ADVERTISEMENT

ಶಿಶಿಲ- ಭೈರಾಪುರ ರಸ್ತೆ: ಸಮಸ್ಯೆಗೆ ಸೂಕ್ತ ಪರ್ಯಾಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 20:15 IST
Last Updated 11 ಡಿಸೆಂಬರ್ 2019, 20:15 IST

ಚಾರ್ಮಾಡಿ ಘಾಟಿಯಲ್ಲಿ ಆಗಾಗ ಸಂಭವಿಸುವ ಭೂಕುಸಿತದಿಂದಾಗಿ ಇನ್ನೂ ಎರಡು ವರ್ಷ ಈ 22 ಕಿ.ಮೀ. ದೂರದ ರಸ್ತೆಯಲ್ಲಿ ಬೃಹತ್‌ ವಾಹನಗಳ ಸಂಚಾರ ಅಸಾಧ್ಯ ಎಂದು ಹೆದ್ದಾರಿ ಪ್ರಾಧಿಕಾರ ಹೇಳಿದೆ. ಹಲವು ವರ್ಷಗಳಿಂದ ಇಲ್ಲಿ ಈ ಸಮಸ್ಯೆ ಮರುಕಳಿಸುತ್ತಿದ್ದರೂ ಯಾವುದೇ ಪಕ್ಷದ ನೇತೃತ್ವದ ರಾಜ್ಯ ಸರ್ಕಾರವೂ ಈ ಸಮಸ್ಯೆ ಬಗೆಹರಿಸಲು ಇರುವ ಸುಲಭದ ಮಾರ್ಗ ಅನುಸರಿಸದೇ ಇರುವುದು ವಿಷಾದಕರ. ಚಾರ್ಮಾಡಿ ರಸ್ತೆಗೆ ಪರ್ಯಾಯವಾಗಿ ಶಿಶಿಲ- ಭೈರಾಪುರ ರಸ್ತೆಯನ್ನು ಅಭಿವೃದ್ಧಿಪಡಿಸುವ ಸಲಹೆ ಬಹಳ ವರ್ಷಗಳಿಂದ ಇದೆ. ಈ ರಸ್ತೆಯ ಸರ್ವೆ ಸಹ ಆಗಿದೆ ಹಾಗೂ ಈ ಮಾರ್ಗದಲ್ಲಿ ಬೆಟ್ಟಗುಡ್ಡಗಳು ಕಡಿಮೆ ಇರುವುದರಿಂದ ಕಡಿಮೆ ಖರ್ಚಿನಲ್ಲಿ ಇದನ್ನು ಹೆದ್ದಾರಿಯಾಗಿ ಅಭಿವೃದ್ಧಿಪಡಿಸಬಹುದು. ಆದರೆ, ರಾಜ್ಯ ಸರ್ಕಾರಕ್ಕೆ ಈ ರಸ್ತೆ ಅಭಿವೃದ್ಧಿಪಡಿಸುವ ಇಚ್ಛಾಶಕ್ತಿಯೇ ಇಲ್ಲ.ಶಿಶಿಲ- ಭೈರಾಪುರ ರಸ್ತೆಯಲ್ಲಿ ಕಡಿದಾದ ಬೆಟ್ಟಗುಡ್ಡಗಳು ಕಡಿಮೆ. ಹಾಗಾಗಿ ಅಲ್ಲಿ ಮಳೆಗಾಲದಲ್ಲಿ ಭೂಕುಸಿತ ಇರುವುದಿಲ್ಲ. ಇದರಿಂದ ಸಮಯ ಹಾಗೂ ಪ್ರಯಾಣದ ದೂರ ಉಳಿಯುತ್ತದೆ ಎಂಬ ಅಂದಾಜಿದೆ. ಆಗಾಗ ಜರಿದು ಬೀಳುವ ಚಾರ್ಮಾಡಿ ಘಾಟ್ ರಸ್ತೆ ಮತ್ತು ಯಾವಾಗಲೂ ಟ್ರಾಫಿಕ್ ಜಾಮ್ ಇರುವ ಶಿರಾಡಿ ಘಾಟ್ ರಸ್ತೆ ಮೂಲಕ ಬೆಂಗಳೂರಿನಿಂದ ಕರಾವಳಿಗೆ ಬರುವ ವಾಹನಗಳಿಗೆ ಸಮಸ್ಯೆಗಳಿಂದ ಶಾಶ್ವತ ಮುಕ್ತಿ ಸಿಗಬೇಕಾದರೆ, ಶಿಶಿಲ– ಭೈರಾಪುರ ಹೊಸ ರಾಜ್ಯ ಹೆದ್ದಾರಿಯ ಅಭಿವೃದ್ಧಿ ಅತಿಮುಖ್ಯ.

– ದಿನೇಶ್ ಪೂಂಜಾ,ಮುಲ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT