ಹಿಂದಿ ಭಾಷೆ ಮಾತನಾಡಲು ಬರುವುದಿಲ್ಲ ಎಂದು ಹೇಳಿದ ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಕರ್ತವ್ಯನಿರತರಾಗಿದ್ದ ಕೇಂದ್ರದ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಅಧಿಕಾರಿಯೊಬ್ಬರು ‘ನೀವು ಭಾರತೀಯರೇ’ ಎಂದು ಪ್ರಶ್ನಿಸಿರುವುದು ನಿರೀಕ್ಷೆಯಂತೆ ವಿವಾದ ಎಬ್ಬಿಸಿದೆ. ಇದು ಹಿಂದಿ ಹೇರಿಕೆ ಎಂದು ಅವರು ಕೂಡಲೇ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಹಿಂದಿ ಭಾಷೆ ಮಾತನಾಡಲು ಬರದವರು ಭಾರತೀಯರಲ್ಲವೇ ಎನ್ನುವ ಚರ್ಚೆಯನ್ನು ಹುಟ್ಟುಹಾಕಿದೆ.
ವರ್ಷಗಳ ಹಿಂದೆ ಉತ್ತರ ಭಾರತದವರೊಬ್ಬರು, ‘ದಕ್ಷಿಣ ಭಾರತದಲ್ಲಿ ಯಾವ ಕರೆನ್ಸಿ ಬಳಸುತ್ತಾರೆ’ ಎಂದು ಕೇಳಿದ್ದರಂತೆ. ಉತ್ತರದವರು ದಕ್ಷಿಣದವರನ್ನು ಬೇರೆ ರಾಷ್ಟ್ರದವರಂತೆ ಕಾಣುತ್ತಾರೆ ಎನ್ನುವ ಆಪಾದನೆ ಕೇಳಿ ಬರುತ್ತಿರುವಾಗ ಇಂತಹ ಘಟನೆ ನಡೆದಿರುವುದು ದುರ್ದೈವ. ಈ ವಿಷಯವನ್ನು ದೊಡ್ಡದು ಮಾಡದೇ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ಭದ್ರತಾ ಸಿಬ್ಬಂದಿಗೆ ಇಂಗ್ಲಿಷ್ ಮತ್ತು ಹಿಂದಿ ಎರಡೂ ಭಾಷೆಗಳನ್ನು ಕಲಿಸಬೇಕು ಎಂದು ಪ್ರತಿಕ್ರಿಯಿಸಿ ಮುತ್ಸದ್ದಿತನ ಮೆರೆದಿರುವುದು ಶ್ಲಾಘನೀಯ.
-ರಮಾನಂದ ಶರ್ಮಾ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.