ADVERTISEMENT

ವಾಚಕರ ವಾಣಿ: ವ್ಯಾಪಾರಿ ಮನೋಭಾವದ ಸೂಚಕ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 0:24 IST
Last Updated 13 ಜೂನ್ 2025, 0:24 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ವ್ಯಾಪಾರಿ ಮನೋಭಾವದ ಸೂಚಕ

ಕೆಆರ್‌ಎಸ್‌ ಜಲಾಶಯದ ಬಳಿ ‘ಕಾವೇರಿ ಆರತಿ’ ನಡೆಸುವ ಮತ್ತು ‘ಅಮ್ಯೂಸ್‌ಮೆಂಟ್‌ ಪಾರ್ಕ್‌’ ನಿರ್ಮಿಸುವ ರಾಜ್ಯ ಸರ್ಕಾರದ ನಿರ್ಧಾರವು ವ್ಯಾಪಾರಿ ಮನೋಭಾವದ ಸೂಚಕವಾಗಿದೆ (ಆಳ–ಅಗಲ, ಜೂನ್‌ 12). ಸರ್ಕಾರದ ಈ ಉದ್ದೇಶದ ಹಿಂದೆ ಜಲಾಶಯದ ಅಭಿವೃದ್ಧಿಯ ಆಶಯವಿಲ್ಲ. ಅದೊಂದು ವಿನಾಶಕ್ಕೆ ನೀಲನಕ್ಷೆ ಎನಿಸುತ್ತದೆ.

ADVERTISEMENT

ಜಲಾಶಯವು ಮೈಸೂರು, ಕೊಡಗು, ಮಂಡ್ಯ, ಬೆಂಗಳೂರು ಜಿಲ್ಲೆಯ ಜನರಿಗೆ ಜೀವನಾಡಿಯಾಗಿದೆ. ಶಿಸ್ತು ಬದ್ಧವಾಗಿ ಕಾರ್ಯಕ್ರಮ ಆಯೋಜಿಸುವುದಾಗಿ ಸರ್ಕಾರ ಹೇಳಿದರೂ ಜಲಾಶಯದ ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯಾಗುವುದರಲ್ಲಿ ಅನುಮಾನವಿಲ್ಲ. ಕಾರ್ಯಕ್ರಮಕ್ಕೆ ಮೀಸಲಿಟ್ಟಿರುವ ಹಣವನ್ನು ಇದೇ ಪ್ರದೇಶದ ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳಿಗೆ ವಿನಿಯೋಗಿಸುವುದು ಒಳಿತು.

 ⇒ರಮೇಶ್, ಬೆಂಗಳೂರು 

ಪ್ರವಾಸಿಗರು ಜವಾಬ್ದಾರಿ ಅರಿಯಲಿ

ಇತ್ತೀಚೆಗೆ ನಾವು ಮೂವರು ಸಹೋದರಿಯರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹಾಗೂ ಹರಿಹರಪುರದ ದೇಗುಲಕ್ಕೆ ಹೋಗಿದ್ದೆವು. ಶಾರದಾಂಬೆಯ ದರ್ಶನ ಪಡೆದ ಬಳಿಕ ಸಮೀಪದ ಸಿರಿಮನೆ ಜಲಪಾತ ವೀಕ್ಷಿಸಲು ತೆರಳಿದೆವು. ಅಲ್ಲಿನ ಪರಿಸರದ ಸ್ವಚ್ಛತೆ ಕಂಡು ಬೆರಗಾದೆವು.

ಅಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಾಣಸಿಗಲಿಲ್ಲ. ಅಲ್ಲಿನ ಬಹುತೇಕ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ನಿಷೇಧ ಹೇರಿರುವ ಬಗ್ಗೆ ಸೂಚನಾ ಫಲಕ ಅಳವಡಿಸಲಾಗಿದೆ. ಪ್ರಕೃತಿಯು ನಮಗೆ ಕೊಟ್ಟಿರುವ ಕೊಡುಗೆಗಳಿಗೆ ಪ್ರತಿಯಾಗಿ ನಾವು ಪರಿಸರದ ಸ್ವಚ್ಛತೆಯನ್ನೂ ಕಾಪಾಡಬೇಕಿದೆ. ಪ್ರವಾಸಿಗರಿಗೆ ಈ ಸತ್ಯದ ಅರಿವಾಗಬೇಕಿದೆ.

