ADVERTISEMENT

ವಾಚಕರ ವಾಣಿ: 06 ಡಿಸೆಂಬರ್ 2023

ವಾಚಕರ ವಾಣಿ
Published 6 ಡಿಸೆಂಬರ್ 2023, 0:21 IST
Last Updated 6 ಡಿಸೆಂಬರ್ 2023, 0:21 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಅರಣ್ಯ ಇಲಾಖೆಗೆ ಕಪ್ಪುಚುಕ್ಕೆ

ದಸರಾ ಅಂಬಾರಿ ಹೊರುತ್ತಿದ್ದ ಬಲಾಢ್ಯ ಆನೆ ಅರ್ಜುನನು ಕಾಡಾನೆಯೊಂದಿಗೆ ಸೆಣಸಾಡಿ ಮಹಾಭಾರತದ ಅಭಿಮನ್ಯುವಿನಂತೆ ವೀರೋಚಿತ ಮತ್ತು ದಾರುಣ ಸಾವನ್ನಪ್ಪಿದ ಸುದ್ದಿಯನ್ನು ಕೇಳಿ ಆಕ್ರೋಶಭರಿತನಾಗಿ

ದ್ದೇನೆ. ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ದಸರಾ ಆನೆಗಳನ್ನು ಬಳಸುವುದು ಹೊಸದೇನಲ್ಲ. ಕಾಡಾನೆಗಳನ್ನು ಹಿಡಿದು ಪಳಗಿಸುವ ಕೆಲಸಕ್ಕೆ ಎಂಟೆದೆ ಬೇಕು. ಅದರಲ್ಲಿ ನೇರವಾಗಿ ತೊಡಗುವ ಸಿಬ್ಬಂದಿಯ ಧೈರ್ಯವನ್ನು ಗೌರವಿಸುತ್ತೇನೆ. ಆದರೆ, ಅರಣ್ಯ ಇಲಾಖೆಯು ವಯೋವೃದ್ಧ ಅರ್ಜುನನ ಬಳಕೆಯನ್ನು ಹಗುರವಾಗಿ ಪರಿಗಣಿಸಬಾರದಾಗಿತ್ತು.

ADVERTISEMENT

ಕಾರ್ಯಾಚರಣೆಯ ವೇಳೆ ನಡೆದಿರಬಹುದಾದ ಲೋಪದಿಂದ ಅರ್ಜುನನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಬಿದ್ದಿದ್ದು ನಿಜವಾಗಿದ್ದರೆ, ಅನುಮತಿ ನೀಡಿದ ಮತ್ತು ತಪ್ಪೆಸಗಿದ ಎಲ್ಲರೂ ಶಿಕ್ಷಾರ್ಹರಾಗುವುದರಲ್ಲಿ ಸಂಶಯವಿಲ್ಲ. ಅಧಿಕಾರಿಗಳು ಕೊಡುತ್ತಿರುವ ಪತ್ರಿಕಾ ಹೇಳಿಕೆಗಳು ಕ್ಷುಲ್ಲಕ ಸಬೂಬಿನಂತೆ ಕೇಳಿಸುತ್ತಿವೆ ಮತ್ತು ಅರ್ಜುನನನ್ನು ಅಪಮಾನಿಸುವಂತಿವೆ. ದಸರಾ ಆನೆಗಳು ನಾಡಿನ ವನ್ಯ ಸಂಪತ್ತಿನ ಮುಕುಟಮಣಿಗಳು. ಹಿಂದಿನ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಕಾಡಾನೆ ದಾಳಿಗೆ ಸಿಲುಕಿ, ಭವಿಷ್ಯದ ಅಂಬಾರಿ ಆನೆಯೆಂದೇ ಬಿಂಬಿತವಾಗಿದ್ದ ಗೋಪಾಲಸ್ವಾಮಿ ಸಾವಿಗೀಡಾಗಿದ್ದು, ಈಗ, ಅಂಬಾರಿ ಹೊತ್ತು ಹೆಸರಾಗಿದ್ದ ಅನುಭವಿ ಅರ್ಜುನನ ಸಾವು ಅರಣ್ಯ ಇಲಾಖೆಯ ಕ್ಷಮತೆಯ ಮೇಲೆ ಅಳಿಸಲಾಗದ ಕಪ್ಪುಚುಕ್ಕೆಯನ್ನಿಟ್ಟಿವೆ.

