಶವನ್ನು ರಾಜ್‌ ಕಪೂರ್ ಅವರಿಗೆ ನೀಡಿದರು; ಅದೂ ನಾಯಕನಾಗಿ. ಎದುರಲ್ಲಿ ನಾಯಕಿಯಾಗಿ ಮಧುಬಾಲಾ ಇದ್ದರು. ಇಬ್ಬರಿಗೂ ಮುಖ್ಯ ಪಾತ್ರಗಳಲ್ಲಿ ಮೊದಲ ಯತ್ನ. ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಅದಕ್ಕೂ ಬಹಳ ಹಿಂದೆ, ಹತ್ತನೇ ವಯಸ್ಸಿನಲ್ಲಿಯೇ ರಾಜ್‌ ಕಪೂರ್, ‘ಇಂಕಿಲಾಬ್’ ಎಂಬ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

ಆರ್.ಕೆ. ನಿರ್ಮಾಣ ಸಂಸ್ಥೆ ಕಟ್ಟಿ, ತಾವೇ ಆ ಬ್ಯಾನರ್‌ನಲ್ಲಿ ನಿರ್ಮಾಪಕರಾಗಿ ‘ಆಗ್’ ಹಿಂದಿ ಸಿನಿಮಾ ಮೇಲೆ ಬಂಡವಾಳ ಹೂಡಿದಾಗ, ಇಂದರ್ ರಾಜ್ ಆನಂದ್ ಎಂಬ ಬರಹಗಾರ ಅವರಿಗೆ ಸ್ಕ್ರಿಪ್ಟ್ ಮಾಡಿಕೊಟ್ಟರು. ವಕೀಲರ ಕುಟುಂಬದ ಹುಡುಗನೊಬ್ಬ ರಂಗಮೋಹಿಯಾದ ನಂತರದ ಬದುಕಿನ ಕಥನವನ್ನು ಫ್ಲ್ಯಾಷ್‌ಬ್ಯಾಕ್‌ನಲ್ಲಿ ಹೇಳುವ ಕಥೆ ಇರುವ ಸಿನಿಮಾ ಅದು. ಆ ಸಿನಿಮಾದ ನಿರ್ದೇಶಕರೂ ಆಗಿ ರಾಜ್‌ ಕಪೂರ್ ಸಾಣೆಗೆ ಒಟ್ಟಿಕೊಂಡರು. ಆ ಕಾಲಘಟ್ಟದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಸಿನಿಮಾ ನಿರ್ದೇಶಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಅವರದ್ದಾಯಿತು. ಆಗಿನ್ನೂ ಅವರಿಗೆ 24 ವರ್ಷ. ಆ ಸಿನಿಮಾ ಕೂಡ ಗೆಲ್ಲಲಿಲ್ಲ.

ರಾಜ್‌ ಕಪೂರ್ ಸಿನಿಮಾ ಸಾಹಸ ಟೇಕಾಫ್ ಆಗುವ ಮೊದಲೇ ಕೃಷ್ಣಾ ಮಲ್ಹೋತ್ರ ಅವರೊಟ್ಟಿಗೆ ವಿವಾಹವಾಗಿತ್ತು. ರಾಜ್‌ ಕಪೂರ್‌ ಅವರಿಗೆ ಐವರು ಮಕ್ಕಳು–ರಣಧೀರ್ ಕಪೂರ್, ರಿಶಿ ಕಪೂರ್, ರಾಜೀವ್ ಕಪೂರ್, ರಿತು ನಂದಾ ಹಾಗೂ ರಿಮಾ ಜೈನ್. ಮೂವರೂ ಪುತ್ರರು ಸಿನಿಮಾ ನಟರಾಗಿ ತಂದೆಯ ಹಾದಿಯಲ್ಲೇ ನಡೆದರು. ರಣಧೀರ್ ಕಪೂರ್ ಅವರ ಮಕ್ಕಳಾದ ಕರಿಷ್ಮಾ ಹಾಗೂ ಕರೀನಾ ಕಪೂರ್ ಕೂಡ ನಟಿಯರಾಗಿ ಹೊಳೆದವರು. ಈಗ ರಿಶಿ ಕಪೂರ್ ಮಗ ರಣಬೀರ್ ಕಪೂರ್ ಸ್ಟಾರ್ ನಟರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ರಾಜ್‌ ಹೀಗೆ ಕೇವಲ ವೈಯಕ್ತಿಕವಾಗಿ ಶೋಮ್ಯಾನ್ ಆಗಲಿಲ್ಲ; ಕುಟುಂಬದ ಕುಡಿಗಳಿಂದ ಸಿನಿಮಾ ಬೇರು–ಟಿಸಿಲುಗಳು ಹರಡುವಂತೆ ನೀರೆರೆಯುತ್ತಾ ಹೋದದ್ದೂ ಅಪರೂಪದ ವಿದ್ಯಮಾನ.

