ADVERTISEMENT

ವಾಚಕರ ವಾಣಿ| ಶಿಕ್ಷಣ ‘ಜ್ಞಾನ ಕೇಂದ್ರಿತ’ ಆಗಬಾರದೇ?

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 18:59 IST
Last Updated 2 ಡಿಸೆಂಬರ್ 2022, 18:59 IST

ಪಿಯು ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಲು ಮುಂದಾಗಿರುವ ರಾಜ್ಯ ಸರ್ಕಾರ, ಪ್ರತೀ ವಿಷಯದ ಪ್ರಶ್ನೆಪತ್ರಿಕೆ ಯಲ್ಲೂ ಬಹು ಆಯ್ಕೆಯ ಪ್ರಶ್ನೆಗಳನ್ನು ಅಳವಡಿಸಲು ಚಿಂತನೆ ನಡೆಸಿರುವ ಬಗ್ಗೆ ವರದಿಯಾಗಿದೆ (ಪ್ರ.ವಾ., ಡಿ. 1). ಶಿಕ್ಷಣವನ್ನು ಪರೀಕ್ಷಾ ಕೇಂದ್ರಿತವಾಗಿ ಗ್ರಹಿಸುವುದು ಒಂದು ವಿಧಾನವಾದರೆ, ಜ್ಞಾನ ಕೇಂದ್ರಿತವಾಗಿ ಗ್ರಹಿಸುವುದು ಮತ್ತೊಂದು ವಿಧಾನ. ಇಂದು ಬಹುತೇಕ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಶಿಕ್ಷಣವನ್ನು ನೀಡಲಾಗುತ್ತಿದೆಯೇ ವಿನಾ ಜ್ಞಾನವನ್ನು ನೀಡುವ ಶಿಕ್ಷಣವನ್ನು ಅಲ್ಲ. ಈಗಾಗಲೇ ಪರೀಕ್ಷೆಗಳಿಗಾಗಿ ತಯಾರಿಸುವ ಪ್ರಶ್ನೆಪತ್ರಿಕೆಗಳು ಸಾಧ್ಯವಾದಷ್ಟು ನೇರವಾಗಿರಬೇಕು, ಸುಲಭವಾಗಿರಬೇಕು ಎಂಬ ಅಲಿಖಿತ ನಿಯಮ ಒಂದು ಕಡೆಯಾದರೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಳ ಉದಾರವಾಗಿದೆ. ಇದರಿಂದಾಗಿ ಸತತ ಹತ್ತು ವರ್ಷಗಳು ಕಲಿತ ಕನ್ನಡವನ್ನು ಸರಾಗವಾಗಿ ಮಾತನಾಡುವುದಕ್ಕೂ ಓದುವುದಕ್ಕೂ ಬರೆಯುವುದಕ್ಕೂ ಬಾರದ ಪರಿಸ್ಥಿತಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳದ್ದಾದರೆ, ಇಂಗ್ಲಿಷನ್ನು ಮಾತನಾಡುವುದಕ್ಕೂ ಬರೆಯುವುದಕ್ಕೂ ಓದುವುದಕ್ಕೂ ಬಾರದ ಸ್ಥಿತಿ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳದ್ದಾಗಿದೆ.

ಇದೇ ಪರಿಸ್ಥಿತಿಯು ಆಯ್ಕೆಯ ವಿಷಯಗಳಲ್ಲೂ ಇದೆ. ಎಲ್ಲದಕ್ಕೂ ಅಂಕಗಳೇ ಮಾನದಂಡವಾಗಿರುವಾಗ, ವಿದ್ಯಾರ್ಥಿಗಳು ಮತ್ತು ಪೋಷಕರು ಅದಕ್ಕಾಗಿ ಹಪಹಪಿಸುವುದು ತಪ್ಪಲ್ಲ. ಆದರೆ ಸರ್ಕಾರವೂ ಅದೇ ದಿಸೆಯಲ್ಲಿ ಯೋಚಿಸಿದರೆ, ಶಿಕ್ಷಣವನ್ನು ‘ಜ್ಞಾನ ಕೇಂದ್ರಿತ’ವಾಗಿ ಮಾಡುವವರು ಯಾರು?

- ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.