– ಶ್ರೀಕಂಠ, ಬೆಂಗಳೂರು

ನಮ್ಮೊಳಗಿನ ಹೂಳನ್ನು ತೊಳೆಯುವ ಕಾಯಕ

ಶಿರಸಿ ಬಳಿಯ ‘ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ’ದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಡಿಸೆಂಬರ್‌ 2ರಂದು ಒಂದಿಡೀ ಗಂಟೆ ಕೂತು ಶಿವಾನಂದ ಕಳವೆಯವರ ಉಪನ್ಯಾಸವನ್ನು ಆಲಿಸಿದ್ದು (ಪ್ರ.ವಾ., ಡಿ. 3) ವರದಿಯಾಗಿದೆ. ಸಚಿವರೊಂದಿಗೆ ಸ್ಥಳೀಯ ಶಾಸಕರು, ಅರಣ್ಯಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಹಿರಿಯ ಎಂಜಿನಿಯರ್‌ಗಳೂ ನಾಡಿನ ಜಲಸಂರಕ್ಷಣೆಯ ಪಾಠವನ್ನು ಕೇಳಿದ್ದು ಒಂದು ಅಪರೂಪದ, ಮಾದರಿಯ ಘಟನೆಯೇ ಸರಿ. ‘ಕೆರೆಯ ಪುನರುತ್ಥಾನಕ್ಕೆ ಮಂಜೂರಾದ ಹಣದಲ್ಲಿ ಶೇಕಡ 10ರಷ್ಟು ಮೊತ್ತ ಮಾತ್ರ ಹೂಳು ತೆಗೆಯಲು ವಿನಿಯೋಗವಾಗಿ ಉಳಿದೆಲ್ಲ ಮೊತ್ತ ಸುತ್ತಲಿನ ಸೌಂದರ್ಯವರ್ಧನೆಗೆ ವಿನಿಯೋಗವಾಗುತ್ತದೆ’ ಎಂದು ಕಳವೆಯವರು ಹೇಳಿದ್ದನ್ನು ಇವರೆಲ್ಲ ಸಾವಧಾನ ಕೂತು ಕೇಳಿಸಿಕೊಂಡರಲ್ಲ, ಅದು ಮಹತ್ವದ್ದು.

ಸರ್ಕಾರದ ಆಡಳಿತವೈಖರಿ ಕುರಿತಂತೆ ಶ್ರೀಸಾಮಾನ್ಯನ ದೃಷ್ಟಿಕೋನ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಸಂಯಮ ಈಚಿನ ವರ್ಷಗಳಲ್ಲಿ ಆಳುವ ಪ್ರಭುಗಳಿಗೆ ಇದ್ದಿದ್ದೇ ವಿರಳ. ಅದರಲ್ಲೂ ನಾಡಿನಾದ್ಯಂತ ಓಡಾಡುತ್ತ ಕೆರೆ, ನದಿ, ಅರಣ್ಯಗಳ ಸ್ಥಿತಿ, ದುಃಸ್ಥಿತಿಯ ಅಧ್ಯಯನ ಮಾಡಿರುವ ಕಳವೆಯರ ವಾಸ್ತವ ಕಥನಗಳನ್ನು ಕೂತು ಕೇಳುವಷ್ಟು ಸಂಯಮವನ್ನು ಅಧಿಕಾರಿಶಾಹಿ ತೋರಿದ್ದು ಇತರ ಇಲಾಖೆಗಳಿಗೂ ಸಚಿವರುಗಳಿಗೂ ಅನುಕರಣೀಯ ಪಾಠವಾಗಬೇಕು.

- ನಾಗೇಶ ಹೆಗಡೆ, ಕೆಂಗೇರಿ

ಹೀಯಾಳಿಕೆ ಸರಿಯಲ್ಲ

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ, ಕರ್ನಾಟಕದ ಜನ ಬಿಟ್ಟಿ ಭಾಗ್ಯಗಳಿಗೆ ತಮ್ಮನ್ನು ಮಾರಿಕೊಂಡರು, ಉತ್ತರದ ಜನ ದೇಶದ ಹಿತಕ್ಕಾಗಿ ಮತ ನೀಡಿದರು ಎಂದೆಲ್ಲ ಅವಮಾನ ಮಾಡುವುದು ಪ್ರಾರಂಭವಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉತ್ತರದ ರಾಜ್ಯಗಳಲ್ಲಿ ಏನು ಮಾಡಿದೆ ಹಾಗೂಕರ್ನಾಟಕದಲ್ಲಿ ಏನು ಮಾಡಿದೆ ಎನ್ನುವ ಕುರಿತು ತುಲನೆ ನಡೆಯಲಿ. ಆಗ ಕರ್ನಾಟಕದ ಜನ ಏಕೆ ಬಿಜೆಪಿಯನ್ನು ತಿರಸ್ಕರಿಸಿದರು ಎನ್ನುವುದು ತಿಳಿಯುತ್ತದೆ.