ಅವರ ಸಿನಿಮಾ ಇನಿಂಗ್ಸ್‌ಗಳಲ್ಲಿ ಕೆಲವು ಶತಕ, ದ್ವಿಶತಕದ ಕ್ರಿಕೆಟ್ ಆಟದ ಸುಖದಂತೆ ಕಂಡರೆ, ಹಲವು ಡಕ್ ಔಟ್‌ ಅನುಭವಗಳು.

‘ಆಗ್’ ಸಿನಿಮಾ ಸೋತ ಮೇಲೆ 1949ರಲ್ಲಿ ದಿಲೀಪ್ ಕುಮಾರ್ ಜತೆಯಲ್ಲಿ ‘ಅಂದಾಜ್’ ಚಿತ್ರದಲ್ಲಿ ಅಭಿನಯಿಸಿದರು. ನಟನಾಗಿ ಅವರು ಕಂಡ ಮೊದಲ ಹಿಟ್ ಚಿತ್ರ ಅದು. ಮೆಹಬೂಬ್‌ ಖಾನ್‌ ನಿರ್ದೇಶನದ ಆ ಸಿನಿಮಾದ ಮೆಲೋಡ್ರಾಮಾ, ಮುಂದೆ ರಾಜ್ ಅವರ ಸಿನಿಪಯಣಕ್ಕೆ ಪಾಠದಂತೆಯೂ ಇತ್ತು.

ಪೃಥ್ವಿರಾಜ್ ಕಪೂರ್ ಅವರನ್ನು ಕ್ಲಾಸಿಕ್ ಹೀರೊ ಎನ್ನಬಹುದಾದರೆ, ರಾಜ್‌ ಕಪೂರ್ ಅವರನ್ನು ಹೊಸಕಾಲಕ್ಕೆ ತಕ್ಕಹಾಗೆ ಅಭಿನಯ ಶೈಲಿ ರೂಢಿಸಿಕೊಂಡ ಜನಪ್ರಿಯ ಹೀರೊ ಎನ್ನಬೇಕು. ಸಂಗೀತ ಅವರ ಸಿನಿಮಾಗಳ ಪ್ರಮುಖ ಧಾರೆ. ಪಂಜಾಬಿ ಸಂಸ್ಕೃತಿಗೆ ದೊಡ್ಡದನಿ ಕೊಟ್ಟು, ಸಿನಿಮಾ ಪರದೆಗೆ ತಂದ ಶೈಲಿಯೂ ಅವರದ್ದೇ.

