ADVERTISEMENT

ಇಂಗ್ಲಿಷ್‌ ಮಾಧ್ಯಮವೆಂದರೆ ಗುಣಮಟ್ಟವೇ?

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 19:45 IST
Last Updated 16 ಜೂನ್ 2019, 19:45 IST

‘ಬಡ ಕುಟುಂಬದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿ ಆರಂಭಿಸಲಾಗಿದೆ. ಮುಂದಿನ ವರ್ಷ ಹೆಚ್ಚುವರಿ ವಿಭಾಗಗಳನ್ನು ತೆರೆಯಲಾಗುವುದು’ ಎಂದು ಮುಖ್ಯಮಂತ್ರಿಹೇಳಿದ್ದಾರೆ (ಪ್ರ.ವಾ., ಜೂನ್‌ 15). ಇದರಿಂದ, ಇಂಗ್ಲಿಷ್‌ ಮಾಧ್ಯಮ ಎಂದರೆ ಗುಣಮಟ್ಟದ ಶಿಕ್ಷಣ, ಕನ್ನಡ ಮಾಧ್ಯಮ ಎಂದರೆ ಕಳಪೆ ಗುಣಮಟ್ಟದ ಶಿಕ್ಷಣ ಎಂದು ಸರ್ಕಾರವೇ ಹೇಳಿದಂತೆ ಆಯಿತು.

ಇಷ್ಟು ವರ್ಷ ಕೋಟ್ಯಂತರ ಮಕ್ಕಳಿಗೆ ಸರ್ಕಾರ ಗುಣಮಟ್ಟದ ಶಿಕ್ಷಣ ನೀಡದೆ ವಂಚಿಸಿದೆ ಎಂದಾಯಿತು. ಇಂಗ್ಲಿಷ್‌ ಮಾಧ್ಯಮವೇ ಗುಣಮಟ್ಟದ ಮಾನದಂಡ ಎನ್ನುವುದಕ್ಕೆ ಸರ್ಕಾರದ ಬಳಿ ಯಾವ ಪುರಾವೆಗಳಿವೆಯೋ ತಿಳಿಯದು.

ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗದ ಸರ್ಕಾರದ ಶಿಕ್ಷಣ ವ್ಯವಸ್ಥೆಯುಇಂಗ್ಲಿಷ್‌ ಮಾಧ್ಯಮದಲ್ಲಿ ಅದುಹೇಗೆ ಗುಣಮಟ್ಟದ ಶಿಕ್ಷಣ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಭಾಷೆಯ ಕಲಿಕೆಯನ್ನು ಈ ಹಿಂದೆಯೇ ಅಳವಡಿಸಲಾಗಿದೆ.

ADVERTISEMENT

ಅದು ಸಫಲವಾಗಿದ್ದರೆ ಈಗ ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನು ಆರಂಭಿಸುವ ಪ್ರಸಂಗವೇ ಬರುತ್ತಿರಲಿಲ್ಲ. ಈವರೆಗೂ ಒಂದು ಭಾಷೆಯಾಗಿ ಇಂಗ್ಲಿಷನ್ನು ಸಮರ್ಪಕವಾಗಿ ಕಲಿಸಲು ಸಾಧ್ಯವಾಗಿಲ್ಲ. ಮಾತೃ ಅಥವಾ ಪರಿಸರದ ಭಾಷೆಯಲ್ಲಿ ಕಲಿಯುವ ಮಗುವಿನ ಮೂಲಭೂತ ಹಕ್ಕನ್ನು ಸರ್ಕಾರ, ಪಾಲಕರು ಹಾಗೂ ಕೋರ್ಟ್‌ಗಳು ಸೇರಿ ಕಸಿಯುತ್ತಿರುವುದನ್ನು ಪ್ರಶ್ನಿಸುವುದಾದರೂ ಎಲ್ಲಿ?

-ವೆಂಕಟೇಶ್ ಮಾಚಕನೂರ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.