ADVERTISEMENT

ವಾಚಕರ ವಾಣಿ | ಬೇಕಾಗಿದೆ ಬೆಸೆಯುವ ಕಲಿಕಾ ಮಾಧ್ಯಮ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 19:30 IST
Last Updated 12 ಆಗಸ್ಟ್ 2020, 19:30 IST

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ‌ಮಾತೃಭಾಷೆಯಲ್ಲಿ ಶಿಕ್ಷಣ ಕುರಿತಾದ ವಿವರಗಳು ಮುನ್ನೆಲೆಗೆ ಬಂದಿವೆ. ಸುಪ್ರೀಂ ಕೋರ್ಟ್, ಭಾಷಾ ಮಾಧ್ಯಮದ ಆಯ್ಕೆಯನ್ನು ಪಾಲಕರ ವಿವೇಚನೆಗೆ ಬಿಟ್ಟಿದೆಯಾದರೂ ಹಲವು ಕನ್ನಡಪರ ಸಂಘಟನೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂದು ಆಗ್ರಹಿಸುತ್ತಿವೆ. ಆದರೆ, ಕನ್ನಡ ಮಾಧ್ಯಮದಲ್ಲಿ‌ ಶಿಕ್ಷಣ ಕೊಟ್ಟ ತಕ್ಷಣ ಕನ್ನಡ ಭಾಷೆಯ ಬೆಳವಣಿಗೆಗೆ ಅನುಕೂಲವಾಗುತ್ತದೆ ಎನ್ನುವ ಕಲ್ಪನೆ ಭ್ರಮೆ ಎನಿಸುತ್ತದೆ.

ನಮ್ಮಲ್ಲಿ ಪ್ರಥಮ ಭಾಷೆ, ದ್ವಿತೀಯ ಭಾಷೆ ಎನ್ನುವ ಶ್ರೇಣಿಯ ಕಲ್ಪನೆಯೇ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಬಗ್ಗೆ ತಾರತಮ್ಯ ಉಂಟುಮಾಡುವುದು. ಪ್ರಥಮ ಭಾಷೆ ಮಹತ್ವದ್ದಾಗಿ, ದ್ವಿತೀಯ ಭಾಷೆ ಕಡಿಮೆ ಮಹತ್ವದ್ದು ಎನ್ನಿಸುವುದು. ಈ ತಾರತಮ್ಯ ಕೊನೆಗಾಣಿಸಿ ಎರಡೂ ಭಾಷೆಗಳಿಗೆ ಸಮಾನ ಬೆಲೆ ನೀಡಿ, ಮಗುವೊಂದನ್ನು ಎರಡೂ ಭಾಷೆಗಳಲ್ಲಿ ಪರಿಣತನಾಗಿಸಲು ಸಾಧ್ಯವಿಲ್ಲವೇ? ಭಾರತದಂತಹ ಬಹುಭಾಷಿಕ ಪರಿಸರದಲ್ಲಿ ರಾಜ್ಯ-ರಾಜ್ಯಗಳ ಸಂಬಂಧ ಬೆಸೆಯುವ ಒಂದು ಸೇತುವೆಯಂತಹ ಭಾಷೆ ಬೇಡವೇ? ವಿಶ್ವ ಸಾಹಿತ್ಯ ಮತ್ತು ವಿಜ್ಞಾನವನ್ನು ನಮ್ಮ ವಿದ್ಯಾರ್ಥಿಗಳ ಜತೆ ಬೆಸೆಯುವುದಕ್ಕೆ ರಾಜ್ಯವೊಂದರ ಆಡಳಿತ ಭಾಷೆಗೆ ಸಾಧ್ಯವೇ? ಈ‌ ದಿಸೆಯಲ್ಲಿ ಪ್ರಾಥಮಿಕ ಶಿಕ್ಷಣ ಎನ್ನುವುದು ಬೆಸೆಯುವ ಮಾಧ್ಯಮವಾಗಬೇಕು. ಅದು ವಿಶ್ವವ್ಯಾಪಿ ಭಾಷೆಯೊಂದಕ್ಕೇ ಸಾಧ್ಯ. ಅದರ ಕಲಿಕೆಯೊಂದಿಗೆ ನಮ್ಮ ಮಾತೃಭಾಷೆಗೂ ಸಮಾನ ಪ್ರಾತಿನಿಧ್ಯ ದೊರೆಯಲಿ. ಶಿಕ್ಷಣ ಎನ್ನುವುದು ವೃತ್ತಿ ಸಾಧ್ಯತೆಯಾಗಿ ಬದಲಾಗಿರುವ ಜಾಗತಿಕ ಸನ್ನಿವೇಶದಲ್ಲಿ, ಸ್ವಾತಂತ್ರ್ಯಪೂರ್ವ ಮನಃಸ್ಥಿತಿಯನ್ನು ಹೊಂದಿ, ಇಂಗ್ಲಿಷ್ ಬೇಡ ಎಂದರೆ ಹೇಗೆ?

-ಸಂದೀಪ್ ಕೆ., ಮಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.