‘ಆವಾರಾ’ ಸಿನಿಮಾದಲ್ಲಿ ರಾಜ್‌ ಕಪೂರ್ ಹಾಗೂ ನರ್ಗೀಸ್‌ ಜೋಡಿ ಮೋಡಿ ಮಾಡಿತು. ಚಾರ್ಲಿ ಚಾಪ್ಲಿನ್ ಶೈಲಿಯನ್ನು ತಮ್ಮದಾಗಿಸಿಕೊಂಡು, ಆ ಆಂಗಿಕ ಅಭಿನಯಕ್ಕೆ ಭಾರತೀಯತೆಯ ಅಮಾಯಕನ ಒಂದು ಫಲುಕನ್ನೂ ಸೇರಿಸಿಕೊಂಡರು. ಅದು ಒಳ್ಳೆಯ ಫಲವನ್ನೇ ಕೊಟ್ಟಿತು. ‘ಬರ್ಸಾತ್‌’, ‘ಶ್ರೀ 420’ ಕೂಡ ಇದೇ ಜೋಡಿಯ ಪ್ರಮುಖ ಸಿನಿಮಾಗಳು. ಖ್ವಾಜಾ ಅಹಮದ್ ಅಬ್ಬಾಸ್ ಸಂಭಾಷಣೆ, ಶಂಕರ್ ಜೈಕಿಶನ್ ಸಂಗೀತ, ಹರಜತ್ ಜೈಪುರಿ–ಶೈಲೇಂದ್ರ ಚಿತ್ರಸಾಹಿತ್ಯ, ಲತಾ ಮಂಗೇಷ್ಕರ್, ಮುಕೇಶ್ ಹಾಡುಗಾರಿಕೆ– ಇವೆಲ್ಲವನ್ನೂ ಒಂದು ಸೂತ್ರಕ್ಕೆ ತಂದು ಪೋಣಿಸಿದವರು ರಾಜ್.

ನರ್ಗೀಸ್‌ ಹಾಗೂ ರಾಜ್ ನಡುವೆ ಆಪ್ತ ಸಂಬಂಧವಿದೆ ಎಂಬ ಗುಸುಗುಸು ಕೂಡ ಆ ಕಾಲದಲ್ಲಿ ಇತ್ತು. ರಾಜ್ ಕಪೂರ್ ಹೇಳಿದ ಕಾರಣಕ್ಕೇ ಕೆ. ಆಸಿಫ್ ಅವರ ಮುಘಲ್–ಎ–ಆಜಮ್ ಚಿತ್ರದ ಅನಾರ್ಕಲಿ ಪಾತ್ರದಲ್ಲಿ ನಟಿಸಲು ನರ್ಗೀಸ್ ನಿರಾಕರಿಸಿದ್ದರು ಎನ್ನುವುದಂತೂ ದೊಡ್ಡ ಸುದ್ದಿಯಾಗಿತ್ತು.

ಒಂದು ಸೂತ್ರವನ್ನೇ ಹಿಡಿದುಕೊಂಡು ‘ಬೂಟ್ಪಾಲಿಶ್’, ‘ಅಬ್ ದಿಲ್ಲಿ ದೂರ್ ನಹೀ’, ‘ಜಾಗ್ತೆ ರಹೋ’ ಸಿನಿಮಾಗಳನ್ನು ರಾಜ್‌ ಕಪೂರ್‌ ಮಾಡಿದರಾದರೂ ಅವು ಅಷ್ಟೇನೂ ಯಶಸ್ವಿಯಾಗಲಿಲ್ಲ. ‘ಅಬ್ ದಿಲ್ಲಿ ದೂರ್ ನಹೀ’ ಅಂತೂ ಅವರ ನಿರ್ಮಾಣದ ಚಿತ್ರಗಳಲ್ಲೇ ದೊಡ್ಡ ಫ್ಲಾಪ್.

ಕಾಲ ಕ್ರಮೇಣ ನರ್ಗೀಸ್ ಹಾಗೂ ರಾಜ್ ತಂತಮ್ಮ ಭಿನ್ನ ದಾರಿಯಲ್ಲಿ ನಡೆದರು. ಆಗ ರಾಜ್ ದಕ್ಷಿಣ ಭಾರತದ ನಟಿಯರ ಕಡೆಗೆ ಕಣ್ಣು ಹೊರಳಿಸಿದರು. ಪದ್ಮಿನಿ, ವೈಜಯಂತಿ ಮಾಲಾ ಸೆಳೆಯುವ ಕಣ್ಣುಗಳು ಪರದೆಯ ಮೇಲೆ ಪ್ರೇಕ್ಷಕರು ಕಣ್ಣು ಕೀಲಿಸುವಂತೆ ಮಾಡಿದ್ದೇ ಅವರನ್ನು ರಾಜ್ ಆರಿಸಿದ ಕಾರಣದಿಂದ.

