ADVERTISEMENT

ವಾಚಕರ ವಾಣಿ: ರೈತರ ಮನಸ್ಸುಗಳಲ್ಲಿ ಆತಂಕದ ಮಡು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 20:48 IST
Last Updated 24 ಆಗಸ್ಟ್ 2025, 20:48 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ರೈತರ ಮನಸ್ಸುಗಳಲ್ಲಿ ಆತಂಕದ ಮಡು

ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯು ರೈತರ ಬದುಕನ್ನು ದಿಕ್ಕೆಡಿಸಿದೆ. ಮಳೆಯು ರೈತರನ್ನು ಸಂತಸಪಡಿಸಿಲ್ಲ. ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಬಿತ್ತಿದ ಬೆಳೆಗಳು ಸರಿಯಾಗಿ ಫಸಲು ಕಾಣುತ್ತಿಲ್ಲ. ಶ್ರಮದ ಫಲ ರೈತನ ಕೈ ಸೇರದ ಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗುವ ಆತಂಕ ಎದುರಾಗಿದೆ. ರೈತರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಕೂಡಲೇ, ಅಧಿಕಾರಿಗಳು ಸರ್ವೆ ಮಾಡಿ ಸರ್ಕಾರದ ಗಮನಕ್ಕೆ ತರಬೇಕಿದೆ.‌

ADVERTISEMENT

⇒ಕುಂದೂರು ಮಂಜಪ್ಪ, ಹರಿಹರ 

ಬಾಯಿತುರಿಕೆಗಾಗಿ ಮಾತು ಸರಿಯೇ?

‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಆರೋಪ ಮಾಡಿದವನನ್ನು (ಮಹೇಶ್‌ ಶೆಟ್ಟಿ ತಿಮರೋಡಿ) ಒದ್ದು ಒಳಗೆ ಹಾಕಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿರುವುದು ವರದಿಯಾಗಿದೆ (ಪ್ರ.ವಾ., ಆಗಸ್ಟ್‌ 23). ಈ ಸುದ್ದಿ ಓದಿದರೆ ನಾವು ನಾಗರಿಕ ಸಭ್ಯ ಸಮಾಜದಲ್ಲಿದ್ದೇವಾ ಅಥವಾ ಗೂಂಡಾ ರಾಜ್ಯದಲ್ಲಿದ್ದೇವಾ ಎಂದು ಅಚ್ಚರಿ ಯಾಗುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಬಳಸುವ ಮಾತುಗಳು ಸಾರ್ವಜನಿಕ ಸಭ್ಯತೆಯಿಂದ ಕೂಡಿರಬೇಕು. ಜೊತೆಗೆ, ನಾಗರಿಕರಿಗೆ ಮಾದರಿಯಾಗಬೇಕು. 

⇒ಆನಂದ ರಾಮತೀರ್ಥ, ಜಮಖಂಡಿ 

‘ಕಾವೇರಿ’ಗೂ ಜಗ್ಗದ ಲಂಚಾವತಾರ

ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ‘ಕಾವೇರಿ-2.0’ ತಂತ್ರಾಂಶ ಬಂದ ಮೇಲೆ ಎಲ್ಲವೂ ಆನ್‌ಲೈನ್ ಆಗುತ್ತದೆ. ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ಬೊಬ್ಬೆ ಹಾಕಿದ ಸರ್ಕಾರ ಈಗ ಏನೂ ಕಾಣದಂತೆ ಕಣ್ಮುಚ್ಚಿ ಕುಳಿತಿದೆ. ಮಧ್ಯವರ್ತಿಗಳ ಉಪಟಳ ಜಾಸ್ತಿಯಾಗಿದೆ. ಅಧಿಕಾರಿಗಳ ಭ್ರಷ್ಟಾಚಾರ ಪರ್ಸೆಂಟೇಜ್ ಮೇಲೆ ನಿಂತಿದೆ. ಸಂಬಂಧಪಟ್ಟ ಪತ್ರಗಳಲ್ಲಿ 
ಏನೇ ದೋಷವಿದ್ದರೂ ಕೊಡುವವರು, ತೆಗೆದುಕೊಳ್ಳುವವರೇ ಜವಾಬ್ದಾರರು ಎಂದು ಹೇಳಿ, ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ಈ ಪತ್ರಗಳಿಗೆ ಪತ್ರ ಬರಹಗಾರರ ಅವಶ್ಯಕತೆಯೇನಾದರೂ ಇದೆಯಾ? ಸ್ವಯಂ ಘೋಷಣೆ ಮಾಡಿಕೊಳ್ಳಬಹುದಲ್ಲವೇ?