⇒ಟಿ.ಎಸ್. ಪ್ರತಿಭಾ, ಚಿತ್ರದುರ್ಗ

ದೇವರ ದರ್ಶನಕ್ಕೆ ದುಪ್ಪಟ್ಟು ಹಣ ಏಕೆ?

ಜನಸಂಘದ ಅಧ್ಯಕ್ಷರಾಗಿದ್ದ ದೀನ ದಯಾಳ್ ಉಪಾಧ್ಯಾಯ ಒಮ್ಮೆ ಒಡಿಶಾದ ಪುರಿ ನಗರಕ್ಕೆ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಸಭೆಗೂ ಮುಂಚೆ ಕಾರ್ಯಕರ್ತರು ಅವರನ್ನು ಜಗನ್ನಾಥ ಮಂದಿರಕ್ಕೆ ಕರೆದೊಯ್ದರು. ಮಂದಿರದ ಆವರಣ
ದಲ್ಲಿದ್ದ ಪ್ರವೇಶ ಶುಲ್ಕದ ಫಲಕ ಅವರ ಕಣ್ಣಿಗೆ ಬಿತ್ತು. ಜೊತೆಗಿದ್ದವರು ಟಿಕೆಟ್ ಖರೀದಿಗೆ ಮುಂದಾದರು. ಉಪಾಧ್ಯಾಯರು ಅವರನ್ನು ತಡೆದು, ‘ಹಣ ಕೊಟ್ಟು ದೇವರ ದರ್ಶನ ಪಡೆಯುವುದು ನನಗೆ ಬೇಕಾಗಿಲ್ಲ’ ಎಂದು ಅಲ್ಲಿಂದ ವಾಪಸ್ ಹೊರಟೇ
ಬಿಟ್ಟರು.

ಪುರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ದೇಗುಲದ ಆಡಳಿತ ಮಂಡಳಿಯವರಿಗೆ ಉಪಾಧ್ಯಾಯರು ದೇವರ ದರ್ಶನ ಪಡೆಯದೇ ಹೋದ ಸಂಗತಿ ತಿಳಿಯಿತು. ಉಪಾಧ್ಯಾಯ ಅವರನ್ನು ಭೇಟಿಯಾಗಿ ಮಂದಿರಕ್ಕೆ ಬರುವಂತೆ ವಿನಂತಿಸಿದರು. ಆಗ ಸಣ್ಣಗೆ ನಕ್ಕ ಅವರು, ‘ಈ ಜನ್ಮದಲ್ಲಿ ಅದು ಸಾಧ್ಯವಿಲ್ಲ; ಮುಂದಿನ ಜನ್ಮ ಎನ್ನುವುದಿದ್ದರೆ ಬರುತ್ತೇನೆ’ ಎಂದು ಹೇಳಿದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಆಷಾಢ ಶುಕ್ರವಾರ ಆಚರಣೆಯ ‘ವಿಶೇಷ ದರ್ಶನ’ದ ಟಿಕೆಟ್‌ ದರವನ್ನು ₹2 ಸಾವಿರಕ್ಕೆ ನಿಗದಿಪಡಿಸಿರುವ ವರದಿ (ಪ್ರ.ವಾ., ಜೂನ್‌ 12) ಓದಿದ ತಕ್ಷಣ ಈ ಪ್ರಸಂಗ ನೆನಪಾಯಿತು.

