ADVERTISEMENT

ವಾಚಕರ ವಾಣಿ: ಯಕ್ಷಗಾನದ ಪಾವಿತ್ರ್ಯ ಅಳಿಯದಿರಲಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 1:28 IST
Last Updated 12 ಜೂನ್ 2025, 1:28 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಯಕ್ಷಗಾನದ ಪಾವಿತ್ರ್ಯ ಅಳಿಯದಿರಲಿ

ಕರಾವಳಿ ಕರ್ನಾಟಕದ ಯಕ್ಷಗಾನ ಕಲೆಯು ರಾಜಕೀಯ ಪಕ್ಷವೊಂದರ ಮತ್ತು ಅದರ ನಾಯಕನ ವೈಭವೀಕರಣದ ಗಾನಸುಧೆ ಹರಿಸುವ ದುರಂತದೆಡೆಗೆ ಸಾಗುತ್ತಿರುವುದನ್ನು ನಾರಾಯಣ ಎ. ಅವರ ಲೇಖನವು (ಪ್ರ.ವಾ., ಜೂನ್ 11) ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. 

ADVERTISEMENT

ಯಕ್ಷಗಾನ ಕಲೆಗೆ ಮೆತ್ತಿಕೊಳ್ಳುತ್ತಿರುವ ಈ ಕಳಂಕವನ್ನು ಹೀಗೆಯೇ ಬಿಟ್ಟರೆ ಅದು ಮುಂದೆ ಈ ಕಲೆಯ ಪಾವಿತ್ರ್ಯ, ಮೌಲ್ಯವನ್ನೂ ಹಾಳು ಮಾಡುತ್ತದೆ. ಜನಮಾನಸದಲ್ಲಿ ಹಲವು ಬಗೆಯ ವಿಷಮ ಭಾವಗಳನ್ನು ಬಿತ್ತಿ ಪೋಷಿಸ ತೊಡಗುತ್ತದೆ. ಭವಿಷ್ಯದ ಅವಘಡಗಳಿಂದ ಈ ಕಲೆಯನ್ನು ಪಾರು ಮಾಡಲು ಹಿರಿಯ ಕಲಾವಿದರು, ವಿದ್ವಾಂಸರು, ಚಿಂತಕರು ದೊಡ್ಡ ಸ್ತರದಲ್ಲಿ ಸೂಕ್ತ ಕ್ರಮವಹಿಸುವ ಅನಿವಾರ್ಯ ಇದೆ.

ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು 

**** 

ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು 

ರಾಜ್ಯ ಸರ್ಕಾರವು ಆಗಸ್ಟ್ 15ರಿಂದ ಅನ್ವಯ ಆಗುವಂತೆ, ಮುಜರಾಯಿ ದೇಗುಲಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಲು ಮುಂದಾಗಿರುವುದು ಪ್ರಶಂಸನೀಯ. ಆದರೆ, ಈ ನಿಯಮ ಎಷ್ಟರಮಟ್ಟಿಗೆ ಜಾರಿಯಾಗಲಿದೆ ಎಂಬುದರ ಮೇಲೆ ಅದರ ಯಶಸ್ಸು ನಿಂತಿದೆ. ಈ ಹಿಂದೆ, ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ವಿಧಿಸಲಾಗಿತ್ತು. ಸಾರ್ವಜನಿಕ ಸ್ಥಳಗಳ ಹತ್ತಿರ ತಂಬಾಕು ಮಾರಾಟದ ಮೇಲೂ ನಿರ್ಬಂಧ ಹೇರಲಾಗಿತ್ತು. ಆದರೆ, ಸರ್ಕಾರದ ಈ ಆದೇಶವು ಇಂದಿಗೂ ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ.

ಸರ್ಕಾರವು ಈ ಬಾರಿ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ದೇಗುಲದ ಸಿಬ್ಬಂದಿ ಮತ್ತು ಭಕ್ತರಿಗೆ ಪ್ಲಾಸ್ಟಿಕ್‌ನ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು.  

ವಿಜಯಕುಮಾರ್ ಎಚ್.ಕೆ., ರಾಯಚೂರು

**** 

‘ಬೆಂಗಳೂರು ಉತ್ತರ’ ಜಿಲ್ಲೆ ಅಸಂಬದ್ಧ ಪ್ರಲಾಪ

ತುಮಕೂರು ಜಿಲ್ಲೆಯನ್ನು ‘ಬೆಂಗಳೂರು ಉತ್ತರ ಜಿಲ್ಲೆ’ಯಾಗಿ ಮಾರ್ಪಡಿಸುವ ದಿಸೆಯಲ್ಲಿ ಸಿದ್ಧತೆ ನಡೆದಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಹೇಳಿರುವುದು ವರದಿಯಾಗಿದೆ (ಪ್ರ.ವಾ., ಜೂನ್ 11). ಇದು ಅಕ್ಷರಶಃ ಅಸಂಬದ್ಧ ಪ್ರಲಾಪವಾಗಿದೆ.

