ADVERTISEMENT

ಹೆಜ್ಜೇನು: ಬೇಕು ಅರಿವಿನ ತರಬೇತಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 19:30 IST
Last Updated 25 ನವೆಂಬರ್ 2022, 19:30 IST

ಮೈಸೂರು ಜೆಲ್ಲೆಯ ಗ್ರಾಮವೊಂದರಲ್ಲಿ ಹೆಜ್ಜೇನು ದಾಳಿಯಿಂದ ಇತ್ತೀಚೆಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಗ್ರಾಮೀಣ ಭಾಗದಲ್ಲಿ ಇಂಥ ಪ್ರಕರಣಗಳು ವಿರಳವಲ್ಲ. ಸ್ಥಳೀಯ ಆಡಳಿತವು ಇದನ್ನು ಗಂಭೀರವಾಗಿ ಗಮನಿಸಿ, ತಜ್ಞರ ಸಲಹೆ ಪಡೆದು ಹೆಜ್ಜೇನಿನಿಂದ ಸುರಕ್ಷತೆ ಕಾಯ್ದುಕೊಳ್ಳುವ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕಾಗಿದೆ. ಪ್ರಕೃತಿಯಲ್ಲಿ ವಿವಿಧ ಬಗೆಯ ಜೇನುನೊಣಗಳು ಇದ್ದು ಅವುಗಳ ಪಾತ್ರ ಹಾಗೂ ಜೀವನ ಕ್ರಮ ವಿಸ್ಮಯಕಾರಿಯಾದದ್ದು. ಇವುಗಳಲ್ಲಿ ಹೆಜ್ಜೇನಿಗೆ ಉಗ್ರ ಸ್ವಭಾವವಿದೆ ಮತ್ತು ಇವುಗಳಲ್ಲಿ ಹೆಚ್ಚು ವಿಷಪೂರಿತ ಕೊಂಡಿಗಳಿರುವುದರಿಂದ ಕೆಲವೇ ಕೆಲವು ಜೇನುನೊಣಗಳು ಚುಚ್ಚಿದರೂ ಮಾರಣಾಂತಿಕ ಅಪಾಯ ಎದುರಾಗುತ್ತದೆ. ಆದ್ದರಿಂದ, ಇವುಗಳನ್ನು ಕಾಡುಪ್ರಾಣಿಗಳಂತೆಯೇ ಪರಿಗಣಿಸಲಾಗುತ್ತದೆ. ಆದರೆ, ಸಾಕುವ ಜೇನುಗಳಲ್ಲಿ ಉಗ್ರ ಸ್ವಭಾವವಿಲ್ಲ ಮತ್ತು ಅವುಗಳ ಕೊಂಡಿಗಳಲ್ಲಿ ವಿಷದ ಪ್ರಮಾಣ ಕೂಡ ಕಡಿಮೆಯಿರುತ್ತದೆ. ಆದ್ದರಿಂದ, ತರಬೇತಿಯ ಮೂಲಕ ರೈತರನ್ನು ಜೇನು ಉದ್ಯಮದಲ್ಲಿ ಕೂಡ ತೊಡಗಿಸಿಕೊಳ್ಳಬಹುದು. ಇದಲ್ಲದೆ, ಜೇನು ಉತ್ಪನ್ನಗಳ ಜೊತೆಗೆ ಇವು ಪರಾಗಸ್ಪರ್ಶ ಕ್ರಿಯೆಯಲ್ಲಿ ತೊಡಗುವುದರಿಂದ ಶೇಕಡ 80ರಷ್ಟು ಬೆಳೆಗಳಲ್ಲಿ ಹೆಚ್ಚಿನ ಇಳುವರಿಯನ್ನೂ ಪಡೆಯಹುದು.

‘ಯಾವುದಾದರೊಂದು ದುಷ್ಟಶಕ್ತಿ ಜೇನುನೊಣಗಳನ್ನು ಭೂಮಿಯ ಪರಿಸರದಿಂದ ಹೊರದೂಡಿದರೆ ಮಾನವಕುಲ ಕ್ಷಿಪ್ರವಾಗಿ ನಾಶವಾಗುವುದರಲ್ಲಿ ಸಂದೇಹವಿಲ್ಲ’ ಎಂದು ವಿಜ್ಞಾನಿ ಐನ್‌ಸ್ಟೀನ್ ಹೇಳಿದ್ದರು. ಈ ಹೇಳಿಕೆಯ ಮಹತ್ವವನ್ನು ನಾವು ಅರಿಯಬೇಕಾಗಿದೆ.

ಡಾ. ಡಿ.ರಾಜಗೋಪಾಲ್,ಬೆಂಗಳೂರು‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.