ಪ್ರೊ. ಕೆ. ಸತ್ಯನಾರಾಯಣ ಅವರು ಸುಮಾರು ಮೂರು ದಶಕಗಳಿಂದ ಹೈದರಾಬಾದ್‌ನ ಇಎಫ್ಎಲ್ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಅಧ್ಯಯನ ವಿಭಾಗದಲ್ಲಿ ದಲಿತ ಸಾಹಿತ್ಯವನ್ನು ಪಾಠಮಾಡುತ್ತಿರುವ ಮೇಷ್ಟ್ರು ಮತ್ತು ಸಂಶೋಧಕ. ಆಂಧ್ರಪ್ರದೇಶದ ‘ಕುಲ ನಿರ್ಮೂಲನ ಪೋರಾಟ ಸಮಿತಿ’ಯ (ಜಾತಿ ವಿನಾಶ ಹೋರಾಟ ಸಮಿತಿ) ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಸಾಮಾಜಿಕವಾಗಿ ಅನ್ಯಾಯಕ್ಕೆ ಒಳಗಾದ ಸಮುದಾಯಗಳ ಬಗ್ಗೆ ಕಳಕಳಿ ಇರುವ ಬಹಳದೊಡ್ಡ ಪ್ರಜಾ
ಪ್ರಭುತ್ವವಾದಿ ವಿದ್ವಾಂಸ. ಅಸಹಾಯಕ ದಲಿತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಸಾಮಾಜಿಕ ಹೋರಾಟಗಾರ.
ಇದನ್ನೇ ನೆಪವಾಗಿಸಿಕೊಂಡು ಮಹಾರಾಷ್ಟ್ರ ಮತ್ತು ತೆಲಂಗಾಣ ಪೊಲೀಸರು ಅವರ ಮನೆಯ ಮೇಲೆ ದಾಳಿ ಮಾಡಿರುವುದು ಖಂಡನೀಯ. ಇದು ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ ಎಂಬುದನ್ನು ತೋರಿಸುತ್ತದೆ. ಸತ್ಯನಾರಾಯಣ ಅವರನ್ನು ಮಾನಸಿಕವಾಗಿ ಕುಗ್ಗಿಸುವುದು ಹಾಗೂ ಜನಪರವಾಗಿ ಯೋಚಿಸುವವರನ್ನು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಜನರವರೆಗೆ ತಲುಪಿಸುವವರನ್ನು ಹೆದರಿಸುವುದು ಈ ಯೋಜಿತ ದಾಳಿಯ ಉದ್ದೇಶವಾಗಿದೆ. ಈ ರೀತಿಯ ದಾಳಿಗಳು ಪ್ರಜಾ
ಪ್ರಭುತ್ವ ಅಪಾಯದಲ್ಲಿದೆ ಎಂಬುದನ್ನು ಸೂಚಿಸುತ್ತವೆ. ಈ ಪೂರ್ವನಿಯೋಜಿತ ದಾಳಿಯನ್ನು ಪ್ರಜಾಪ್ರಭುತ್ವವಾದಿಗಳೆಲ್ಲ ಒಕ್ಕೊರಲಿನಿಂದ ಖಂಡಿಸಬೇಕು.
ನಾರಾಯಣ್ ಕ್ಯಾಸಂಬಳಿ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.