ADVERTISEMENT

ಸಿದ್ದರಾಮಯ್ಯ ಜೀವನಗಾಥೆ: ಬಾಲ್ಯ, ವಿದ್ಯಾಭ್ಯಾಸ, ರಾಜಕೀಯ...

ಪ್ರಜಾವಾಣಿ ವಿಶೇಷ
Published 18 ಮೇ 2023, 5:19 IST
Last Updated 18 ಮೇ 2023, 5:19 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಭರ್ಜರಿ ಜಯ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿ ಮತ್ತು ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ.

ರಾಜ್ಯದ ಅನುಭವಿ ರಾಜಕಾರಣಿ ಎಂದೇ ಸಿದ್ದರಾಮಯ್ಯ ಗುರುತಿಸಿಕೊಂಡಿದ್ದಾರೆ. ಈ ಹಿಂದೆ 2013 ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದರು.

ಬಾಲ್ಯ..

ಮೈಸೂರಿನ ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿ 1948 ಆಗಸ್ಟ್ 12ರಂದು ಜನಿಸಿದರು. ಇವರ ತಂದೆ ಸಿದ್ಧರಾಮೇಗೌಡ, ತಾಯಿ-ಬೋರಮ್ಮ. ಇವರದು ತುಂಬು ಮನೆಯ ಅವಿಭಕ್ತ ಕುಟುಂಬ.

ADVERTISEMENT

ಚಿಕ್ಕಂದಿನಲ್ಲೇ ಜಾನಪದ ನೃತ್ಯ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತಿದ್ದಾರೆ.

ಹತ್ತನೇ ವರ್ಷದವರೆಗೆ ಇವರು ಶಾಲೆಗೇ ಹೋಗಿರಲಿಲ್ಲ. ನೇರವಾಗಿ ಐದನೇ ತರಗತಿಗೆ ಶಾಲೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರೆಸಿದರು.

ವಿದ್ಯಾಭ್ಯಾಸ..

ತಮ್ಮ ಹುಟ್ಟೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸ ಪಡೆದರು. ಮೈಸೂರಿನಲ್ಲಿ ಪಿ.ಯು.ಸಿ ಹಾಗೂ ಬಿ.ಎಸ್ಸಿ ಓದಿದರು.

ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿಯರ್‌ ಆಗಿ ಕೆಲಸ ಮಾಡಿದರು. ನಂತರ 1978ರವರೆಗೆ ಸ್ವಂತ-ವಕೀಲಿ ವೃತ್ತಿ ನಡೆಸಿದರು.

ರಾಜಕೀಯ ಜೀವನ...

1983ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು. ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದಾಗ, ಇವರನ್ನು ಹೊಸದಾಗಿ ರಚಿಸಿದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ವರದಿ ಸಲ್ಲಿಸಿದರು.

1985ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು ದಾಖಲಿಸಿದರು. ಪಶುಸಂಗೋಪನೆ ಸಚಿವರಾದರು. ನಂತರ ಸಂಪುಟ ಪುನರ್ರಚನೆಯಲ್ಲಿ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.

ಸಿದ್ದರಾಮಯ್ಯ ಕೈ ಹಿಡಿದು ಓಡಿದ ರಾಹುಲ್ ಗಾಂಧಿ

1989ರ ಕಾಂಗ್ರೆಸ್ ಅಲೆಯಲ್ಲಿ ಚುನಾವಣೆಯಲ್ಲಿ ಸಿದ್ಧರಾಮಯ್ಯ ಸೋತರು. ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು. 1992ರಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದಿಂದ ಜನತಾದಳ ಸೇರಿದಾಗ, ಜನತಾದಳದ ಕಾರ್ಯದರ್ಶಿಯಾದರು.

1994ರ ಚುನಾವನಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು.

1999ರ ಚುನಾವಣೆಯ ಹೊತ್ತಿಗೆ ಜನತಾ ದಳ 2 ಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾದರು.

1999 ಚುನಾವಣೆಯಲ್ಲಿ ಸೋಲು ಕಂಡರು.

2004ರ ಹೊತ್ತಿಗೆ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು.

2004ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ, ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ 2 ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು,

2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಗೆಲುವು ಕಂಡರು.

2013ರ ಚುನಾವಣೆಯಲ್ಲಿ ಪಕ್ಷದಿಂದ ಮುಖ್ಯಮಂತ್ರಿಯಾದರು. (ಮೇ 10 2013 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ, ಮೇ 13, 2013ರಂದು ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.)

ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಯೋಜನೆಗಳನ್ನು ಜಾರಿ ಮಾಡಿದರು. ದಲಿತ ವರ್ಗಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್‌ ನೀಡಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದರು. ನಂತರ ವಿರೋಧ ಪಕ್ಷದ ನಾಯಕರಾದರು.

2023ರ ಚುನಾವಣೆಯಲ್ಲಿ ಗೆದ್ದಿರುವ ಸಿದ್ಧರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.