ADVERTISEMENT

ಸಲ್ಲದ ಟೀಕೆ

ಬಾಲಸುಬ್ರಹ್ಮಣ್ಯ ಕಂಜರ್ಪಣೆ
Published 19 ಅಕ್ಟೋಬರ್ 2015, 19:56 IST
Last Updated 19 ಅಕ್ಟೋಬರ್ 2015, 19:56 IST

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು (ಎನ್‌ಜೆಎಸಿ) ಸುಪ್ರೀಂಕೋರ್ಟ್‌ ಸಂವಿಧಾನಬಾಹಿರವೆಂದು ಘೋಷಿಸಿದೆ. ಈ ತೀರ್ಪು ಸರಿಯೋ ತಪ್ಪೋ ಬೇರೆ ವಿಚಾರ. ಆದರೆ ಅದನ್ನು ನಾವೆಲ್ಲ, ಅಂದರೆ ಸಂವಿಧಾನವನ್ನು ಗೌರವಿಸುವ ಭಾರತೀಯರೆಲ್ಲ ಗೌರವಿಸಲೇಬೇಕು. ಅದನ್ನು ಕಾನೂನಿನ ತಳಹದಿಯಿಂದ ಎತ್ತಿ ಈಚೆಗಿಟ್ಟು ರಾಜಕೀಯ ಪ್ರೇರಿತವಾಗಿ ಟೀಕಿಸಬಾರದು.

ಕೇಂದ್ರ ಸಚಿವ ಅರುಣ್ ಜೇಟ್ಲಿ ಈ ತೀರ್ಪನ್ನು ಕಟುವಾಗಿ ಟೀಕಿಸಿದ್ದಾರೆ. ಅದು ಅವರ ಹಕ್ಕು. ಆದರೆ ಚುನಾಯಿತರಲ್ಲದವರ ದಾದಾಗಿರಿ (tyranny by the unelected) ಎಂದು ಅವರು ಟೀಕಿಸಿದ್ದು ಅನಾಗರಿಕವಾದುದು. ನ್ಯಾಯಮೂರ್ತಿಗಳನ್ನು ಟೀಕಿಸುವ ಕೆಟ್ಟ ಪರಿಪಾಠವನ್ನು ಸರ್ಕಾರವೇ ಹಾಕಿಕೊಡುತ್ತಿರುವುದು ಸರ್ವಾಧಿಕಾರದ ಸಂಕೇತ. ಎಲ್ಲ ತೀರ್ಪುಗಳೂ ಒಂದಲ್ಲ ಒಂದು ಸಂದರ್ಭದಲ್ಲಿ, ಒಬ್ಬರಲ್ಲದಿದ್ದರೆ ಒಬ್ಬರಿಗೆ ದುರಂತವಾಗಿ ಪರಿಣಮಿಸುತ್ತವೆ. ಇದರರ್ಥ ಅವರು ಅನ್ಯಾಯವೆಸಗಿದ್ದಾರೆಂದಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮತ್ತು ತಾವೂ ಒಬ್ಬ ವಕೀಲರೇ ಆಗಿರುವ ಜೇಟ್ಲಿಯವರು ಈ ರೀತಿ ಟೀಕೆ ಮಾಡುವುದು ಅವರಿಗಾಗಲೀ ಯಾವ ವಕೀಲರಿಗಾಗಲೀ ಶೋಭಿಸದು.

ಇನ್ನೂ ಒಂದು ತಮಾಷೆಯೆಂದರೆ, ಜೇಟ್ಲಿಯವರೂ ನೇರ ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾದವರಲ್ಲ. ಅಮೃತಸರ ಲೋಕಸಭಾ ಕ್ಷೇತ್ರದಲ್ಲಿ ಸೋತು ಮೋದಿ ಅವರ ಕೃಪೆಯಿಂದ ಹಿಂಬಾಗಿಲ ಮೂಲಕ (ಅಂದರೆ ರಾಜ್ಯಸಭಾ ಸ್ಥಾನ ಪಡೆದು) ಮಂತ್ರಿಯಾದವರು. ಹಿಂದೆ ಮನಮೋಹನ್‌ ಸಿಂಗ್‌ ಅವರನ್ನು ‘ಅವರು ನೇರ ಚುನಾವಣೆ ಗೆದ್ದು ಬರಲಿ ನೋಡೋಣ’ ಎಂದು ಸವಾಲೆಸೆದವರೇ ಈಗ ಮೋದಿ ಕೃಪಾಪೋಷಿತರು. ಅವರೂ ಪ್ರಜಾತಂತ್ರದ ನೈಜ ಅರ್ಥದಲ್ಲಿ ‘unelected’. ಕನ್ನಡಿ ನೋಡಿಕೊಳ್ಳದೆ ಇನ್ನೊಬ್ಬರ ರೂಪವನ್ನು ಟೀಕಿಸಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.