ADVERTISEMENT

ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಸಿ

ಕೆ.ಟಿ.ಕಣ್ಣನ್, ಬೆಂಗಳೂರು
Published 1 ಜುಲೈ 2013, 19:59 IST
Last Updated 1 ಜುಲೈ 2013, 19:59 IST

ಇತ್ತೀಚಿನ ದಿನಗಳಲ್ಲಿ ಮೇಲ್ಮಟ್ಟದ ಮಧ್ಯಮ ವರ್ಗದವರ ಕೈಗೂ ನಿಲುಕದ ದಿನನಿತ್ಯ ಬಳಕೆಯ ಆಹಾರ ಸಾಮಗ್ರಿಗಳ ಬೆಲೆ ಏರಿಕೆ, ವಿವಿಧ ರೀತಿಯ ತೆರಿಗೆ, ದುಬಾರಿ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಗಣನೀಯ ವೈದ್ಯಕೀಯ ವೆಚ್ಚ - ಇವೇ ಮುಂತಾದ ಕನಿಷ್ಠ ಪ್ರಮುಖ ವೆಚ್ಚಗಳನ್ನು ಪರಿಗಣಿಸಿದರೂ, ಒಂದು ಸಣ್ಣ ಕುಟುಂಬದ ತಿಂಗಳ ವೆಚ್ಚ ರೂ 25,000ಕ್ಕಿಂತ ಕಡಿಮೆ ಇಲ್ಲ. ಈ ಅಂಶಗಳನ್ನು ಪರಿಗಣಿಸಿದಲ್ಲಿ, ವಾರ್ಷಿಕ ಆದಾಯ ತೆರಿಗೆ ವಿನಾಯಿತಿ ಮಿತಿಯು ಕನಿಷ್ಠ  ರೂ 3 ಲಕ್ಷ ಇದ್ದು, ಪ್ರತಿ 2-3 ವರ್ಷಕ್ಕೊಮ್ಮೆ ಇದು ಕನಿಷ್ಠ ಶೇ 10-20ರಷ್ಟು ಹೆಚ್ಚಾಗಬೇಕಾದುದು ನ್ಯಾಯೋಚಿತ.

ಕೇಂದ್ರ ಸರ್ಕಾರವು 2-3 ವರ್ಷಕ್ಕೊಮ್ಮೆ ಈ ಮಿತಿಯಲ್ಲಿ  ಬರಿ 10-20 ಸಾವಿರ ರೂಪಾಯಿ ಹೆಚ್ಚಳ ಮಾಡುತ್ತಿದ್ದು  ಈ ಹೆಚ್ಚಳ ವಸ್ತುಸ್ಥಿತಿಗೆ ಅನುಗುಣವಾಗಿರುವುದಿಲ್ಲ.  ಸರ್ಕಾರಕ್ಕೆ ಯೋಜನೆಗಳಿಗೆ ಸಂಪನ್ಮೂಲಗಳ ಅಗತ್ಯವಿದ್ದಲ್ಲಿ, ನಿರ್ದಿಷ್ಟ ಯೋಜನೆಗಳನ್ನು ಜಾರಿಗೆ ತಂದು, ಈ ಯೋಜನೆಗಳಲ್ಲಿ ವರಮಾನ ತೆರಿಗೆ ಕಾಯ್ದೆ ಕಲಂ 80 (ಸಿ) ಅಡಿ ಹೂಡಿಕೆಗೆ ಅವಕಾಶ ನೀಡಿ, ವರಮಾನ ತೆರಿಗೆ ಕಾಯ್ದೆ ಕಲಂ 80(ಸಿ) ಅಡಿ ನೀಡುತ್ತಿರುವ ಸೌಲಭ್ಯದ ಮಿತಿಯನ್ನು ಕನಿಷ್ಠ ರೂ  2-3 ಲಕ್ಷಕ್ಕೆ ಏರಿಸುವುದರ ಜೊತೆಗೆ  ಈ ಹೂಡಿಕೆಯ ಮೇಲೆ ಆಕರ್ಷಕ ಬಡ್ಡಿ ನೀಡಿದಲ್ಲಿ, ಹೆಚ್ಚಿನ ಸಂಪನ್ಮೂಲ ಕ್ರೋಡೀಕರಣ ಸಾಧ್ಯ.

ಇದು ನಿವೃತ್ತಿದಾರರು, ಹಿರಿಯ ನಾಗರಿಕರಿಗೆ ಸಹಕಾರಿಯಾಗುತ್ತದೆ. ಸರ್ಕಾರ ವಿಧಿಸುವ ತೆರಿಗೆ ನ್ಯಾಯೋಚಿತವಾದಲ್ಲಿ, ಪಾಲನೆ ಸ್ವಯಂಪ್ರೇರಿತವಾಗಿರುತ್ತದೆ. ತೆರಿಗೆ ಹೊರೆಯಾದಲ್ಲಿ, ಜನರು ತೆರಿಗೆ ತಪ್ಪಿಸಲು ವಾಮಮಾರ್ಗಗಳ ಮೊರೆ ಹೋಗುತ್ತಾರೆ. ಸರ್ಕಾರಿ ನೌಕರರ ಸಂಘಗಳು ಮತ್ತು ಸಂಬಂಧಿತ ಇತರೆ ಸಂಸ್ಥೆಗಳು ಈ ಕುರಿತು ಸಂಬಂಧಪಟ್ಟವರೊಂದಿಗೆ ಸಮಾಲೋಚನೆ, ಪತ್ರ ವ್ಯವಹಾರಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿಪತ್ರ ನೀಡಿ ಅಗತ್ಯ ಅನುಸರಣಾ ಕ್ರಮಗಳನ್ನು ಕೈಗೊಂಡಲ್ಲಿ, ಈ ವಿಷಯದಲ್ಲಿ ಸೂಕ್ತ ಪರಿಹಾರ ದೊರೆಯಬಹುದೇನೊ?
  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.