ADVERTISEMENT

ಭಾಷೆ: ಯಾವುದೂ ಶುದ್ಧವಲ್ಲ ಮತ್ತೊಂದಕ್ಕಿಂತ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 19:42 IST
Last Updated 10 ಡಿಸೆಂಬರ್ 2021, 19:42 IST

‘ಜಗತ್ತಿನಲ್ಲಿ ಸಂಸ್ಕೃತ ಹಾಗೂ ಕನ್ನಡ ಭಾಷೆ ಮಾತ್ರ ಅತ್ಯಂತ ಶುದ್ಧ ಎಂಬ ಕೀರ್ತಿಗೆ ಪಾತ್ರವಾಗಿವೆ’ ಎಂಬ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಹೇಳಿಕೆ ಈ ಎರಡು ಭಾಷೆಗಳ ಬಗ್ಗೆ ಅವರಿಗಿರುವ ಮೋಹವನ್ನು ಹೇಳುತ್ತದೆಯೇ ವಿನಾ ವೈಜ್ಞಾನಿಕವಾಗಿ ಸರಿಯಲ್ಲ. ಜಗತ್ತಿನಲ್ಲಿ ಈಗ ಬಳಕೆಯಾಗುತ್ತಿರುವ ಸಾವಿರಾರು ಭಾಷೆಗಳಲ್ಲಿ ಯಾವೊಂದು ಭಾಷೆಯೂ ಮತ್ತೊಂದಕ್ಕಿಂತ ಶುದ್ಧವೂ ಅಲ್ಲ ಅಶುದ್ಧವೂ ಅಲ್ಲ. ಬಳಕೆಯಾಗುತ್ತಿರುವ ಪ್ರತಿಯೊಂದು ಭಾಷೆಯಲ್ಲಿಯೂ ಹತ್ತಾರು ಬಗೆಯ ಪ್ರಾದೇಶಿಕ ಉಪಭಾಷೆಗಳು ಮತ್ತು ನೂರಾರು ಬಗೆಯ ಸಾಮಾಜಿಕ ಉಪ ಭಾಷೆಗಳು ಇರುತ್ತವೆಯೇ ವಿನಾ ಅವುಗಳಲ್ಲಿ ಯಾವೊಂದು ಬಗೆಯೂ ಮತ್ತೊಂದಕ್ಕಿಂತ ಶುದ್ಧವಲ್ಲ.

ಕರ್ನಾಟಕದ ಉದ್ದಗಲದಲ್ಲಿ ಬಳಕೆಯಾಗುತ್ತಿರುವ ಕನ್ನಡದ ಮಾತಿನಲ್ಲಿ ಪ್ರತೀ ಹತ್ತು ಹದಿನೈದು ಕಿಲೊ ಮೀಟರ್ ಅಂತರದಲ್ಲಿ ಕನ್ನಡಿಗರು ಉಚ್ಚಾರಣೆ ಮಾಡುವ ಮಾತಿನ ಧ್ವನಿಗಳಲ್ಲಿ, ಪದರೂಪಗಳಲ್ಲಿ ಮತ್ತು ವಾಕ್ಯಗಳಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳು ಕಂಡುಬರುತ್ತವೆ. ಊರುಗಳ ಅಂತರ ಹೆಚ್ಚಾದಂತೆಲ್ಲ ನುಡಿ ಸಾಮಗ್ರಿಗಳ ಉಚ್ಚಾರಣೆಯ ಸ್ವರೂಪದಲ್ಲಿನ ವ್ಯತ್ಯಾಸವೂ ಹೆಚ್ಚಾಗುತ್ತದೆ. ಇದು ಕನ್ನಡ ಭಾಷೆಯಲ್ಲಿರುವ ಒಳನುಡಿಗಳ ಬಗೆಗಳನ್ನು ಸೂಚಿಸುತ್ತದೆ. ಇವುಗಳಲ್ಲಿ ಯಾವೊಂದು ರೂಪದ ಕನ್ನಡವನ್ನು ‘ಇದು ಶುದ್ಧ ಕನ್ನಡವಲ್ಲ ಹಾಗೂ ಸ್ಪಷ್ಟ ಕನ್ನಡವಲ್ಲ’ ಎಂದು ನಿರಾಕರಿಸಬಾರದು.

- ಸಿ.ಪಿ.ನಾಗರಾಜ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.