⇒ಶ್ರುತಿ ಎ.ಸಿ. ಆನುಮಾನಹಳ್ಳಿ, ರಾಮನಗರ

ದಸರಾ ಮುಕುಟಕ್ಕೆ ಮತ್ತೊಂದು ಗರಿ

ಈ ಬಾರಿ ಮೈಸೂರು ದಸರಾ ಮಹೋತ್ಸವವನ್ನು ಬುಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿರುವುದು ಸಂತಸ ತಂದಿದೆ. ಬಾನು ಅವರು, ರೈತ ಸಂಘ ಹಾಗೂ ಕನ್ನಡ ಚಳವಳಿಯ ಒಡನಾಡಿಯೂ ಹೌದು. ಅವರಿಂದ ಉದ್ಘಾಟನೆ ಆಗಲಿರುವುದು ದಸರಾ ಮಹೋತ್ಸವಕ್ಕೆ ಮತ್ತೊಂದು ಗರಿ ಸೇರ್ಪಡೆಯಾದಂತಾಗಲಿದೆ.

⇒ಬಸಪ್ಪ ಎಸ್. ಮುಳ್ಳೂರ, ಹಲಗತ್ತಿ 

ಸಾಂವಿಧಾನಿಕ ಮಾರ್ಗ ಪಾಲಿಸಲಿ

ಕರ್ನಾಟಕದ ರಾಜಕೀಯ ಪಕ್ಷವೊಂದರ ಸದಸ್ಯರು ಭ್ರಷ್ಟಾಚಾರ ನಿರ್ಮೂಲನೆ ಅಭಿಯಾನದ ಹೆಸರಿನಲ್ಲಿ ಸರ್ಕಾರಿ ಕಚೇರಿಗಳಿಗೆ ದಿಢೀರನೆ ಗುಂಪಾಗಿ ಪ್ರವೇಶಿಸಿ ಹಲವು ಪ್ರಶ್ನೆಗಳನ್ನು ಕೇಳುವುದಲ್ಲದೆ, ಅದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಸರ್ಕಾರಿ ವಾಹನವನ್ನು ಅಡ್ಡಗಟ್ಟಿ ಲಾಗ್ ಪುಸ್ತಕ ಕೇಳುವುದೂ ನಡೆದಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಾದದ್ದು ಅತ್ಯಗತ್ಯ. ಆದರೆ, ಅದನ್ನು ನಿರ್ವಹಿಸಬೇಕಾದ ರೀತಿಯೂ ಪ್ರಜಾಸತ್ತಾತ್ಮಕ ವಾಗಿಯೇ ಇರಬೇಕಲ್ಲವೇ? ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಮೇಲಧಿಕಾರಿಗೆ, ಲೋಕಾಯುಕ್ತರಿಗೆ ದೂರು ನೀಡಬಹುದು. ಆದಾಗ್ಯೂ ಕ್ರಮ ಜರುಗಿಸದಿದ್ದಾಗ ನ್ಯಾಯಾಲಯದ ಮೊರೆ ಹೋಗಬಹುದು. ಇದನ್ನು ಬದಿಗೊತ್ತಿ ನೇರವಾಗಿ ಕಾರ್ಯಾಚರಣೆಗೆ ಇಳಿಯುವುದು ಸರಿಯಲ್ಲ. 

⇒ಭೀಮಾನಂದ ಮೌರ್ಯ, ಮೈಸೂರು

ಮೂಲ ಜಾತಿಗೆ ಅಪಚಾರ ಬೇಡ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಹಿಂದುಳಿದ ವರ್ಗಕ್ಕೆ ಸೇರಿದ ಜಾತಿಗಳ ಹೆಸರುಗಳನ್ನು ಘೋಷಿಸಿದೆ. ಅದರಲ್ಲಿ ಕ್ರಮಸಂಖ್ಯೆ 190 ಮತ್ತು ಕ್ರಮಸಂಖ್ಯೆ 319ರಲ್ಲಿ ಅನುಕ್ರಮವಾಗಿ ‘ಬಿಲ್ಲವ ಕ್ರಿಶ್ಚಿಯನ್’ ಮತ್ತು ‘ಈಡಿಗ ಕ್ರಿಶ್ಚಿಯನ್’  ಎಂದು ಪ್ರಕಟಿಸಲಾಗಿದೆ. ಯಾರು, ಯಾವ ಧರ್ಮವನ್ನಾದರೂ ಸೇರಿಕೊಳ್ಳಲಿ, ಅದು ಅವರವರ ಇಚ್ಛೆ. ಆದರೆ, ಇನ್ನೊಂದು ಧರ್ಮ ಸೇರಿಕೊಂಡು ಮೂಲ ಜಾತಿಯ ಹೆಸರು ಬಳಸುವುದು ಖಂಡನೀಯ. ಆಯೋಗವು ಇಂತಹ ದ್ವಂದ್ವ ನಿಲುವಿನ ಹೆಸರನ್ನು ಮಾನ್ಯ ಮಾಡಬಾರದು.

⇒ಗಣಪತಿ ನಾಯ್ಕ್, ಕಾನಗೋಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.