ADVERTISEMENT

ವೈದ್ಯರಿಗೆ ಹಳ್ಳಿ ಸೇವೆ ಕಡ್ಡಾಯ?

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST

ಎಪ್ಪತ್ತು ಸಾವಿರ ಸಂಬಳ ಕೊಟ್ಟರೂ ಹಳ್ಳಿಯಲ್ಲಿ ಸೇವೆ ಸಲ್ಲಿಸಲು ವೈದ್ಯರು ಸಿಗುತ್ತಿಲ್ಲ ಎಂದು ಇತ್ತೀಚೆಗೆ ಮಂತ್ರಿಗಳೊಬ್ಬರು ಹೇಳಿದ್ದಾರೆ. ಇದು ಸತ್ಯವೇ. ಆದರೆ ವೈದ್ಯರು ಏಕೆ ಹಳ್ಳಿಗಳಿಗೆ ಹೋಗುತ್ತಿಲ್ಲ ಎನ್ನುವುದರ ಬಗೆಗೆ  ಚರ್ಚೆ ಆಗಬೇಕಿದೆ.

ವೈದ್ಯರು ಹಳ್ಳಿಗಳಿಗೆ ಹೋಗದಿರುವ ಮುಖ್ಯ ಕಾರಣ ಹಳ್ಳಿಯಲ್ಲಿರುವ ಮೂಲಭೂತ ಸೌಕರ್ಯ ಮತ್ತು ಕನಿಷ್ಠ ನಾಗರೀಕ ಸೌಲಭ್ಯಗಳ ಕೊರತೆ. ಬಹುತೇಕ ಹಳ್ಳಿ ಆಸ್ಪತ್ರೆಗಳಿಗೆ ಸರಿಯಾದ ಕಟ್ಟಡವಿಲ್ಲ, ವಸತಿ ವ್ಯವಸ್ಥೆಯಿಲ್ಲ, ಹಳ್ಳಿಗಳಲ್ಲಿ ಆಸ್ಪತ್ರೆ ಕಟ್ಟಿಸುವಾಗ ಇಂಥಹ ಮೂಲಭೂತ ಕನಿಷ್ಠ ಸೌಲಭ್ಯಗಳ ಬಗೆಗೆ ಚಿಂತಿಸದ ಸಾಮಾನ್ಯ ಜನರ ಕೊರತೆಯೇ ಇದಕ್ಕೆಲ್ಲಾ ಮೂಲ ಕಾರಣ.

ಕನಿಷ್ಠ 30-40 ಲಕ್ಷ ಖರ್ಚು ಮಾಡಿ ವೈದ್ಯ ಪದವಿ ಪಡೆದ ಮೇಲೆ ಆತನ ಮೊದಲ ಆದ್ಯತೆ ಸ್ನಾತಕೋತ್ತರ ಪದವಿ ಪಡೆದು ವಿದೇಶಕ್ಕೆ ಹಾರುವುದು ಅಥವಾ ನಗರಗಳಲ್ಲಿ ಆಸ್ಪತ್ರೆ ತೆರೆಯುವುದು. ಸ್ನಾತಕೋತ್ತರ ಸೀಟು ಸಿಗದಿದ್ದ ಪ್ರಸಂಗದಲ್ಲಿ ಸಾಕಷ್ಟು ಪ್ರಾಕ್ಟೀಸ್ ಆಗುವ ಪ್ರದೇಶದಲ್ಲಿ ಕ್ಲಿನಿಕ್ ಆರಂಭಿಸುವುದು.

ಅದಕ್ಕೂ ಮಿಗಿಲಾಗಿ ಆರು ವರ್ಷಗಳ ಕಾಲ ಕಾಲೇಜಿನಲ್ಲಿ ಓದಿ 30-40 ಲಕ್ಷ ಖರ್ಚು ಮಾಡಿದವರಿಗೆ ಇಂದಿನ ಐಟಿ ಯುಗದಲ್ಲಿ ಎಪ್ಪತ್ತು ಸಾವಿರ ಸಂಬಳ ಒಂದು ರೀತಿಯ ಅವಮಾನ. ಹಳ್ಳಿಯ ಸೇವೆ ಆಕರ್ಷಕವಾಗಲು  ಸಂಬಳ ಕೂಡಾ ಆಕರ್ಷಕವಾಗಿರಬೇಕು.
ಇದಕ್ಕೂ ಮಿಗಿಲಾಗಿ ಕರ್ನಾಟಕದಲ್ಲಿ ಸುಮಾರು 40 ಮೆಡಿಕಲ್ ಕಾಲೇಜುಗಳಿದ್ದು, ಈ ಕಾಲೇಜುಗಳಿಂದ ಹೊರಬರುವ ವೈದ್ಯರಲ್ಲಿ 80% ಕ್ಕಿಂತ ಹೆಚ್ಚಿನವರು ಹೊರರಾಜ್ಯದವರು.

ಇವರು ಪದವಿ ಸಿಕ್ಕ ತಕ್ಷಣ ತಮ್ಮ ರಾಜ್ಯದ ವಿಮಾನ ಹತ್ತುತ್ತಾರೆ.ಕನ್ನಡಿಗರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಕನ್ನಡೇತರರಿಗೆ ಜ್ಞಾನದಾಸೋಹ ಮಾಡಿ, ನಮ್ಮ ನಾಡಿನಲ್ಲೇ ನಾವೇ ಅನಾಥರಾಗುವಂತೆ ಮಾಡಿರುವುದು ವಿಷಾದನೀಯ. ಇದರ ಪರಿಣಾಮವೇ ಇಂದು ನಮಗೆ ಗ್ರಾಮೀಣ ಸೇವೆಗೆ ವೈದ್ಯರು ಇಲ್ಲದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.