‘ಜಿಸ್ ದೇಶ್ಮೇ ಗಂಗಾ ಬೆಹತಿ ಹೈ’ ಪದ್ಮಿನಿ ಅವರ ಛಾಪಿಗೆ ಉದಾಹರಣೆಯಾದ ಸಿನಿಮಾ. ‘ಸಂಗಮ್’ ಸಿನಿಮಾದ ವೈಜಯಂತಿ ಮಾಲಾ ಅವರನ್ನಂತೂ ಮರೆಯಲು ಸಾಧ್ಯವಿಲ್ಲ. ಮುಂದೆ ನರ್ಗೀಸ್ ಅವರು ನಟ ಸುನಿಲ್ ದತ್ ಅವರನ್ನು ಮದುವೆಯಾದರು.

ಸಿನಿಮಾಗಳು ತಮ್ಮ ಆತ್ಮಕಥೆಯ ತುಣುಕುಗಳು ಎಂದೇ ರಾಜ್ ಭಾವಿಸಿದ್ದರು. ತಮ್ಮ ಚಿತ್ರದ ನಾಯಕ ಕೊಳೆಗೇರಿಯವರಿಗೂ, ಫುಟ್ಪಾತ್ ಮೇಲೆ ಮಲಗುವವರಿಗೂ ‘ರಿಲೇಟ್’ ಆಗಬೇಕು ಎನ್ನುವ ಉಮೇದು ಅವರಿಗೆ ಇತ್ತು. ಅದಕ್ಕೇ ನಾಟಕೀಯ ಭಂಗಿಯ ಅಮಾಯಕ ನಾಯಕನನ್ನು ಅವರು ಪದೇಪದೇ ಮುದ್ದಿಸಿದ್ದು.

‘ಮೇರಾ ನಾಮ್ ಜೋಕರ್’ ಅವರು ಆರು ವರ್ಷ ಉಜ್ಜಿ ಮಾಡಿದ ಸಿನಿಮಾ. ಅದು ಕೂಡ ಫ್ಲಾಪ್. ಆ ಹೊಡೆತದ ನಂತರವೂ ರಾಜ್ ಅವರು ‘ಬಾಬಿ’ ಸಿನಿಮಾ ನಿರ್ದೇಶಿಸಿ ಡಿಂಪಲ್ ಕಪಾಡಿಯಾ ಅವರಂಥ ಸ್ನಿಗ್ಧ ಸೌಂದರ್ಯದ ಹುಡುಗಿಯನ್ನು ಪರದೆಯ ಮೇಲೆ ತೇಲಿಬಿಟ್ಟರು. ‘ಸತ್ಯಂ ಶಿವಂ ಸುಂದರಂ’ನ ಜೀನತ್ ಅಮಾನ್, ‘ರಾಮ್ ತೇರಿ ಗಂಗಾ ಮೈಲಿ’ಯ ಮಂದಾಕಿನಿ ರಾಜ್ ಕಪೂರ್ ‘ಸೌಂದರ್ಯ’ ಪ್ರಜ್ಞೆಗೆ ಉದಾಹರಣೆಗಳು. ಬಿಚ್ಚು ನಾಯಕಿಯರನ್ನು ತೋರಿಸಿದ ಕಾರಣಕ್ಕೆ ಅವರಿಗೆ ಟೀಕೆಗಳೂ ಎದುರಾದವೆನ್ನಿ. ‘ಸಿನಿಮಾ ಒಂದು ಶೋ ಮಾಧ್ಯಮ’ ಎಂದಷ್ಟೆ ಅವರು ಇಂತಹ ಟೀಕೆಗಳಿಗೆ ಉತ್ತರ ಕೊಟ್ಟರು.

