ADVERTISEMENT

ಅನಗತ್ಯ ವಿಚಾರಕ್ಕೆ ಒತ್ತು!

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 19:43 IST
Last Updated 1 ಜನವರಿ 2019, 19:43 IST

ಅಂಗವಿಕಲ ನೌಕರರಿಗೆ ಉಚಿತ ಬಸ್‌ಪಾಸ್‌ ನೀಡುವ ವಿಚಾರವಾಗಿ ರಾಜ್ಯ ಅಂಗವಿಕಲರ ಕಾಯ್ದೆ ಅನುಷ್ಠಾನ ಘಟಕದ ಆಯುಕ್ತರು ನೀಡಿರುವ ಹೇಳಿಕೆಯನ್ನು ಓದಿ (ಪ್ರ.ವಾ., ಡಿ. 31) ವ್ಯಥೆಯಾಯಿತು. ಅಂಗವಿಕಲರನ್ನು ಕಿತ್ತು ತಿನ್ನುವಂತಹ ಅನೇಕ ಸಮಸ್ಯೆಗಳಿವೆ.

ಹೀಗಿರುವಾಗ ಆಯುಕ್ತರು, ಸಾರಿಗೆಗಾಗಿಯೇ ಶೇ 6ರಷ್ಟು ಭತ್ಯೆ ಪಡೆಯುತ್ತಿರುವ ಅಂಗವಿಕಲ ಸರ್ಕಾರಿ ನೌಕರರಿಗೆ ಉಚಿತ ಬಸ್ ಪಾಸ್ ಬೇಡಿಕೆ ಬಗ್ಗೆ ಒತ್ತಾಯ ಮಾಡಿರುವುದು ನಾಚಿಕೆಗೇಡಿನ ವಿಚಾರ. ವಿವಿಧ ಇಲಾಖೆಗಳಲ್ಲಿ ಅಂಗವಿಕಲ ನೌಕರರ ಮೇಲೆ ಆಗುತ್ತಿರುವ ದೌರ್ಜನ್ಯ, ಕಿರುಕುಳ; ಸೋಲಾರ್ ವಿದ್ಯುತ್ ಪಂಪ್ ಅಳವಡಿಕೆಯಲ್ಲಿ ಮೀಸಲಾತಿ ಮತ್ತು ರಿಯಾಯಿತಿ ನೀಡದಿರುವುದು, ಸ್ವಯಂ ಉದ್ಯೋಗದ ಸಾಲ ಸೌಲಭ್ಯದಿಂದ ವಂಚಿತರಾಗಿರುವುದು, ಮೀಸಲಾತಿ ಪ್ರಕಾರ ಉದ್ಯೋಗ ದೊರೆಯದಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲಸ್ನೇಹಿ ವಾತಾವರಣ ಇಲ್ಲದಿರುವುದು, ಮಾಸಾಶನವನ್ನು ಹೆಚ್ಚಿಸದಿರುವುದು, ಎನ್.ಜಿ.ಒ.ಗಳಿಂದ ಸೌಲಭ್ಯಗಳ ದುರುಪಯೋಗ, ಮಕ್ಕಳ ಮಾರಾಟ ದಂಧೆ… ಇಂಥ ಸಾಕಷ್ಟು ಸವಾಲುಗಳು ಅಂಗವಿಕಲರ ಮುಂದಿವೆ. ಇವುಗಳ ಮೇಲೆ ಬೆಳಕು ಚೆಲ್ಲಿ ನ್ಯಾಯ ಒದಗಿಸುವುದರ ಬದಲು, ಅಗತ್ಯವೇ ಇಲ್ಲದ ವಿಚಾರವನ್ನು ಚರ್ಚಿಸುತ್ತಿರುವ ನಮ್ಮ ಆಯುಕ್ತರ ಕಚೇರಿಯು ಇದ್ದೂ ಇಲ್ಲದಂತೆ.

ಚಂದ್ರಶೇಖರ ಪುಟ್ಟಪ್ಪ,ಬೆಂಗಳೂರು

ADVERTISEMENT

***
ಅನುವಾದ ಸಾಹಿತ್ಯದ ನಿರ್ಲಕ್ಷ್ಯ!

ಧಾರವಾಡದಲ್ಲಿ ನಡೆಯಲಿರುವ 84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ನೋಡಿ ನಿರಾಶನಾದೆ. ಏಕೆಂದರೆ, ಸಮ್ಮೇಳನದಲ್ಲಿ ಅನುವಾದ ಸಾಹಿತ್ಯವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ.

ಮೂರು ದಿನಗಳ ಕಾಲ ನಡೆಯುವ ಹತ್ತಾರು ಗೋಷ್ಠಿಗಳಲ್ಲಿ ಒಂದು ಗೋಷ್ಠಿಯನ್ನು ಅನುವಾದ ಕೃತಿಗಳ ವಿವೇಚನೆಗೆಂದೇ ಮೀಸಲಿಡಬೇಕಿತ್ತು. ಕೊನೆಯಪಕ್ಷ ಒಂದು ಉಪನ್ಯಾಸಕ್ಕಾದರೂ
ಅವಕಾಶ ಮಾಡಿಕೊಡಬೇಕಿತ್ತು. ಆದರೆ ಸಮ್ಮೇಳನದ ಆಯೋಜಕರು ಅನುವಾದ ಸಾಹಿತ್ಯದ ಬಗೆಗೆ ಸಂಪೂರ್ಣ ಕುರುಡರಾಗಿದ್ದು ವಿಷಾದದ ಸಂಗತಿ. ಅನುವಾದಗಳ ಚರ್ಚೆಗೆ ಅವಕಾಶ ಕೊಡದಿರುವ ಸಾಹಿತ್ಯ ಸಮ್ಮೇಳನವು ಅಪರಿಪೂರ್ಣವೆಂದೇ ಹೇಳಬೇಕಾಗುತ್ತದೆ.

ಡಾ. ತಿಪ್ಪೇಸ್ವಾಮಿ,ಮೈಸೂರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.