ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಪ್ರದರ್ಶಿತವಾದ ಯು.ಆರ್. ಅನಂತಮೂರ್ತಿ ಅವರ ‘ಸಂಸ್ಕಾರ’ ಕೃತಿಯಾಧಾರಿತ, ಮೈಸೂರು ರಂಗಾಯಣ ಪ್ರಸ್ತುತಿಯ ಅದೇ ಹೆಸರಿನ ನಾಟಕ ಪ್ರದರ್ಶನ ವೀಕ್ಷಿಸಿದ ನಂತರ ಅನ್ನಿಸಿದ್ದಿಷ್ಟು.
ಕಚಾಕಚ್ ಭರ್ತಿಯಾಗಿದ್ದ ರಂಗಮಂದಿರ ರೋಮಾಂಚನದ ಅನುಭವ ನೀಡಿತ್ತು. ಆದರೆ ಪ್ರದರ್ಶನ ಮುಂದುವರಿದಂತೆ ಪ್ರೇಕ್ಷಕರ ವರ್ತನೆ ಅಸಹ್ಯ ತರಿಸುವಂತಿತ್ತು. ‘ಶವಸಂಸ್ಕಾರ’ದಂತಹ ಗಂಭೀರ ‘ಪ್ರಶ್ನೆ’ ಉಳ್ಳ ಮೂಲಕತೆಯ ಗಾಂಭೀರ್ಯ ಈ ಪ್ರದರ್ಶನದಲ್ಲಿ ಎಲ್ಲೂ ಕಂಡು ಬರಲಿಲ್ಲ. ಯಾರನ್ನಾದರೂ, ಏನನ್ನಾದರೂ ಹೀಯಾಳಿಸಿದಾಗ ಶಿಳ್ಳೆ, ಕೇಕೆ, ಚಪ್ಪಾಳೆಗಳ ಸುರಿಮಳೆಯಾಗುತ್ತಿತ್ತು. ಒಂದು ಹಂತದಲ್ಲಿ ಇದು ‘ನಗೆ ನಾಟಕವೇ?’ ಎಂಬ ಅನುಮಾನ ಬರುವಷ್ಟು ಕೆಟ್ಟ ವಾತಾವರಣವಿತ್ತು.
ಪ್ರದರ್ಶನದ ನಂತರ ಉದ್ಭವಿಸಿದ ಪ್ರಶ್ನೆಗಳಿವು.
* ಚಂದ್ರಿ ಕಾಮದ ಸಂಕೇತವಾದಂತೆ ದಾಸಾಚಾರ್ಯ ಹಸಿವಿನ ಸಂಕೇತ. ಆದರೆ ಇಲ್ಲಿ ದಾಸಾಚಾರ್ಯ ವಿದೂಷಕನಂತೇಕೆ ಬಿಂಬಿತವಾಗಿದ್ದಾನೆ?
* ಶ್ರೀಮಠದ ಆಚಾರ್ಯರು, ಇತ್ತೀಚಿನ ವಿಕೃತ ಸ್ವಾಮಿಗಳಂತೆ ಪರಿಹಾರ ಕೇಳಿ ಬಂದವರಿಗೆ ಮಲಗಿಕೊಂಡೇ ಕಾಲಿನಿಂದ ಉತ್ತರಿಸುವ ದೃಶ್ಯ ಲೇವಡಿಯ ಪರಮಾವಧಿ ಅಲ್ಲವೇ?
* ಅಗತ್ಯವಿಲ್ಲದಿದ್ದರೂ ಬಹುಸಂಖ್ಯೆಯಲ್ಲಿ ವಿಧವೆಯರನ್ನು ತೆರೆ ಮೇಲೆ ತಂದ ಉದ್ದಿಶ್ಯವಾದರೂ ಏನು?
* ವಚನದ ಇಂಪು ಹಾಗೂ ಸಂದೇಶ ಹಾಡಿದ ಅಬ್ಬರದಲ್ಲಿ ಮುಚ್ಚಿ ಹೋಗಲಿಲ್ಲವೇ?
* ಮಲೆನಾಡಿನ ಕಾಡನ್ನು ಅಷ್ಟೊಂದು ಕೃತಕವಾಗಿ ‘ಗಾಳಿ ಯಂತ್ರ’ಗಳಂತೆ ನಿರ್ಮಿಸಿದ್ದೇಕೆ?
* ಮೇಳಿಗೆ ದೇಗುಲದಲ್ಲಿ ಊಟಕ್ಕೆ ಬಡಿಸುವ ದೃಶ್ಯವನ್ನು ಮನರಂಜನೆಗೆ ಬಳಸಿಕೊಂಡು ಸಾಧಿಸಿದ್ದಾದರೂ ಏನು?
* ಆಕಸ್ಮಿಕವಾಗಿ ಸಂಭವಿಸುವ ಚಂದ್ರಿ– ಆಚಾರ್ಯರ ಸಮಾಗಮದ ದೃಶ್ಯವನ್ನು ವಾತ್ಸ್ಯಾಯನ ಕಾಮ ಸೂತ್ರದಂತೆ ವೈಭವೀಕರಿಸುವ ಅಗತ್ಯವಿದೆಯೇ?
ಹೀಗೆ ಪಟ್ಟಿ ಮುಗಿಯಲಾರದು.
ನಾಟಕದ ಕೆಲವು ಗುಣಾಂಶಗಳೆಂದರೆ ಓ.ಎಲ್.ಎನ್. ಅವರ ಸುಂದರ ಸಾಹಿತ್ಯ – ಸಂಭಾಷಣೆ. ಶೀರ್ನಾಳಿ ಶ್ರೀಪತಿಯ ಕಲಾವಿದನಾಗುವ ಬಯಕೆಯನ್ನು ಯಕ್ಷಗಾನದ ಹಿನ್ನೆಲೆಯಲ್ಲಿ ತಂದದ್ದು. ಆ ಒಂದು ದಿನದ ಮಟ್ಟಿಗೆ ಬೆಳ್ಳಿ, ಶ್ರೀಪತಿಯನ್ನು ನಿರಾಕರಿಸುವ ಸಂಸ್ಕಾರ.
ನಾಟಕದ ಅವಧಿ ಅತ್ಯಂತ ದೀರ್ಘವಾಗಿದ್ದು, ಕೃತಿಯ ಮೂಲ ಆಶಯಕ್ಕೆ ಪೂರಕವಲ್ಲದ ದೃಶ್ಯಗಳನ್ನು ಕತ್ತರಿಸಿ, ಹೇಳಬೇಕಾದ್ದನ್ನು ಒಂದು ಗಂಟೆಯೊಳಗೆ ಸರಳವಾಗಿ ಹೇಳಲು ಖಂಡಿತವಾಗಿಯೂ ಸಾಧ್ಯವಿದೆ. ಮುಂದಿನ ಪ್ರದರ್ಶನಗಳಲ್ಲಾದರೂ ಬದಲಾವಣೆ ಕಂಡೀತೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.