ADVERTISEMENT

ವಾಚಕರ ವಾಣಿ: ರಾಜಕಾರಣದಲ್ಲಿ ವಿವೇಕ ಮನೆಮಾಡಲಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 19:30 IST
Last Updated 11 ನವೆಂಬರ್ 2020, 19:30 IST

‘ಸಾಂಸ್ಕೃತಿಕ ನಂಟಿನ ರಾಜಕಾರಣ’ ಕುರಿತ ಸರ್ಫ್ರಾಜ್‌ ಚಂದ್ರಗುತ್ತಿ ಅವರ ಲೇಖನ (ಸಂಗತ, ನ. 11) ಮೌಲಿಕವಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗಿನ ನಮ್ಮ ಇಂದಿನ ರಾಜಕಾರಣವು ಸಾಹಿತ್ಯ, ಸಂಸ್ಕೃತಿಯಿಂದ ದೂರವಾದ ಕಾರಣ, ಸಾಮಾಜಿಕ ಮತ್ತು ಸಾಂಸ್ಕೃತಿಕವಾದ ಒಂದು ಶುಷ್ಕ ವಾತಾವರಣವು ದೇಶವನ್ನು ಆವರಿಸಿದೆ. ಪ್ರತಿಯೊಂದು ಕ್ಷೇತ್ರವೂ ಪಕ್ಷ ರಾಜಕಾರಣದ ಅಖಾಡ ಆಗಿ ಪರಿವರ್ತನೆಗೊಂಡಿದೆ. ವಿದ್ವತ್ತು, ಗುಣ, ಗೌರವ ಹಿಂದೆ ಸರಿದಿವೆ. ಓಲೈಕೆ, ವೈಯಕ್ತಿಕ ನಿಲುವುಗಳು ಮುನ್ನೆಲೆಗೆ ಬರುತ್ತಿವೆ. ಸಾಹಿತ್ಯ, ಸಂಸ್ಕೃತಿ ಕ್ಷೇತ್ರವನ್ನೂ ರಾಜಕಾರಣಿಗಳು ಆಕ್ರಮಿಸಿಕೊಳ್ಳುತ್ತಿದ್ದಾರೆ. ಸಾಹಿತಿ, ಕಲಾವಿದರು ರಾಜಕಾರಣಕ್ಕೆ ಹತ್ತಿರವಾಗಿ ರಾಜಕಾರಣಿಗಳ ಕಣ್ಣಲ್ಲಿ ಅಗ್ಗವಾಗುತ್ತಿದ್ದಾರೆ.

ವಂಶ ರಾಜಕಾರಣವು ರಾಜಕೀಯದ ಅಧೋಗತಿಗೆ ಒಂದು ಕಾರಣವಾದರೆ, ಒಟ್ಟಾರೆ ಮೌಲ್ಯಗಳ ಕುಸಿತ, ಅಧಿಕಾರದಾಹ ಎಲ್ಲದಕ್ಕೂ ಮೂಲ ಕಾರಣವಾಗಿವೆ. ಓದು, ಬರಹದಿಂದ ದೂರ ಸರಿದಿರುವ ರಾಜಕಾರಣಿಗಳಿಂದ ಉದಾತ್ತ ಸಂಸ್ಕಾರವನ್ನು, ಮುತ್ಸದ್ದಿತನ, ದೂರದೃಷ್ಟಿ, ಹೃದಯ ವೈಶಾಲ್ಯ, ಸಮಾಜ– ಸಂಸ್ಕೃತಿ ಕುರಿತು ಸೂಕ್ಷ್ಮ ಮನೋಭಾವ, ಸಂವೇದನೆಯನ್ನು ನಿರೀಕ್ಷಿಸುವುದು ಬಹಳ ದೂರದ ಮಾತಾಗಿದೆ. ವಿವೇಕ, ವಿವೇಚನೆ, ಚಿಂತನೆ ರಾಜಕಾರಣದಲ್ಲಿ ಮನೆಮಾಡಲಿ ಎಂದು ಆಶಿಸೋಣ.

– ವೆಂಕಟೇಶ ಮಾಚಕನೂರ, ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.