⇒ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ 

ಬಡವರ ಠೇವಣಿ ಹಣಕ್ಕೆ ಭದ್ರತೆ ಬೇಕು

ಮೈಸೂರು ಜಿಲ್ಲೆಯ ಸರಗೂರು ಪಟ್ಟಣದ ಅಂಚೆ ಕಚೇರಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಕೋಟ್ಯಂತರ ರೂಪಾಯಿಯು ಕಚೇರಿಯ ನೌಕರರಿಂದಲೇ ದುರುಪಯೋಗ ಆಗಿರುವುದು ವರದಿಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಅಂಚೆ ಇಲಾಖೆ ಮೇಲೆ ಸಾರ್ವಜನಿಕರು ಹೆಚ್ಚು ನಂಬಿಕೆ ಹೊಂದಿದ್ದಾರೆ.
ಕಡು ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ಕಷ್ಟಪಟ್ಟು ದುಡಿದ ಹಣವನ್ನು ಠೇವಣಿ ಇಟ್ಟಿರುತ್ತಾರೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಈ ಇಲಾಖೆಯಲ್ಲೇ ಹಣ ದುರುಪಯೋಗವಾದರೆ ಬಡವರ ಹಣಕ್ಕೆ ಭದ್ರತೆ ಎಲ್ಲಿಂದ ಸಿಗುತ್ತದೆ? ಈ ಪ್ರಕರಣವು ‘ಕುರಿ ಕಾಯಲು ತೋಳ ನೇಮಿಸಿದಂತೆ’ ಎಂಬ ಮಾತನ್ನು ನೆನಪಿಸುತ್ತದೆ. 

ಹಣ ದುರುಪಯೋಗದ ಹಿಂದೆ ಇಲಾಖೆಯ ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆಯಿದೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು. ದುರುಪಯೋಗ ಆಗಿರುವ ಹಣವನ್ನು ಗ್ರಾಹಕರಿಗೆ ಮರಳಿಸುವ ಕೆಲಸವೂ ತ್ವರಿತವಾಗಿ ಆಗಬೇಕಿದೆ. 

 ⇒ಬೂಕನಕೆರೆ ವಿಜೇಂದ್ರ, ಮೈಸೂರು 

ಕಾಲ್ತುಳಿತ ಪ್ರಕರಣ ಎತ್ತ ಸಾಗುತ್ತಿದೆ?

ಹನ್ನೊಂದು ಜನ ಅಮಾಯಕರನ್ನು ಬಲಿ ತೆಗೆದುಕೊಂಡ ಕಾಲ್ತುಳಿತ ಪ್ರಕರಣದಲ್ಲಿ ಯಾರ‍್ಯಾರ ಕಡೆಗೋ ಬೊಟ್ಟು ತೋರಿಸುವ ಕೆಲಸ ನಡೆಯುತ್ತಿದೆ. ಇಂಗ್ಲೆಂಡ್‌ನಲ್ಲಿ ಪ್ರಚಲಿತದಲ್ಲಿರುವ ‘ರಾಜರು ತಪ್ಪು ಮಾಡುವುದಿಲ್ಲ’ ಎಂಬ ಸೂಕ್ತಿಯಂತೆ ಈವರೆಗೆ ಯಾವ ರಾಜಕಾರಣಿಯ ಹೆಸರೂ ಮುನ್ನೆಲೆಗೆ ಬಂದಿಲ್ಲ. ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳ ಎತ್ತಂಗಡಿಯಾಗಿದೆ. ಕೆಲವರ ವಿಚಾರಣೆ ನಡೆಯುತ್ತಿದೆ. ಆರೋಪ, ಪ್ರತ್ಯಾರೋಪ ನೋಡಿದರೆ ಅಂತಿಮವಾಗಿ ಬಲಿಯಾದವರದ್ದೇ ತಪ್ಪು ಆಗಬಹುದೇನೋ ಎನಿಸುತ್ತದೆ. ಅವಘಡ ಸಂಭವಿಸಿ ವಾರವಾದರೂ ತಪ್ಪಿತಸ್ಥರು ಯಾರು ಎನ್ನುವ ಸುಳಿವು ಇನ್ನೂ ಸಿಗುತ್ತಿಲ್ಲ!

⇒ರಮಾನಂದ ಎಸ್., ಬೆಂಗಳೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.