ಉತ್ತರಪ್ರದೇಶದ ಗ್ರೇಟರ್ ನೊಯಿಡಾದಲ್ಲಿ ತರಕಾರಿ ಬಿರಿಯಾನಿ ಮಾರುತ್ತಿದ್ದ ದಲಿತ ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ (ಪ್ರ.ವಾ., ಡಿ. 16). ಇಂತಹ ಘಟನೆ ನಡೆದಾಗ ಸಮಾಜವು ಸಹಜ ಎಂಬಂತೆ ಖಂಡನೀಯ, ದುರದೃಷ್ಟಕರ ಎಂದು ಹೇಳಿ ಸುಮ್ಮನಾಗುತ್ತದೆ. ಸರ್ಕಾರವೂ ಅಷ್ಟೇ; ಕಾನೂನು ಕ್ರಮ ಜರುಗಿಸಿ ಸುಮ್ಮನಾಗುತ್ತದೆ. ಹಾಗಿದ್ದರೆ ನಿಜಕ್ಕೂ ಸಮಾಜ ಮತ್ತು ಸರ್ಕಾರದ ಜವಾಬ್ದಾರಿ? ದಲಿತರಿಗೆ ವ್ಯಾಪಾರ, ವ್ಯವಹಾರ ಕೈಗೊಳ್ಳಲಿಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡುವುದಾಗಿದೆ.
ಹಿಂದೆ, ವರ್ಣಾಶ್ರಮ ವ್ಯವಸ್ಥೆಯಲ್ಲಿ ವ್ಯಾಪಾರ ಮಾಡುವುದು ಒಂದು ವರ್ಗಕ್ಕೆ ಎಂದು ನಿಗದಿಯಾಗಿತ್ತು. ಈಗ, ಇಂತಹದ್ದೆ ಜಾತಿ ಇಂತಹದ್ದೆ ಕೆಲಸ ಮಾಡಬೇಕು, ಇಂತಹದ್ದೆ ಬದುಕಿನ ಹಾದಿ ಹಿಡಿಯಬೇಕು ಎಂಬುದು ಅಪ್ರಸ್ತುತವಾಗಿವೆ. ಹಾಗೆಯೇ ಹಿಂದುಳಿದವರಿಗೆ, ದಲಿತರಿಗೆ ಸಂವಿಧಾನವು ಸರ್ಕಾರಿ ನೇಮಕದಲ್ಲಿ ಮೀಸಲಾತಿ ಕೂಡ ಕೊಟ್ಟಿದೆ. ದುರದೃಷ್ಟವಶಾತ್ ಆ ಮೀಸಲಾತಿಯು ಸರ್ಕಾರಿ ನೇಮಕ ಮರೀಚಿಕೆಯಾಗುತ್ತಿರುವ ಈ ದಿನಗಳಲ್ಲಿ ಉಪಯೋಗಕ್ಕೆ ಬಾರದ ಅಸ್ತ್ರವಾಗುತ್ತಿದೆ. ಇಂತಹ ಇಕ್ಕಟ್ಟಿನ ವ್ಯವಸ್ಥೆಯಲ್ಲಿ ಬದುಕಿಗಾಗಿ ದಲಿತರು ಏನು ಮಾಡಬೇಕು? ಗೌರವಯುತವಾದ ಅನ್ಯ ಮಾರ್ಗಗಳನ್ನು ಹಿಡಿಯಲೇಬೇಕಲ್ಲವೇ? ಬದುಕಿಗಾಗಿ ಅವರೂ ಅನ್ಯ ಉದ್ಯೋಗಗಳನ್ನು ಮಾಡಲೇಬೇಕಿದೆ. ವ್ಯಾಪಾರ– ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲೇಬೇಕಿದೆ.ಭಾರತಕ್ಕೆ ವ್ಯಾಪಾರಕ್ಕೆಂದು ಪೋರ್ಚುಗೀಸರು, ಫ್ರೆಂಚರು, ಡಚ್ಚರು, ಬ್ರಿಟಿಷರು... ಹೀಗೆ ವಿದೇಶಿಯರ ದಂಡೇ ಬಂದಿದೆ. ಹೀಗಿರುವಾಗ ಸ್ವದೇಶಿಯರಾದ ದಲಿತರು ವ್ಯಾಪಾರ– ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದು ತಪ್ಪೇ? ಈ ನಿಟ್ಟಿನಲ್ಲಿ ವ್ಯವಸ್ಥೆ ಮಾನವೀಯತೆಯಿಂದ ವರ್ತಿಸಲಿ. ದಲಿತರು ವ್ಯಾಪಾರ– ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು, ಆ ಮೂಲಕ ಗೌರವಯುತ ಬದುಕನ್ನು ಕಂಡುಕೊಳ್ಳಲು ಅವಕಾಶ ಮಾಡಿಕೊಡಲಿ.
ರಘೋತ್ತಮ ಹೊ.ಬ.,ಆಲನಹಳ್ಳಿ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.