‘ಹೆನ್ನಾ’ (1991) ರಾಜ್ ನಿರ್ದೇಶಿಸಿದ ಕೊನೆಯ ಚಿತ್ರ. ಅದರ ಬಹುತೇಕ ಕೆಲಸಗಳನ್ನು ಮಗ ರಣಧೀರ್ ಕಪೂರ್ ನೋಡಿಕೊಂಡರು.

ತಂದೆ ಪೃಥ್ವಿರಾಜ್ ಕಪೂರ್ ಅವರಿಗೆ ಮರಣೋತ್ತರವಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ, ರಾಜ್ ಅವರೇ ಅದನ್ನು ಸ್ವೀಕರಿಸಿದ್ದರು. ಕೆಲವೇ ವರ್ಷಗಳ ನಂತರ ಖುದ್ದು ತಮಗೇ ಆ ಪ್ರಶಸ್ತಿ ಬಂದಾಗ ಮಗುವಿನಂತೆ ಖುಷಿಪಟ್ಟಿದ್ದರು. 1988ರಲ್ಲಿ ಆ ಪ್ರಶಸ್ತಿ ಸ್ವೀಕರಿಸಿದ ತಿಂಗಳಲ್ಲೇ ಹೃದಯಾಘಾತದಿಂದ ಅವರು ಮೃತಪಟ್ಟರು. 63 ವರ್ಷಗಳ ಅವರ ಬದುಕಿನಲ್ಲಿ ಏನಿಲ್ಲವೆಂದರೂ ನಾಲ್ಕು ದಶಕಕ್ಕೂ ಹೆಚ್ಚು ಅವಧಿ ಸಿನಿಮಾ ಕನವರಿಕೆಗೇ ಮೀಸಲಾದದ್ದು ಅವರ ತುಡಿತಕ್ಕೆ ಸಾಕ್ಷಿ.

ಹನ್ನೊಂದು ಫಿಲ್ಮ್‌ಫೇರ್‌ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ, ಸ್ಟುಡಿಯೊದಲ್ಲಿ ಸೆಟ್‌ ಹಾಕಿ ಒಂದೇ ಕ್ರಮದಲ್ಲಿ ತೆಗೆಯುತ್ತಿದ್ದ ಸಿನಿಮಾಗಳಿಗೆ ‘ನಿಯೊ–ನಾಯ್ರ್’ ಶೈಲಿಯನ್ನು ದಕ್ಕಿಸಿಕೊಟ್ಟು, ಸಂಗೀತದಿಂದಲೂ ಸಿನಿಮಾಗಳನ್ನು ಗೆಲ್ಲಿಸಬಹುದು ಎನ್ನುವುದನ್ನು ಹೇಳಿಕೊಟ್ಟ ರಾಜ್ ಈಗಲೂ ತಮ್ಮತನದಿಂದ ತಲೆಮಾರುಗಳನ್ನು ಕಾಡುತ್ತಿದ್ದಾರೆ.

‘ಕಿಸಿ ಕಿ ಮುಸ್ಕುರಾಹಟೋಂ ಪೆ ಹೋ ನಿಸಾರ್/ಕಿಸಿ ಕಾ ದರ್ದ್‌ ಮಿಲ್ ಸಕೆ ತೊ ಲೆ ಉಧಾರ್... ಜೀನಾ ಇಸೀ ಕಾ ನಾಮ್ ಹೈ’ (ಯಾರದ್ದಾದರೂ ಖುಷಿಗಾಗಿ ತ್ಯಾಗ ಮಾಡು/ಯಾರದ್ದಾದರೂ ನೋವು ಸಿಕ್ಕರೆ ಸಾಲ ಪಡೆದುಕೋ... ಇದೇ ಬದುಕು) ಎಂಬ ‘ಅನಾರಿ’ ಸಿನಿಮಾದ ಅವರ ಹಾಡನ್ನು ರಾಜ್ ಬದುಕಿಗೂ ಅನ್ವಯಿಸಬಹುದು.

