ADVERTISEMENT

ಅಸಂಬದ್ಧ ಹೇಳಿಕೆಯಿಂದ ತಬ್ಬಿಬ್ಬಾಗಿಸುವುದು ಬೇಡ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:15 IST
Last Updated 21 ನವೆಂಬರ್ 2018, 20:15 IST

ಸಾಹಿತಿ ಎಸ್.ಎಲ್. ಭೈರಪ್ಪನವರು ‘ನರೇಂದ್ರ ಮೋದಿ ಇನ್ನೂ ಮೂರು ಬಾರಿ ಪ್ರಧಾನಿಯಾಗಲಿ’ ಎಂದು ಆಶಿಸಿದ್ದಾರೆ (ಪ್ರ.ವಾ., ನ. 21). ಅದು, ಅವರ ವೈಯಕ್ತಿಕ ಅಭಿಪ್ರಾಯ. ಅದರ ಬಗ್ಗೆ ತಕರಾರು ಇಲ್ಲ. ಆದರೆ, ‘ಅವರು ಮತ್ತೆ ಪ್ರಧಾನಿ ಆಗದಿದ್ದಲ್ಲಿ ಭಾರತ ದೇಶವು ಪಾಕಿಸ್ತಾನ, ಚೀನಾದ ಪಾಲಾಗುತ್ತದೆ’ ಎಂಬ ಅವರ ಹೇಳಿಕೆ ಅತಾರ್ಕಿಕವಾದುದು. ಸಡಿಲ ನಾಲಿಗೆಯ ರಾಜಕಾರಣಿಗಳಂತೆ ಸಾಹಿತಿಗಳು ಇಂಥ ಅಸಂಬದ್ಧ ಹೇಳಿಕೆಗಳನ್ನು ಕೊಟ್ಟು ಅವರ ಅಭಿಮಾನಿಗಳನ್ನು, ಜನಸಾಮಾನ್ಯರನ್ನು ತಬ್ಬಿಬ್ಬುಗೊಳಿಸಬಾರದು.

ಚಂದ್ರಪ್ರಭಕಠಾರಿ,ಬೆಂಗಳೂರು

***

ADVERTISEMENT

ಕನ್ನಡ ಭಾಷೆ ಮಾಯ

ಈಗ ನವೆಂಬರ್ ತಿಂಗಳು. ತನುಮನದಲ್ಲೂ ಉಸಿರಲ್ಲೂ ಕನ್ನಡದ ನುಡಿ ತುಂಬಿರಬೇಕಾದ ತಿಂಗಳು! ಆದರೆ, ಮಕ್ಕಳ ನಾಲಿಗೆಯಲ್ಲಿ ಕನ್ನಡ ಮಾಯವಾಗಿದೆ! ಅಪ್ಪ, ಅಮ್ಮ, ಅಕ್ಕ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ಮಾವ, ಅತ್ತೆ, ಅಜ್ಜಿ, ಅಜ್ಜ ಪದಗಳೆಲ್ಲ ಈಗಿನ ಮಕ್ಕಳಿಗೆ ಮರೀಚಿಕೆ ಆಗಿವೆ. ಅಪ್ಪ–ಅಮ್ಮ ಮಾಯವಾಗಿ ಆ ಜಾಗವನ್ನು ‘ಮಮ್ಮಿ– ಡ್ಯಾಡಿ’ ಆಕ್ರಮಿಸಿಕೊಂಡಿವೆ. ವಯಸ್ಸಿನ ಭೇದ, ಅಂತರವಿಲ್ಲದೆ ‘ಆಂಟಿ–ಅಂಕಲ್’ ಪದಗಳ ಸಂಬಂಧ ಎಲ್ಲೆಲ್ಲೂ ಬೆಸೆದುಕೊಂಡಿದೆ. ದೊಡ್ಡವರೇ ಬರಲಿ, ಚಿಕ್ಕವರೇ ಬರಲಿ... ‘ಆಂಟಿ ಬಂದರು, ಅಂಕಲ್ ಬಂದರು’ ಎಂದು ಚಿಕ್ಕಮಕ್ಕಳು ಕುಣಿದಾಡುವಂತಾಗಿದೆ. ಕಡೆಗೆ ಮನೆ ಮುಂದೆ ಭಿಕ್ಷುಕ ಕಂಡರೂ ‘ಅಂಕಲ್ ಬಂದರು’ ಎನ್ನುವಂತಾಗಿದೆ. ಹೀಗಾದರೆ ‘ಕನ್ನಡಮ್ಮ’ನ ಗತಿ?

ಟಿ.ಎಂ. ಮಾನಪ್ಪ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.