ADVERTISEMENT

ವಾಚಕರವಾಣಿ | ಪೂರ್ವಗ್ರಹ ಸರಿಯಲ್ಲ, ಸುಧಾರಣೆ ಜಾರಿಯಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ನವೆಂಬರ್ 2019, 8:58 IST
Last Updated 13 ನವೆಂಬರ್ 2019, 8:58 IST
   

ಒಂದು ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಒಬ್ಬ ಮಹನೀಯರ ಜನ್ಮದಿನಾಚರಣೆಗೆ ನಿರ್ಧರಿಸುವುದು, ಮತ್ತೊಂದು ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಅದನ್ನು ರದ್ದುಗೊಳಿಸುವುದು ಎಷ್ಟು ಸರಿ? ‘ನನ್ನ ಜನ್ಮದಿನವನ್ನು ಆಚರಿಸಿ’ ಎಂದು ಟಿಪ್ಪುವೇನೂ ಅರ್ಜಿ ಹಾಕಿಕೊಂಡಿರಲಿಲ್ಲ. ಟಿಪ್ಪುವಿಗೆ ಮಾತ್ರವಲ್ಲ ಕನಕದಾಸ, ವಾಲ್ಮೀಕಿ ಮುಂತಾದವರಿಗೂ ಇದು ಅನ್ವಯವಾಗುತ್ತದೆ. ಆದರೆ ಆಡಳಿತಾರೂಢ ಪಕ್ಷಗಳು ವೋಟಿನ ಸಲುವಾಗಿ ಆಯಾ ಸಮುದಾಯದ ಮಹನೀಯರ ದಿನಾಚರಣೆ ಮಾಡುವುದಾಗಿ ಘೋಷಿಸುತ್ತವೆ.

ಈ ಹುಚ್ಚಾಟವನ್ನು ನೋಡಿದರೆ, ನಾವು ಇರುವುದು ಪ್ರಜಾಪ್ರಭುತ್ವದಲ್ಲೋ ಸರ್ವಾಧಿಕಾರಿ ಆಡಳಿತದಲ್ಲೋ ಎಂಬ ಸಂದೇಹ ಮೂಡುತ್ತದೆ. ಯಾವ ಮಹಾಪುರುಷರ ದಿನಾಚರಣೆಯನ್ನು ಸರ್ಕಾರ ನಡೆಸಬೇಕು, ನಡೆಸಬಾರದು ಎಂಬುದನ್ನು ತೀರ್ಮಾನಿಸಲು ಒಂದು ಸ್ವತಂತ್ರ ಶಾಸನಬದ್ಧ ಸಮಿತಿಯನ್ನು ರಚಿಸಬೇಕು. ಇದರ ಸ್ವರೂಪ ಮತ್ತು ಕಾರ್ಯಸೂಚಿಯು ಸರ್ವಪಕ್ಷಗಳ ಶಾಸಕರು ಹಾಗೂ ಮುಖಂಡರ ಸಭೆಯಲ್ಲಿ ತೀರ್ಮಾನವಾಗಬೇಕು. ಪೂರ್ವಗ್ರಹವಿಲ್ಲದ ಇತಿಹಾಸಕಾರರನ್ನೂ ಸಮಿತಿ ಒಳಗೊಂಡಿರಬೇಕು.

ಪ್ರತೀ ಬಾರಿ ಹೊಸ ಸರ್ಕಾರ ರಚನೆಯಾದಾಗಲೂ ಆಯಾ ಪಕ್ಷದ ತತ್ವ, ಸಿದ್ಧಾಂತಗಳಿಗೆ ಅನುಗುಣವಾದ ಪಾಠಗಳನ್ನು ಪಠ್ಯಪುಸ್ತಕದಲ್ಲಿ ತುರುಕುವುದು ಸಹ ಸರ್ವೇ ಸಾಮಾನ್ಯವಾಗಿದೆ. ತಮಗೆ ಸರಿ ಇಲ್ಲವೆಂದು ತೋರುವ ಪಾಠಗಳನ್ನು ತೆಗೆದುಹಾಕುವುದೂ ತಮ್ಮ ಹಕ್ಕೆಂದು ರಾಜಕೀಯ ಪಕ್ಷಗಳು ಭಾವಿಸಿವೆ. ತಮ್ಮ ಸಿದ್ಧಾಂತಗಳಿಗೆ ಮಣೆ ಹಾಕುವವರನ್ನೇಪಠ್ಯಪುಸ್ತಕ ರಚನಾ ಸಮಿತಿಗೆ ಆಯ್ಕೆ ಮಾಡಲಾಗುತ್ತದೆ. ಈ ‘ಹೌದಪ್ಪ’ಗಳು ತಮ್ಮ ಧಣಿಗಳು ಹಾಕುವ ತಾಳಕ್ಕೆ ಅನುಗುಣವಾಗಿ ಕುಣಿಯುತ್ತಾರೆ.ಕಮ್ಯುನಿಸ್ಟರು ಅಧಿಕಾರಕ್ಕೆ ಬಂದಾಗ ಪಠ್ಯಪುಸ್ತಕಗಳಿಗೆ ಕೆಂಪುಬಣ್ಣ ಬಳಿಯುವುದು, ಬಿಜೆಪಿ ಅಧಿಕಾರಕ್ಕೆ ಬಂದಾಗ ಕೇಸರಿ ಬಣ್ಣ ಬಳಿಯುವುದು ಅವ್ಯಾಹತವಾಗಿ ನಡೆದೇ ಇದೆ. ವಿದ್ಯಾರ್ಥಿಗಳು ಎಲ್ಲಾ ‘ಇಸಂ’ಗಳನ್ನೂ ಪೂರ್ವಗ್ರಹವಿಲ್ಲದೆ ಅಭ್ಯಸಿಸುವ ಅವಕಾಶ ಇರಬೇಕು.

ADVERTISEMENT

ರಾಜಕೀಯ ಪಕ್ಷಗಳ ಈ ಹುಚ್ಚಾಟವನ್ನು ತಡೆಗಟ್ಟ ಬೇಕಾದರೆ, ಶಿಕ್ಷಣ ನೀತಿ ರೂಪಿಸುವ ಹೊಣೆಯನ್ನು ಸ್ವಾಯತ್ತ ಸಂಸ್ಥೆಗೆ ವಹಿಸಬೇಕು. ಸಂಸ್ಥೆಯ ಸದಸ್ಯರಾಗುವವರು ನಿರ್ಭೀತರಾಗಿದ್ದು, ಯಾವುದೇ ರಾಜಕೀಯ ಪಕ್ಷದ ಸಿದ್ಧಾಂತದಿಂದ ಹೊರತಾಗಿರಬೇಕು. ರಾಜಕೀಯ
ಪಕ್ಷಗಳು ಮತ್ತು ಸರ್ಕಾರ ಇಂತಹ ಸುಧಾರಣೆ ಜಾರಿಗೆ ಮುಂದಾಗದಿದ್ದರೆ, ಜನತಾ ಚಳವಳಿಯ ಮೂಲಕ ಅದು ಕಾರ್ಯರೂಪಕ್ಕೆ ಬರುವಂತೆ ಮಾಡುವುದು ಪ್ರಜೆಗಳ ಹಕ್ಕಾಗಿದೆ.

-ಎಚ್.ಎಸ್.ದೊರೆಸ್ವಾಮಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.