ADVERTISEMENT

ವಾಚಕರವಾಣಿ | ನ್ಯಾಯದಾನ ವ್ಯವಸ್ಥೆಯ ಮೂಲ ತತ್ವ ಪರಿಗಣನೆ

​ಪ್ರಜಾವಾಣಿ ವಾರ್ತೆ
Published 24 ಮೇ 2022, 19:24 IST
Last Updated 24 ಮೇ 2022, 19:24 IST

ಹೈದರಾಬಾದ್‌ನ ಹೊರವಲಯದಲ್ಲಿ ಮೂರು ವರ್ಷಗಳ ಹಿಂದೆ ಪಶುವೈದ್ಯೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದುಹಾಕಿದ ಬಗೆಗಿನ ತನಿಖೆಗೆ ಸುಪ್ರೀಂ ಕೋರ್ಟ್ ನೇಮಿಸಿದ್ದ ಆಯೋಗವು, ಪೊಲೀಸರು ಉದ್ದೇಶಪೂರ್ವಕವಾಗಿ ಆರೋಪಿಗಳನ್ನು ಕೊಂದಿರುವುದರಿಂದ, ಕೊಲೆ ಆಪಾದನೆಯ ಅನ್ವಯ ಅವರ ಮೇಲೆ ಕ್ರಮ ಕೈಗೊಳ್ಳುವಂತೆಶಿಫಾರಸು ಮಾಡಿದೆ. ಈ ಎನ್‌ಕೌಂಟರ್ ಮಾಡಿದ ಸಮಯದಲ್ಲಿ, ಇದೇ ಪೊಲೀಸರನ್ನು ಹೀರೊಗಳಂತೆ ಬಿಂಬಿಸಿ, ಅವರ ಮೇಲೆ ಸಾರ್ವಜನಿಕರು ಹೂಮಳೆ ಸುರಿದಿದ್ದರು. ನಮ್ಮ ದೇಶದ ನ್ಯಾಯದಾನ ವ್ಯವಸ್ಥೆಯ ವಿಳಂಬದಿಂದ ಸಹನೆ ಕಳೆದುಕೊಂಡ ಜನಸಾಮಾನ್ಯರು ಈ ರೀತಿ ಪ್ರತಿಕ್ರಿಯಿಸುವುದು ಸಹಜವೇಎನ್ನಬಹುದು.

ಆದರೆ, ಪೊಲೀಸರು ಎನ್‌ಕೌಂಟರ್ ಮಾಡಿ ಕೊಂದದ್ದು ಆರೋಪಿಗಳನ್ನೇ ವಿನಾ ಅಪರಾಧಿಗಳನ್ನಲ್ಲ ಎಂಬ ಪ್ರಾಥಮಿಕ ಸತ್ಯವನ್ನೂ ಮರೆತು ಕೆಲವು ಮಾಧ್ಯಮಗಳು ಈ ಎನ್‌ಕೌಂಟರ್ ಅನ್ನು ಅನ್ಯಾಯದ ವಿರುದ್ಧ ನ್ಯಾಯದ ಜಯ ಎಂಬಂತೆ ಸಂಭ್ರಮಿಸಿದವು. ಸಮಾಜದ ಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳು, ಅಧಿಕಾರಸ್ಥರು ಸಹ ತಮ್ಮ ವಿವೇಚನೆ ಕಳೆದುಕೊಂಡು ಈ ಎನ್‌ಕೌಂಟರ್ ಅನ್ನು ಸಮರ್ಥಿಸಿದ್ದರು. ರಾಜಕಾರಣಿಗಳು, ಶ್ರೀಮಂತ ಉದ್ಯಮಿಗಳ ಮಕ್ಕಳು ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದರೆ ಪೊಲೀಸರು ಇದೇ ರೀತಿ ವರ್ತಿಸುತ್ತಿದ್ದರೇ ಎಂಬ ಪ್ರಶ್ನೆ ಕೆಲವರಮನಸ್ಸಿನಲ್ಲಾದರೂ ಮೂಡಿತ್ತು.

‘ನೂರು ಜನ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೂ ಶಿಕ್ಷೆ ಆಗಬಾರದು’ ಎಂಬ ನಮ್ಮ ನ್ಯಾಯದಾನ ವ್ಯವಸ್ಥೆಯ ಮೂಲ ತತ್ವವನ್ನು ತನಿಖಾ ಆಯೋಗದ ಈ ವರದಿಯು ಎತ್ತಿ ಹಿಡಿದಿರುವುದು ಸಮಾಧಾನಕರ ಸಂಗತಿ.
ಡಾ. ಟಿ.ಜಯರಾಂ, ಕೋಲಾರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.