ADVERTISEMENT

ಈ ಸಂದರ್ಭವನ್ನು ರೈತರ ಹಿತಕ್ಕೆ ಬಳಸಿಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 20:00 IST
Last Updated 29 ಮಾರ್ಚ್ 2020, 20:00 IST

‘ರೈತರಿಂದ ಗ್ರಾಹಕರಿಗಾಗಿ’ ಎಂಬ ತತ್ವದ ಆಧಾರದ ಮೇಲೆ ಪ್ರಾರಂಭವಾದ ಹಾಪ್‌ಕಾಮ್ಸ್, ತನ್ನ ಧ್ಯೇಯೋದ್ದೇಶಗಳನ್ನೇ ಮರೆತಂತಿದೆ. ರೈತ ಮತ್ತು ಗ್ರಾಹಕರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಬೇಕಿದ್ದ ಈ ಸಂಸ್ಥೆಯು ಮಾರುಕಟ್ಟೆಯ ದಲ್ಲಾಳಿಗಳ ದೇವರಂತೆ ಮೆರೆಯುತ್ತಿದೆ. ಕೊರೊನಾ ಸೋಂಕಿನಿಂದ ಜನ ಗೃಹಬಂಧನದಲ್ಲಿದ್ದಾರೆ.

ಬೆಂಗಳೂರು ಡೈರಿಯು ಈ ಸಂಕಟದ ಕಾಲದಲ್ಲಿ ತನ್ನ ಉತ್ಪನ್ನಗಳು ಗ್ರಾಹಕರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಕ್ರಮ ಕೈಗೊಂಡಿದೆ. ಆದರೆ ಹಾಪ್‌ಕಾಮ್ಸ್ ಮಾತ್ರ ಈ ಸನ್ನಿವೇಶಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ, ನಷ್ಟವೆಂಬ ಸಂತೆಯಲ್ಲಿ ಆರಾಮಾಗಿ ನಿದ್ರೆ ಮಾಡುತ್ತಿದೆ. ಮಳಿಗೆಗಳು ತೆರೆದಿರುತ್ತವೆಯಾದರೂ ಹಲವೆಡೆ ಹಣ್ಣು, ತರಕಾರಿಗಳು ದೊರೆಯುವುದು ದುರ್ಲಭವಾಗಿದೆ.

ಈ ಸನ್ನಿವೇಶವನ್ನು ತೋಟಗಾರಿಕೆ ಇಲಾಖೆಯು ರೈತರ ಹಿತರಕ್ಷಣೆಗೆ ಬಳಸಿಕೊಳ್ಳಬೇಕು. ಗ್ರಾಹಕಸ್ನೇಹಿ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಆಯ್ದ ಬಡಾವಣೆಗಳಲ್ಲಿ ನೇರವಾಗಿ ಗ್ರಾಹಕರಿಗೆ ತಲುಪುವಂತೆ ಕೂಡಲೇ ಹಣ್ಣು, ತರಕಾರಿಗಳನ್ನು ಸರಬರಾಜು ಮಾಡಬಹುದಾಗಿದೆ. ತನ್ನ ಮಾರಾಟ ಮಳಿಗೆಗಳಲ್ಲಿ ಪೊಲೀಸ್‌ ಮತ್ತು ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಸಮಯವನ್ನು ನಿಗದಿಪಡಿಸಿ, ರೈತರ ವ್ಯವಸಾಯೋತ್ಪನ್ನಗಳನ್ನು ಮಾರಾಟ ಮಾಡುವುದರಿಂದ ರೈತರು, ಗ್ರಾಹಕರು ಹಾಗೂ ಇಲಾಖೆಗೆ ಒಳ್ಳೆಯ ಲಾಭ ಬರುವುದರಲ್ಲಿ ಸಂದೇಹವಿಲ್ಲ.

ADVERTISEMENT

–ಚಿ. ಉಮಾಶಂಕರ್, ಲಕ್ಷ್ಮೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.