ಹತ್ತು ತಾಲ್ಲೂಕುಗಳನ್ನು ಒಳಗೊಂಡಿರುವ ತುಮಕೂರು ಜಿಲ್ಲೆಗೆ ತನ್ನದೇ ಆದ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ಪರಂಪರೆ ಇದೆ. ಮೈಸೂರು ಮಹಾರಾಜರ ಆಳ್ವಿಕೆ ಕಾಲದಿಂದಲೂ ಸ್ವತಂತ್ರ ಜಿಲ್ಲೆಯಾಗಿಯೇ ಗುರುತಿಸಲ್ಪಟ್ಟಿದೆ. ಹೀಗಿರುವ ಪರಿಪೂರ್ಣ ಜಿಲ್ಲೆಯೊಂದನ್ನು ಬೆಂಗಳೂರು ನಗರಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನವು ಸ್ವಾರ್ಥ ಹಾಗೂ ಕುಟಿಲ ರಾಜಕೀಯದ ಹುನ್ನಾರ ಎನಿಸುತ್ತದೆ.

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮಾಡಿರುವುದನ್ನು ಸಚಿವರು ಉದಾಹರಿಸಿದ್ದಾರೆ. ಆದರೆ, ಆ ಜಿಲ್ಲೆಯು ಈ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೊಳಪಟ್ಟು, ಬೆಂಗಳೂರಿನ ಒಂದು ಭಾಗವೇ ಆಗಿತ್ತು. ಈಗ ಅದೇ ಜಾಡಿನಲ್ಲಿ ತುಮಕೂರನ್ನು ‘ಬೆಂಗಳೂರು ಉತ್ತರ ಜಿಲ್ಲೆ’ ಆಗಿಸಲು ಹೊರಟಿರುವುದು ಕುತಂತ್ರ, ಕುತರ್ಕದ ರಾಜಕೀಯ ಎನಿಸುತ್ತದೆ.  

ಆರ್.ಎಸ್. ಅಯ್ಯರ್, ತುಮಕೂರು 

****

ತಿರಸ್ಕೃತರ ಚಾವಡಿ!

‘ಚಿಂತಕರ ಚಾವಡಿ’ ಎಂದೇ ಕರೆಸಿಕೊಳ್ಳುವ ವಿಧಾನ ಪರಿಷತ್ತಿಗೆ ಸಾಹಿತ್ಯ, ಕಲೆ, ಸಂಗೀತ, ಶಿಕ್ಷಣ, ಸಮಾಜ ಸೇವೆಯಂತಹ ಕ್ಷೇತ್ರದಲ್ಲಿ ದುಡಿದ ಗಣ್ಯರನ್ನು ನೇಮಕ ಮಾಡಬೇಕಿದೆ (ಆಳ–ಅಗಲ, ಜೂನ್‌ 11). ಆದರೆ, ಕೆಳಮನೆಗೆ ಮಾರ್ಗದರ್ಶನ ಮಾಡುವ ಬುದ್ಧಿಜೀವಿಗಳು, ಚಿಂತಕರು ಇರಬೇಕಾದ ಸ್ಥಳದಲ್ಲಿ ಇಂದು ನೇರ ಚುನಾವಣೆಗಳಲ್ಲಿ ಮತದಾರರಿಂದ ತಿರಸ್ಕೃತಗೊಂಡವರನ್ನು ನಾಮನಿರ್ದೇಶನ ಮಾಡಲಾಗುತ್ತಿದೆ. ಒಟ್ಟಾರೆ ಮೇಲ್ಮನೆಯು ತಿರಸ್ಕೃತರ ಮನೆಯಾಗಿರುವುದು ವಿಪರ್ಯಾಸ. 

ಚಂದ್ರು ಪಾಟೀಲ್, ಹುಳ್ಕಿಹಾಳ

*****

ಆನೆ ಕಾಟ ತಪ್ಪುವುದಿಲ್ಲ...