ಕೇಂದ್ರ ಸರ್ಕಾರದ ವತಿಯಿಂದ ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳೆಲ್ಲ ಉತ್ತರ ಭಾರತದಲ್ಲೇ ಹೆಚ್ಚು ಜಾರಿಯಾಗಿವೆ. ಇದನ್ನೆಲ್ಲ ಪರಿಗಣಿಸದೆ, ‘ಭಾಗ್ಯ’ಗಳನ್ನು ಗುರಿಯಾಗಿಸಿ ರಾಜ್ಯದ ಜನರನ್ನು ಹೀಯಾಳಿಸುವುದು ಸರಿಯಲ್ಲ.

- ದೇವಿದಾಸ ಪ್ರಭು, ಭಟ್ಕಳ

ಸರಳ ಸತ್ಯ ಮರೆತರೇಕೊ?

ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಯುವಕನೊಬ್ಬನ ಬೈಕ್ ಡಿಕ್ಕಿ ಆದ ಪ್ರಕರಣದಲ್ಲಿ, ಭವಾನಿ ಅವರು ಆ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರು ‘ಸಾಯೋಕೆ ನನ್ನ ಕಾರೇ ಬೇಕಿತ್ತಾ? ಬಸ್ಸಿಗೆ ಸಿಕ್ಕಿ ಸಾಯಿ’ ಎಂದು ಆವೇಶದಿಂದ ಹೇಳುವುದರ ಜೊತೆಗೆ, ಒಂದೂವರೆ ಕೋಟಿ ರೂಪಾಯಿಯ ಈ ಕಾರಿನ ರಿಪೇರಿಗೆ ಐವತ್ತು ಲಕ್ಷ ಖರ್ಚಾಗುತ್ತದೆ ಎಂದೆಲ್ಲ ಕೂಗಾಡಿದ್ದಾರೆ. ಎಷ್ಟೇ ಹಣ ನೀಡಿದರೂ ಪ್ರಾಣ ಹಿಂದಿರುಗದು. ಆದರೆ ಹಣದಿಂದ ಕಾರಿನ ರಿಪೇರಿ ಆಗುತ್ತದೆ ಎಂಬ ಸರಳ ಸತ್ಯವನ್ನು ಅವರು ಮರೆತರೇಕೊ? ಅದೂ ಅಲ್ಲದೆ ಕಾರಿನ ರಿಪೇರಿಗೆ ವಿಮಾ ಹಣ ಬಂದೇ ಬರುತ್ತದೆ. ಈ ಪ್ರಕರಣದ ಕುರಿತು ರೇವಣ್ಣ ಮತ್ತು ಮಗ ಸೂರಜ್ ಕ್ಷಮೆ ಕೇಳಿದ್ದಾರೆ. ಬೇಕಾದರೆ ಭವಾನಿ ಅವರಿಂದ ಕ್ಷಮೆ ಕೇಳಿಸುತ್ತೇನೆ ಎಂದು ರೇವಣ್ಣ ಹೇಳಿದ್ದಾರೆ. ಬೇಕಾದರೆ ಎಂದರೆ ಏನರ್ಥ?

ರಸ್ತೆಯಲ್ಲಿ ಅಪಘಾತ ಆದ ಸಂದರ್ಭದಲ್ಲಿ ಗಾಯಾಳುಗಳನ್ನು ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ ಶಾಸಕರು, ಮಂತ್ರಿಗಳನ್ನು ಈ ದೇಶ ಕಂಡಿದೆ. ಅಂತಹವರ ನಡುವೆ ಇಂತಹ ದುರ್ವರ್ತನೆ ತೋರುವವರು ಇದ್ದಾರೆಂದರೆ ಅದು ನಾಚಿಕೆಗೇಡು.

- ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.