ADVERTISEMENT

ಕೊಡಚಾದ್ರಿ ತುದಿಗೆ ರಸ್ತೆ: ಬೇಡ ಉಮೇದು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 19:30 IST
Last Updated 27 ಸೆಪ್ಟೆಂಬರ್ 2021, 19:30 IST

ಮೂಕಾಸುರನ ವಧೆ ಮಾಡಿದ ಸ್ಥಳ ಹಾಗೂ ಶಂಕರಾಚಾರ್ಯರು ಭೇಟಿ ನೀಡಿದ ಸ್ಥಳವೆಂದು ಪ್ರತೀತಿಯಿರುವ, ವಿನಾಶದ ಅಂಚಿನಲ್ಲಿರುವ ಸಿಂಗಳೀಕ ಜಾತಿಯ ಪ್ರಾಣಿಗಳನ್ನು ಹೊಂದಿರುವ ಹಾಗೂ ಜೀವವೈವಿಧ್ಯದಿಂದ ಕೂಡಿರುವ ಬೆಟ್ಟವೇ ಕೊಡಚಾದ್ರಿ. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು ಕಟ್ಟಿನಹೊಳೆ ಪ್ರದೇಶದಿಂದ ಕೊಡಚಾದ್ರಿಯ ತುದಿಯವರೆಗೆ ಮಣ್ಣಿನ ರಸ್ತೆಯ ಬದಲಾಗಿ ಸಿಮೆಂಟ್ ರಸ್ತೆಯನ್ನು ನಿರ್ಮಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ಮನವಿ ಸಲ್ಲಿಸಿದ್ದು, ಅನುಮೋದನೆ ಕೂಡಾ ದೊರೆತಿದೆ ಎಂಬ ಮಾಹಿತಿ ಪರಿಸರ ಹೋರಾಟಗಾರರಲ್ಲಿ ಆತಂಕ ಮೂಡಿಸಿದೆ.

ಶಿವಮೊಗ್ಗ, ಕುದುರೆಮುಖ, ಮಂಗಳೂರು ವಲಯ ಅರಣ್ಯ ವಿಭಾಗದಲ್ಲಿ ಹಂಚಿಹೋಗಿರುವ ಕೊಡಚಾದ್ರಿ ಬೆಟ್ಟದಲ್ಲಿ ರಸ್ತೆ ನಿರ್ಮಿಸಿ ವಾಹನ ಸೌಲಭ್ಯಗಳನ್ನು ಅಧಿಕೃತವಾಗಿ ಘೋಷಿಸಿದ ಪಕ್ಷದಲ್ಲಿ, ಚಾರಣಿಗರ ಸಂಖ್ಯೆ ಇಳಿಮುಖವಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಹಜವಾಗಿ ವ್ಯಾಪಾರದ ಕೇಂದ್ರಗಳು, ಹೋಟೆಲ್‌ಗಳು ಬೆಟ್ಟದ ಮೇಲ್ಭಾಗದಲ್ಲಿ ನಿರ್ಮಾಣವಾಗುವ ಮೂಲಕ ಪರಿಸರ ಮಾಲಿನ್ಯಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ.

ಮಡಿಕೇರಿ ಈಗಾಗಲೇ ಇದೆಲ್ಲವನ್ನೂ ಜೀರ್ಣಿಸಿಕೊಂಡು ನಮ್ಮ ಕಣ್ಣ ಮುಂದೆಯೇ ಯಾವ ಸ್ಥಿತಿಯಲ್ಲಿದೆಯೆಂದು ತಿಳಿದಿದ್ದರೂ ರಾಜ್ಯ ಸರ್ಕಾರವು ರಸ್ತೆ ನಿರ್ಮಿಸಲು ಹೊರಟಿರುವುದು ಆಘಾತಕಾರಿಯಾದ ವಿಷಯ. ಕೊಡಚಾದ್ರಿ ಬೆಟ್ಟದ ತುದಿಗೆ ರಸ್ತೆ ನಿರ್ಮಿಸುವ ಪ್ರಸ್ತಾವವನ್ನು ಕೂಡಲೇ ಕೈಬಿಡಬೇಕು. ಅರಣ್ಯಾಧಿಕಾರಿಗಳ ಸಹಕಾರದೊಂದಿಗೆ ಅನಧಿಕೃತವಾಗಿ ಓಡಾಡುತ್ತಿರುವ ವಾಹನಗಳನ್ನು ಜಪ್ತಿ ಮಾಡಿ, ಇದಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ADVERTISEMENT

– ಚಿ.ಉಮಾ ಶಂಕರ್ ಲಕ್ಷ್ಮೀಪುರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.