‘ಆನೆ- ಮಾನವ ಸಂಘರ್ಷ ತಡೆಗೆ ಜೇನುನೊಣ ಯೋಜನೆ’ ಜಾರಿಗೊಳಿಸಲು ಸರ್ಕಾರ ಮುಂದಾಗಿರುವ ಬಗ್ಗೆ ವರದಿಯಾಗಿದೆ. ಜೇನುನೊಣ ಇರುವ ಪ್ರದೇಶಕ್ಕೆ ಆನೆಗಳು ಬರುವುದಿಲ್ಲ. ಹೀಗಾಗಿ, ಆನೆ ಬ್ಯಾರಿಕೇಡ್ ಹಾಕಿರುವ ಮಾರ್ಗದುದ್ದಕ್ಕೂ ಜೇನು ಕೃಷಿ ಮಾಡಿದರೆ ರೈತರಿಗೂ ಅನುಕೂಲ. ಆನೆಗಳ ಕಾಟ ತಪ್ಪುತ್ತದೆ ಎಂಬುದು ಸರ್ಕಾರದ ವಾದ.

ಜೇನು ಕೃಷಿಯಿಂದ ಆನೆ ಕಾಟವು ಕಿಂಚಿತ್ತೂ ಕಡಿಮೆ ಆಗುವುದಿಲ್ಲ. ಇದನ್ನು ನಾನು ನನ್ನ 30 ವರ್ಷಗಳ ಕೃಷಿ ಅನುಭವದಿಂದ ಹೇಳುತ್ತಿದ್ದೇನೆ. ನನ್ನ ತೋಟದಲ್ಲಿ 20ಕ್ಕಿಂತಲೂ ಹೆಚ್ಚು ಜೇನು ಪೆಟ್ಟಿಗೆಗಳಿವೆ. ಆನೆ ಬರುವ ದಾರಿಯಲ್ಲಿ ಅವುಗಳನ್ನು ಇಟ್ಟಿದ್ದೇವೆ. ಆನೆಗಳಿಗೆ ಅವು ಲೆಕ್ಕಕ್ಕೇ ಇಲ್ಲ. ಪೆಟ್ಟಿಗೆಯನ್ನು ಬೀಳಿಸಿ ತೋಟಕ್ಕೆ ನುಗ್ಗುತ್ತವೆ. ಕಾಡಾನೆ ಕಾಟಕ್ಕೆ ಸೌರ ಬೇಲಿಗಿಂತ ಉತ್ತಮ ಪರಿಹಾರ ಬೇರೊಂದಿಲ್ಲ. ಸೌರ ಬೇಲಿ ಅಳವಡಿಸಿಕೊಳ್ಳಲು ಸರ್ಕಾರ ರೈತರಿಗೆ ನೆರವು ನೀಡಲಿ.

ಸಹನಾ ಕಾಂತಬೈಲು, ಮಡಿಕೇರಿ 

ಹೆದ್ದಾರಿ ಪ್ರಾಧಿಕಾರದ ಉತ್ತಮ ಕೆಲಸ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಪಾಡಿಯಿಂದ ನಂತೂರುವರೆಗೆ ಹಾಗೂ ಸುರತ್ಕಲ್‌ನಿಂದ ಸಾಸ್ತಾನದ ವರೆಗೆ ಕಡಿಮೆ ಸಾಂದ್ರತೆಯ ಪಾಲಿಥೀನ್‌ (ಎಲ್‌ಡಿಪಿಇ) ಬಳಸಿ ಸರ್ವಿಸ್ ರಸ್ತೆ ನಿರ್ಮಿಸಲಾಗಿದೆ (ಪ್ರ.ಜಾ., ಜೂನ್‌ 11). ಈ ರಸ್ತೆಯಲ್ಲಿ ಓಡಾಡಿದರೂ, ವಾಹನ ಚಲಾಯಿಸಿದರೂ ಜಾರುವುದಿಲ್ಲ!

ವಿವಿಧ ಗ್ರಾಮ ಪಂಚಾಯಿತಿಗಳಿಂದ ಸಂಗ್ರಹಿಸಿದ 170 ಟನ್ ಪ್ಲಾಸ್ಟಿಕ್ ಅನ್ನು
ಸದ್ಬಳಕೆ ಮಾಡಿಕೊಂಡು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ರಸ್ತೆ ನಿರ್ಮಿಸಿದೆ. ಇದೊಂದು ಉತ್ತಮ ಕೆಲಸವಾಗಿದೆ. 

ನಗರ ಗುರುದೇವ್ ಭಂಡಾರ್ಕರ್, ಹೊಸನಗರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.