ರಾಜ್ ಸಿನಿಮಾಗಳ ಮರುದರ್ಶನ

ಡಿಸೆಂಬರ್ 14ಕ್ಕೆ ಬೆಳ್ಳಿಪರದೆಯ ಧೀಮಂತರಲ್ಲಿ ಒಬ್ಬರಾದ ರಾಜ್ ಕಪೂರ್ ಹುಟ್ಟಿ ನೂರು ವರ್ಷ. ಮುಂದಿನ ಒಂದು ಇಡೀ ವರ್ಷ ಅವರ ಶತಮಾನೋತ್ಸವ. 40 ನಗರಗಳ ಪಿವಿಆರ್–ಐನಾಕ್ಸ್, ಸಿನೆಪೊಲಿಸ್‌ನ 135 ಚಿತ್ರಮಂದಿರಗಳಲ್ಲಿ ರಾಜ್ ಕಪೂರ್ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ದಿಗ್ಗಜ ಚಿತ್ರ ನಿರ್ಮಾಪಕ–ನಿರ್ದೇಶಕನ ಸಿನಿಮಾಗಳ ಮರುದರ್ಶನದ ಅವಕಾಶವಿದು. ಆರ್.ಕೆ. ಫಿಲ್ಮ್‌ ಹೆರಿಟೇಜ್ ಫೌಂಡೇಶನ್ ಹಾಗೂ ಎನ್ಎಫ್‌ಡಿಸಿ–ನ್ಯಾಷನಲ್ ಫಿಲ್ಮ್ ಆರ್ಕೈವ್‌ ಆಫ್ ಇಂಡಿಯಾ ಈ ಪ್ರದರ್ಶನ ಆಯೋಜಿಸಿವೆ. ದಶಕಗಳ ನಂತರ ಹಳೆಯ ಸೃಷ್ಟಿಕಾರ್ಯವನ್ನು ನೋಡಿ, ಈ ಕಾಲಕ್ಕೆ ಒಗ್ಗಿಸಿ ನೋಡುವ ಸದವಕಾಶ ಇದೆನ್ನುವುದೂ ನಿಜ.

ಇವತ್ತು ನಾವು ಪ್ಯಾನ್–ಇಂಡಿಯಾ, ಉತ್ತರ ಹಾಗೂ ದಕ್ಷಿಣ ಭಾರತೀಯ ಚಿತ್ರೋದ್ಯಮಗಳ ಧ್ರುವೀಕರಣ ತತ್ತ್ವಗಳ ಕುರಿತು ಏನೆಲ್ಲ ಚರ್ಚೆ ನಡೆಸುತ್ತಿದ್ದೇವೆಯೋ, ಅಂತಹುದೇ ಸಾಹಸವನ್ನು ರಾಜ್ ಕಪೂರ್1950ರ ದಶಕದಲ್ಲೇ ಮಾಡಿದ್ದರು. ಅವರ ಸಿನಿಮಾಗಳಿಗೂ ಪ್ಯಾನ್–ಇಂಡಿಯಾ ಚಹರೆ ಇತ್ತು. ಅಷ್ಟೇ ಏಕೆ, ಭಾರತದ ಗಡಿ ದಾಟಿ ರಷ್ಯಾ, ಕೇಂದ್ರ ಏಷ್ಯಾ ಭಾಗದಲ್ಲಿಯೂ ಅವರ ಸಿನಿಮಾಗಳಿಗೆ ಅಭಿಮಾನಿಗಳಿದ್ದರು. ಇವತ್ತಿಗೂ ರಷ್ಯಾಗೆ ಹೋದರೆ ಟ್ಯಾಕ್ಸಿಯವರು ತಮ್ಮನ್ನು ಪುಕಸಟ್ಟೆಯಾಗಿ ಕರೆದುಕೊಂಡು ಹೋಗುತ್ತಾರೆ ಎಂದು ನಟ ರಣಬೀರ್ ಕಪೂರ್, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದಾಗ ಹೇಳಿದ್ದರು.

ರಾಜ್‌ ಕಪೂರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.