ADVERTISEMENT

ದಸರಾಗೆ ನೀತಿ ಸಂಹಿತೆ?

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 20:15 IST
Last Updated 9 ಅಕ್ಟೋಬರ್ 2018, 20:15 IST

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಈ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆ.ಆರ್‌. ನಗರ ತಾಲ್ಲೂಕು ಮೈಸೂರು ಜಿಲ್ಲೆಯಲ್ಲಿರುವುದರಿಂದ ಇಡೀ ಜಿಲ್ಲೆಗೆ ನೀತಿ ಸಂಹಿತೆ ಅನ್ವಯವಾಗುತ್ತದೆ. ನೀತಿ ಸಂಹಿತೆಯ ವ್ಯಾಪ್ತಿಯಿಂದ ದಸರಾ ಆಚರಣೆಯನ್ನು ಹೊರಗಿಡುವಂತೆ ಜಿಲ್ಲಾಡಳಿತವು ಚುನಾವಣಾ ಆಯೋಗಕ್ಕೆ ಮನವಿ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಹಬ್ಬಗಳ ಆಚರಣೆಗೂ ನೀತಿ ಸಂಹಿತೆ ಅನ್ವಯವಾಗುತ್ತದೆ ಎಂಬುದೇ ಅಸಂಬದ್ಧ ವಿಚಾರ. ದಸರಾ ಸೇರಿದಂತೆ ನಮ್ಮ ಹಬ್ಬ ಹರಿದಿನಗಳು ಮೊದಲೇ ನಿರ್ಧಾರವಾಗುವಂಥವುಗಳು. ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಜಾತ್ರೆ, ಉತ್ಸವಗಳಿಗೆ ಚುನಾವಣೆ ಅಡ್ಡಿಯಾಗಬಾರದು.

ವಿ.ಜಿ. ಇನಾಮದಾರ, ಸಾರವಾಡ, ವಿಜಯಪುರ

ADVERTISEMENT

***

ಖಾಲಿ ಹುದ್ದೆ ತುಂಬಿರಿ

2,503 ಬ್ಯಾಕ್‍ಲಾಗ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದೆಂದು ಸಮಾಜಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ (ಪ್ರ.ವಾ., ಅ. 8).

ಸರ್ಕಾರದ ವಿವಿಧ ಇಲಾಖೆಗಳ ಅಧೀನದಲ್ಲಿರುವ ಸುಮಾರು 250 ಸಂಸ್ಥೆಗಳ ಪೈಕಿ 142 ಸಂಸ್ಥೆಗಳು ಇನ್ನೂ ರೋಸ್ಟರ್ ರಿಜಿಸ್ಟರ್ ಸಲ್ಲಿಸಿಲ್ಲ ಎಂದು ಸಮಾಜಕಲ್ಯಾಣ ಇಲಾಖೆಯ ಮೂಲಗಳೇ ತಿಳಿಸಿವೆ.

ರೋಸ್ಟರ್ ರಿಜಿಸ್ಟರ್ ಸಲ್ಲಿಸುವಂತೆ ಆಗಸ್ಟ್ 21ರಂದೇ ಇಲಾಖೆಯ ಆಯುಕ್ತರು ಪತ್ರ ಬರೆದಿದ್ದರೂ, ಹಲವು ಸಂಸ್ಥೆಗಳು ಈವರೆಗೂ ಇದನ್ನು ಸಲ್ಲಿಸಿಲ್ಲವೆಂಬುದು ಮೀಸಲಾತಿಯ ಬಗ್ಗೆ ಆಯಾ ಸಂಸ್ಥೆಗಳ ಮುಖ್ಯಸ್ಥರಿಗೆ ಇರುವ ಕಾಳಜಿಯನ್ನು ಪ್ರದರ್ಶಿಸುತ್ತದೆ. ಹಿರಿಯ ಅಧಿಕಾರಿಗಳ ಉದಾಸೀನ ಧೋರಣೆಯಿಂದಲೇ ಅನೇಕ ಇಲಾಖೆಗಳಲ್ಲಿ ಸಾವಿರಾರು ಉದ್ಯೋಗಗಳು ಖಾಲಿ ಉಳಿದಿವೆ. ಆಡಳಿತ ಪಕ್ಷದಲ್ಲಿರುವ ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ವಹಿಸಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು.

ಕು.ಸ. ಮಧುಸೂದನ, ರಂಗೇನಹಳ್ಳಿ, ತರೀಕೆರೆ

***

ಕುಮುದ್ವತಿ ಉಳಿಸಿ

ಅರ್ಕಾವತಿಯ ಉಪನದಿಯಾದ ಕುಮುದ್ವತಿ ನದಿ ಬರಿದಾಗುತ್ತಿದೆ. ಈ ನದಿಯ ಎರಡೂ ದಡಗಳ ಜಮೀನಿನಲ್ಲಿರುವ ಮರಗಳು ಒಂದೊಂದಾಗಿ ಖಾಲಿಯಾಗುತ್ತಿವೆ. ತೊರೆಯಲ್ಲಿರುವ ಮರಳಿಗೆ ದಂಧೆಕೋರರು ಕೈಹಾಕಿ
ದ್ದಾರೆ. ನಿತ್ಯವೂ ಲೋಡುಗಟ್ಟಲೆ ಮರಳಿನ ಗಣಿಗಾರಿಕೆ ನಡೆಯುತ್ತಿದೆ. ಕುಮುದ್ವತಿ ತೊರೆಯ ದಡಗಳಲ್ಲಿ ಸಾಕಷ್ಟು ಗೋಣಿಮರಗಳಿದ್ದು, ವಾರಕ್ಕೆ ಕನಿಷ್ಠ ಒಂದು ಮರ ದಂಧೆಕೋರರಿಗೆ ಬಲಿಯಾಗುತ್ತಿದೆ.

ಮರಳನ್ನು ಬಗೆದ ನಂತರ ತೊರೆಯಲ್ಲಿರುವ ಉಳಿದ ಮಣ್ಣು, ಇಟ್ಟಿಗೆ ತಯಾರಿಕೆಗೆ ಹೋಗುತ್ತಿದೆ! ಅಕ್ಕಪಕ್ಕ
ದಲ್ಲಿರುವ ಬಂಡೆಗಳು ಸೈಜುಗಲ್ಲಾಗಿ, ಜಲ್ಲಿಯಾಗಿ ಮಾರ್ಪಟ್ಟು ಕಟ್ಟಡ ನಿರ್ಮಾಣಕ್ಕೆ ಹೋಗುತ್ತಿವೆ. ತೊರೆಯ ದಡದಲ್ಲಿರುವ ಹಳ್ಳಿಗಳಿಗೆ ಜೀವತಾಣವಾಗಿದ್ದ ಪ್ರಕೃತಿಯ ಎಲ್ಲಾ ಬಳುವಳಿಗಳನ್ನು ದೋಚಿದ ಮೇಲೆ ಉಳಿಯುವುದೇನು?ಗ್ರಾಮಗಳ ಮುಖಂಡರ ಪ್ರೋತ್ಸಾಹವಿಲ್ಲದೆ ಇಂಥ ಅಕ್ರಮ ಚಟುವಟಿಕೆಗಳು ನಡೆಯಲು ಸಾಧ್ಯವೇ? ಜನರ ದುರಾಸೆಗೆ ಮಿತಿಯೇ ಇಲ್ಲವೇ? ಕುಮುದ್ವತಿಯನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಸರಸ್ವತಿ, ಮರಸರಹಳ್ಳಿ, ಶ್ರೀನಿವಾಸಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.