ADVERTISEMENT

ವಾಚಕರವಾಣಿ | ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ಮಾರುಕಟ್ಟೆ ಕೇಂದ್ರೀಕರಣದ ಉದ್ದೇಶ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಮೇ 2020, 2:25 IST
Last Updated 13 ಮೇ 2020, 2:25 IST
   

‘ರೈತರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ‘ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಮಾದರಿ ಕಾಯ್ದೆ– 2017’ರ ಸೆಕ್ಷನ್ 8ಕ್ಕೆ ರಾಜ್ಯ ಸರ್ಕಾರವು ಸುಗ್ರೀವಾಜ್ಞೆಯ ಮೂಲಕತಕ್ಷಣ ತಿದ್ದುಪಡಿ ತರಬೇಕು’ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಮಧ್ಯವರ್ತಿಗಳ ಶೋಷಣೆ ತಪ್ಪಿಸಿ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ತಂದುಕೊಡುವ ಘನ ಉದ್ದೇಶವಿರುವಂತೆ ಮೇಲ್ನೋಟಕ್ಕೆ ಇಲ್ಲಿ ತೋರುತ್ತದೆ. ಆದರೆ ಇದು ಕಾರ್ಯರೂಪಕ್ಕೆ ಬಂದಾಗ ಉಂಟಾಗುವುದು ಮಾರುಕಟ್ಟೆ ಕೇಂದ್ರೀಕರಣವಲ್ಲದೆ ಬೇರೇನೂ ಅಲ್ಲ.

ಇದರ ಸಂಪೂರ್ಣ ಅವಕಾಶ ಪಡೆದುಕೊಳ್ಳುವವರು ದೈತ್ಯ ಕಂಪನಿಗಳು ಮತ್ತು ಉದ್ದಿಮೆದಾರರು. ಬಲುಬೇಗ ಇವರು ಮಾರುಕಟ್ಟೆಯ ಏಕಸ್ವಾಮ್ಯ ಸ್ಥಾಪಿಸಿ, ಸಣ್ಣ ಖರೀದಿದಾರರನ್ನು ನಾಶಪಡಿಸುತ್ತಾರೆ. ಮೊದಲಿಗೆ ಕೊಂಚ ಉತ್ತಮ ಬೆಲೆ ಸಿಗುವಂತೆ ಕಂಡರೂ ಬಲು ಬೇಗ ರೈತರು ಮಾರಾಟದ ಎಲ್ಲಾ ಅವಕಾಶಗಳನ್ನೂ ಕಳೆದುಕೊಂಡು ಬೃಹತ್ ಕಂಪನಿಗಳ ಅಡಿಯಾಳಾಗಿ, ಸಿಕ್ಕಷ್ಟು ಬೆಲೆಗೆ ಉತ್ಪನ್ನಗಳನ್ನು ಮಾರಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಬೃಹತ್ ಉದ್ದಿಮೆದಾರರ ಒತ್ತಡಕ್ಕೆ ಮಣಿದೇ ಸರ್ಕಾರ ಈ ತಿದ್ದುಪಡಿ ತರಲು ಹೊರಟಿರುವುದರಲ್ಲಿ ಅನುಮಾನವಿಲ್ಲ.

ಎಪಿಎಂಸಿಗಳಲ್ಲಿ ಖಾತರಿ ಬೆಲೆ ಇದ್ದು, ಎಲ್ಲ ರೈತರಿಗೂ ಒಂದೇ ಬೆಲೆ ಅನ್ವಯಿಸುತ್ತದೆ. ಈ ವ್ಯವಸ್ಥೆಯಲ್ಲಿ ಏನೇ ಕುಂದುಕೊರತೆಗಳಿದ್ದರೂ, ಇದು ಸಾರ್ವಜನಿಕ ಹೊಣೆಗಾರಿಕೆಗೆ ಒಳಪಟ್ಟ ಸದಸ್ಯರಿಂದ ಕೂಡಿದ ಒಂದು ಜನತಾಂತ್ರಿಕ ವ್ಯವಸ್ಥೆ. ಇಂತಹ ವ್ಯವಸ್ಥೆಯನ್ನು ಇನ್ನೂ ಬಲಪಡಿಸುವುದು ಬಿಟ್ಟು, ಈ ವ್ಯವಸ್ಥೆಯನ್ನೇ ನುಚ್ಚು ನೂರು ಮಾಡಲು ಹೊರಟಿರುವುದು ತೀವ್ರ ಖಂಡನಾರ್ಹ. ಎಪಿಎಂಸಿಗಳಿಂದ ಆಗುತ್ತಿರುವ ಖರೀದಿಯ ಕಾರಣಕ್ಕೆ ಭಾರತ ಇಂದಿಗೂ ಆಹಾರದ ಬಿಕ್ಕಟ್ಟಿನಿಂದ ತಪ್ಪಿಸಿಕೊಂಡಿದೆ. ಸರ್ಕಾರದ ಬೆಂಬಲ ಬೆಲೆಯು ಮುಕ್ತ ಮಾರುಕಟ್ಟೆಗಿಂತ ಯಾವಾಗಲೂ ಉತ್ತಮವಾಗಿದೆ. ಈ ತಿದ್ದುಪಡಿಯಿಂದ ರಾಜ್ಯ ಸರ್ಕಾರಕ್ಕೆ ರೈತರ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುವ ಅವಕಾಶವೂ ನಶಿಸಿಹೋಗುತ್ತದೆ. ಇಂತಹ ಒತ್ತಡಕ್ಕೆ ರಾಜ್ಯ ಸರ್ಕಾರ ಯಾವ ಕಾರಣಕ್ಕೂ ಮಣಿಯಬಾರದು.

ADVERTISEMENT

- ಬಿ. ಅನುಸೂಯಮ್ಮ,ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್, ಜಿ. ಸಿ. ಬಯ್ಯಾರೆಡ್ಡಿ, ಮಾರುತಿ ಮನ್ಪಾಡೆ, ಕೆ.ಟಿ. ಗಂಗಾಧರ್, ಜೆ.ಎಂ. ವೀರಸಂಗಯ್ಯ, ಸುನಂದಾ ಜಯರಾಂ, ವಿ. ಗಾಯತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.