ADVERTISEMENT

ವಾಚಕರ ವಾಣಿ | ಲಸಿಕೆ ಲಭ್ಯತೆ: ವಸ್ತುಸ್ಥಿತಿ ಹೀಗೂ ಇರಬಹುದು

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 21:54 IST
Last Updated 30 ಜೂನ್ 2021, 21:54 IST

ಇತ್ತೀಚಿನ ಕಾಲಮಾನದಲ್ಲಿ ಜನರಿಗೆ ಇದ್ದದ್ದನ್ನು ಇದ್ದಂತೆ ನೋಡುವ, ನಿಷ್ಪಕ್ಷಪಾತವಾಗಿ ಅಥವಾ ಸ್ವಲ್ಪ ವಿಚಾರ ಮಾಡಿ ಯೋಚಿಸುವ, ತಿಳಿದುಕೊಳ್ಳುವ ವ್ಯವಧಾನವೇ ಇಲ್ಲವೇನೋ ಎನಿಸುತ್ತಿದೆ. ಪ್ರತಿಯೊಂದು ಆಗುಹೋಗನ್ನೂ ತಿರುಚಿ ತಮಗೆ ಬೇಕಾದಂತೆ ವ್ಯಾಖ್ಯಾನಿಸುವ ಮನಃಸ್ಥಿತಿಯನ್ನು ಇಂಥ ಕಷ್ಟಕಾಲದಲ್ಲೂ ನಮ್ಮ ಜನ ಬಿಡಲಿಲ್ಲವಲ್ಲ ಎಂದು ವ್ಯಥೆ ಆಗುತ್ತದೆ.

ಇದಕ್ಕೆ ಒಂದು ಉದಾಹರಣೆ: ಕೋವಿಡ್‌ ಲಸಿಕೆ ಪೂರೈಕೆಯ ನೀತಿಯಂತೆ, ರಾಜ್ಯ ಸರ್ಕಾರ ಗಳಿಗೆ ನಿಗದಿ ಮಾಡಲಾಗಿದ್ದ ಶೇ 25ರಷ್ಟು ಡೋಸ್‌ ಲಸಿಕೆಗಳು ಸೇರಿದಂತೆ ಶೇ 75ರಷ್ಟು ಡೋಸ್‌ ಲಸಿಕೆಗಳನ್ನು ಕೇಂದ್ರ ಸರ್ಕಾರ ಖರೀದಿಸುತ್ತದೆ ಮತ್ತು ಉಳಿದ ಶೇ 25ರಷ್ಟು ಡೋಸ್‌ ಲಸಿಕೆಗಳು ಖಾಸಗಿ ಆಸ್ಪತ್ರೆಗಳಿಗೆಲಭ್ಯವಾಗುತ್ತವೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಭರಪೂರ ಲಭ್ಯವಾಗುತ್ತಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆಯಿಂದ ಜನ ಹೈರಾಣಾಗಿದ್ದಾರೆ.

ಈ ಸ್ಥಿತಿಯನ್ನು, ಸರ್ಕಾರಿ ಕೋಟಾದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾರಿಕೊಳ್ಳುತ್ತಿದ್ದಾರೆ ಅಥವಾ ಪೂರೈಕೆದಾರರು ಹೆಚ್ಚಿನ ಬೆಲೆ ಸಿಗುವುದರಿಂದ ಖಾಸಗಿಯವರಿಗೇ ಹೆಚ್ಚು ಲಸಿಕೆ ಪೂರೈಸುತ್ತಿದ್ದಾರೆ ಎಂದುಪ್ರಚಾರ ಮಾಡಲಾಗುತ್ತಿದೆ. ಒಂದು ಉದಾಹರಣೆ: ಸರ್ಕಾರಿ ಆಸ್ಪತ್ರೆಗೆ 10 ಡೋಸ್‌ ಲಸಿಕೆ ಹಾಗೂ ಖಾಸಗಿ ಆಸ್ಪತ್ರೆಗೆ 10 ಡೋಸ್‌ ಲಸಿಕೆ ಪೂರೈಕೆ ಆಗಿದೆ ಎಂದು ಇಟ್ಟುಕೊಳ್ಳೋಣ.

ADVERTISEMENT

ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಬೆಲೆ ಕೊಟ್ಟು ಲಸಿಕೆ ತೆಗೆದುಕೊಳ್ಳಬೇಕು ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗುತ್ತದೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗೆ 20 ಜನ ಹೋದರೆ, ಖಾಸಗಿ ಆಸ್ಪತ್ರೆಗೆ ಇಬ್ಬರಷ್ಟೇ ಹೋಗುತ್ತಾರೆ. ಆಗ ಇವರ ಪೈಕಿ ಸರ್ಕಾರಿ ಆಸ್ಪತ್ರೆಗೆ ಹೋದವರಲ್ಲಿ 10 ಜನರಿಗೆ ಲಸಿಕೆ ಸಿಗುವುದಿಲ್ಲ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಇನ್ನೂ 8 ಡೋಸ್‌ ಲಸಿಕೆ ಬಾಕಿ ಉಳಿದಿರುತ್ತದೆ. ವಸ್ತುಸ್ಥಿತಿ ಇದು ಆಗಿರಬಾರದೇಕೆ?
-ಟಿ.ವಿ.ಬಿ.ರಾಜನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.