ADVERTISEMENT

ಇವರು ಕಾನೂನುಪಾಲಕರೇ?

​ಪ್ರಜಾವಾಣಿ ವಾರ್ತೆ
Published 11 ಮೇ 2021, 19:45 IST
Last Updated 11 ಮೇ 2021, 19:45 IST

ಲಾಕ್‍ಡೌನ್‍ ಸಂದರ್ಭದಲ್ಲಿ ಪೊಲೀಸರು ಲಾಠಿ ಬಳಸುತ್ತಿರುವ ಕ್ರಮ ಅಕ್ರಮವಾದುದು, ಕಾನೂನಿಗೆ ವಿರುದ್ಧವಾದುದು. ಶಿಕ್ಷೆ ಮತ್ತು ಅಧಿಕಾರದ ಸಂಕೇತವಾದ ಲಾಠಿಯನ್ನು ಕಾನೂನನ್ನು ಪಾಲಿಸದ ಗುಂಪನ್ನು ಚದುರಿಸಲು ಕಾನೂನುಬದ್ಧ ರೀತಿಯಲ್ಲಿ ಬಳಸಲು ಅವಕಾಶವಿದೆ ಅಷ್ಟೆ.

ಪೊಲೀಸರೂ ಮನುಷ್ಯರೇ ಆಗಿರುವುದರಿಂದ ಅವರ ಪೈಕಿ ಕೆಲವರಲ್ಲಿ ಒತ್ತಡದ ಸ್ಥಿತಿಯಲ್ಲಿ ಕಾಣಿಸಿಕೊಳ್ಳುವ ಅಸಹಾಯಕತೆ, ಅವಿವೇಕತನ, ಅಧಿಕಾರಸ್ಥರನ್ನು ಮೆಚ್ಚಿಸಬೇಕೆಂಬ ತವಕ ಮತ್ತು ಹಿಂಸಾನಂದದ ರೋಗಿಷ್ಟ ಮನಃಸ್ಥಿತಿಗಳು ಅಧಿಕಾರದ ಬಲ ಪಡೆದು ಲಾಠಿಯ ಮೂಲಕ ವ್ಯಕ್ತಗೊಳ್ಳುತ್ತವೆ.

ಎದುರು ಸಿಕ್ಕಾಗ ಮೌಖಿಕ ಎಚ್ಚರಿಕೆ ಕೊಟ್ಟು ‘ಹೋಗಿ’ ಎಂದು ಹೇಳಿ ಹಿಂದಿನಿಂದ ಲಾಠಿಯೇಟು ಕೊಡುವ ಪೊಲೀಸರನ್ನು ನೋಡಿದರೆ ವ್ಯಥೆಯಾಗುತ್ತದೆ. ನಿಸ್ಸಹಾಯಕ ನಾಗರಿಕರ ಕಪಾಳಕ್ಕೆ ಹೊಡೆಯುವ, ಓಡುತ್ತಿರುವವರನ್ನೂ ಬಿಡದೆ ಅಟ್ಟಿಸಿಕೊಂಡು ಹೋಗಿ ಹೊಡೆಯುವ, ಅಂಥ ದೌರ್ಜನ್ಯವನ್ನು ವಿರೋಧಿಸುವವರನ್ನು ಗುಂಪುಗೂಡಿ ಥಳಿಸುವ ಪೊಲೀಸರನ್ನು ಕಾನೂನುಪಾಲಕರೆಂದು ಕರೆಯುವುದು ಹೇಗೆ?

ADVERTISEMENT

ನಾಗರಿಕರ ಮೇಲೆ ಪೊಲೀಸರ ಆಕ್ರಮಣ ಯಾವುದೇ ಸಂದರ್ಭದಲ್ಲಾದರೂ ಕಾನೂನಿಗೆ ವಿರುದ್ಧವಾದುದೆಂದು ಇವುಗಳ ಬಗ್ಗೆ ಅರಿವಿರುವ ಮೇಲಧಿಕಾರಿಗಳು, ನ್ಯಾಯವೇತ್ತರು, ನಿರ್ದಿಷ್ಟವಾಗಿ, ಸ್ಪಷ್ಟವಾಗಿ ಮತ್ತು ಅಧಿಕೃತವಾಗಿ ಹೇಳದೆ, ಕಾನೂನು ಕ್ರಮ ತೆಗೆದುಕೊಳ್ಳದೆ, ಜಾರಿಕೆಯ ಹೇಳಿಕೆಗಳನ್ನು ಕೊಡುತ್ತಿರುವುದೂ ಸರಿಯಲ್ಲ.

ಲಾಕ್‍ಡೌನ್‍ ಸಂದರ್ಭಕ್ಕೆ ಸಿಲುಕಿ ನಾನಾ ರೀತಿಯಲ್ಲಿ ನರಳುತ್ತಿರುವ ಅಮಾಯಕ ಜನರನ್ನು ನಿಯಂತ್ರಿಸಲು ಎಲ್ಲ ಊರುಗಳಲ್ಲೂ ಹಿರಿಯ ವಯಸ್ಸಿನ, ಲಾಠಿರಹಿತ ಪೊಲೀಸರನ್ನೇ ಆದಷ್ಟುಮಟ್ಟಿಗೂ ನಿಯೋಜಿಸುವುದು ಒಳ್ಳೆಯದು.

-ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.