ADVERTISEMENT

ಸೌಜನ್ಯದ ನಡೆ ಕಸಿದ ಮೊಬೈಲ್‌

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 19:39 IST
Last Updated 9 ಡಿಸೆಂಬರ್ 2021, 19:39 IST

ಮಕ್ಕಳನ್ನು ಕಾಡುತ್ತಿರುವ ಮೊಬೈಲ್ ಮೋಹದ ವಿವಿಧ ಆಯಾಮಗಳನ್ನು ದೀಪಾ ಹೀರೇಗುತ್ತಿ ಅವರು ತಮ್ಮ ಲೇಖನದಲ್ಲಿ (ಸಂಗತ, ಡಿ. 8) ತುಂಬಾ ಸೊಗ‌ಸಾಗಿ ನಿರೂಪಿಸಿದ್ದಾರೆ. ಇಂದು ಮಕ್ಕಳ ಮನಸ್ಸನ್ನು ಮೊಬೈಲ್ ಫೋನ್‌ ಎಷ್ಟರಮಟ್ಟಿಗೆ ಆವರಿಸಿಬಿಟ್ಟಿದೆಯೆಂದರೆ ಅವರು ಊಟ, ತಿಂಡಿಯನ್ನಾದರೂ ಬಿಟ್ಟಾರು ಮೊಬೈಲ್ ಮಾತ್ರ ಬಿಡಲೊಲ್ಲರು!

ಕೆಲವು ವರ್ಷಗಳ ಹಿಂದೆ ನನ್ನ ಮಗ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪಿಯು ಓದುತ್ತಿದ್ದಾಗ ಕಾಲೇಜಿನ ಗೋಡೆಗಳ ಮೇಲೆ ಅಲ್ಲಲ್ಲಿ ತೂಗಾಡುತ್ತಿದ್ದ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಎಂಬಂತಹ ಫಲಕಗಳು ನನ್ನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದ್ದವು. ಮಕ್ಕಳು ಮೊಬೈಲ್ ಒತ್ತುತ್ತಾ ಕುಳಿತರೆಂದರೆ ಎದುರಿಗೆ ಯಾರೇ ಬಂದರೂ ತಲೆ ಎತ್ತಿ ನೋಡುವಷ್ಟು ಸೌಜನ್ಯವೂ ಅವರಲ್ಲಿ ಇರುವುದಿಲ್ಲ. ಈ ಮೊಬೈಲ್‌ನಿಂದ ಮನುಷ್ಯರ ನಡುವಿನ ಸಂಬಂಧಗಳು, ಓದುವ, ಬರೆಯುವ ಹವ್ಯಾಸಗಳೆಲ್ಲಾ ಮರೆಯಾಗಿ ಹೋಗಿವೆ. ನಮಗಂತೂ ಬೆಳಿಗ್ಗೆ ಮುಂಚೆ ಪತ್ರಿಕೆ ಓದದೇ ಇದ್ದರೆ ಅಂದು ಇಡೀ ದಿನವೆಲ್ಲಾ ಏನನ್ನೋ ಕಳೆದುಕೊಂಡ ಅನುಭವ. ಈಗಿನ ಮಕ್ಕಳಲ್ಲಿ, ‘ನೀವು ಪತ್ರಿಕೆ ಓದುವುದಿಲ್ಲವೇ?’ ಎಂದು ಪ್ರಶ್ನಿಸಿದರೆ, ‘ನಾವು ಮೊಬೈಲ್‌ನಲ್ಲಿಯೇ ಪತ್ರಿಕೆ ನೋಡುತ್ತೇವೆ’ ಎಂಬ ಉತ್ತರ ಬರುತ್ತದೆ. ಪತ್ರಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ಓದುವುದರಲ್ಲಿ ಸಿಗುವ ತೃಪ್ತಿ ಮೊಬೈಲ್‌ನಲ್ಲಿ ಓದುವುದರಲ್ಲಿ ಅದ್ಹೇಗೆ ಸಿಗುವುದೋ ದೇವರೇ ಬಲ್ಲ!

- ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.