ADVERTISEMENT

ವಾಚಕರ ವಾಣಿ | ಬಾಲಕಿಯಿಂದ ದುಸ್ಸಾಹಸದ ನಿರೀಕ್ಷೆ ತರವೇ?

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 19:30 IST
Last Updated 22 ಮಾರ್ಚ್ 2022, 19:30 IST

ಬೆಂಗಳೂರಿನ ಹೆಬ್ಬಾಳದ ಬಸ್ ನಿಲ್ದಾಣದ ಬಳಿ ರಸ್ತೆ ದಾಟುವಾಗ ಒಂಬತ್ತನೇ ತರಗತಿಯ ಬಾಲಕಿಯು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ (ಬಿಬಿಎಂಪಿ) ಕಸ ಸಾಗಣೆ ವಾಹನಕ್ಕೆ ಸಿಕ್ಕಿ ಪ್ರಾಣ ಕಳೆದುಕೊಂಡಿದ್ದಾಳೆ. ಪಾದಚಾರಿಗಳು ರಸ್ತೆ ದಾಟಲು ನಿರ್ಮಿಸಲಾಗಿರುವ ಕೆಳಸೇತುವೆಯಲ್ಲಿ ತುಂಬಿದ್ದ ಮಳೆನೀರನ್ನು ಬಿಬಿಎಂಪಿ ತೆರವುಗೊಳಿಸದಿದ್ದುದರಿಂದ, ಬಾಲಕಿ ಮುಖ್ಯರಸ್ತೆ ದಾಟಿ ಸಾವಿನ ದವಡೆಗೆ ಸಿಲುಕಬೇಕಾಯಿತು ಎಂಬುದು ಸ್ಥಳೀಯರ ಅಭಿಪ್ರಾಯ. ‘...ಕೆಳ ಸೇತುವೆಯಲ್ಲಿ ಹೆಚ್ಚು ನೀರಿರಲಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹೇಳಿಕೆ ನೀಡಿದ್ದಾರೆ ಅರ್ಥಾತ್, ವಿದ್ಯಾರ್ಥಿನಿ ರಸ್ತೆ ದಾಟುವ ಧೈರ್ಯ ಮಾಡದೆ ‘ಸ್ವಲ್ಪ ನೀರಿದ್ದ’ ಕೆಳ ಸೇತುವೆಯನ್ನು ಬಳಸಬೇಕಿತ್ತು ಎಂಬುದು ಅವರ ಮಾತಿನ ಇಂಗಿತ. ತಮ್ಮ ಅಸಮರ್ಪಕ ಕರ್ತವ್ಯ ನಿರ್ವಹಣೆಗೆ ಹೈಕೋರ್ಟ್‌ನಿಂದ ಪದೇಪದೇ ಕಟುಟೀಕೆಗೆ ಗುರಿಯಾಗುತ್ತಿರುವ ಮತ್ತು ಇತ್ತೀಚೆಗೆ ತಾನೇ ಪ್ರಕರಣವೊಂದರಲ್ಲಿ ಕ್ಷಮೆಯಾಚಿಸಿರುವ ಮುಖ್ಯ ಆಯುಕ್ತರು, 14 ವರ್ಷದ ಬಾಲಕಿಯಲ್ಲಿ ‘ರಸ್ತೆ ದಾಟುವ ದುಸ್ಸಾಹಸ’ವನ್ನು ನಿರೀಕ್ಷಿಸುವುದು ಎಷ್ಟು ಸಮಂಜಸ?

ರಾಜ್ಯದ ರಾಜಧಾನಿಯಲ್ಲಿರುವ ಪಾದಚಾರಿ ಸುರಂಗ ಮಾರ್ಗಗಳಲ್ಲಿ ಹೆಚ್ಚಿನವು ವೈಜ್ಞಾನಿಕವಾಗಿ ನಿರ್ಮಾಣ ಗೊಂಡಿಲ್ಲ. ಹೀಗಾಗಿ, ತಗ್ಗು ಪ್ರದೇಶದಲ್ಲಿರುವ ಅವು ರಸ್ತೆಯಿಂದ ಹರಿದುಬರುವ ಮಳೆ ನೀರಿನಿಂದ ತುಂಬಿಕೊಳ್ಳುತ್ತವೆ. ನೀರು ಅಲ್ಲೇ ಸಂಗ್ರಹವಾಗಿ ಸೊಳ್ಳೆಗಳ ವೃದ್ಧಿಗೆ ಅವಕಾಶವಾಗುತ್ತದೆ. ನಗರದ ಹೃದಯ ಭಾಗದಲ್ಲಿರುವ ಇನ್ನು ಕೆಲವು ಪಾದಚಾರಿ ಸುರಂಗ ಮಾರ್ಗಗಳನ್ನು ಉಪಯೋಗಕ್ಕೆ ತೆರೆದಿಡದೆ ಬೀಗ ಜಡಿದಿಡಲಾಗಿದೆ! ಆಯಾ ಕ್ಷೇತ್ರದ ಜನಪ್ರತಿನಿಧಿಗಳು ಪಾದಚಾರಿ ಸುರಂಗ ಮಾರ್ಗಗಳ ಸೂಕ್ತ ನಿರ್ವಹಣೆಗೆ ಏರ್ಪಾಡು ಮಾಡಿ ಪಾದಚಾರಿಗಳ ಜೀವ ರಕ್ಷಣೆಗೆ ನೆರವಾಗಲಿ.

-ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.