ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು- 10 ಅಕ್ಟೋಬರ್ 2025

ವಾಚಕರ ವಾಣಿ
Published 10 ಅಕ್ಟೋಬರ್ 2025, 0:25 IST
Last Updated 10 ಅಕ್ಟೋಬರ್ 2025, 0:25 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ತೆರಿಗೆ ಭರಿಸುವ ಗುಂಡಿಗೆ ನಮಗಿಲ್ಲ

ಆ ‘ಗುಂಡಿ’ಗೆ ನಿಮಗಿದೆಯೇ ಸೋಮಿ? ಲೇಖನ (ಲೇ: ಪ್ರವೀಣ ಕುಲಕರ್ಣಿ, ಪ್ರ.ವಾ., ಅ. 8) ಓದಿ ಗಾಬರಿಯಾಯಿತು. ಮತ್ತೆ ಈಗ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ಜಪಾನ್‌, ವಿಯೆಟ್ನಾಂ, ಸಿಂಗಪುರ, ಚೀನಾಕ್ಕೆ ಅಲ್ಲಿನ ಗುಂಡಿಗಳ ನಿರ್ವಹಣೆಯ ವೀಕ್ಷಣೆ ಮತ್ತು ತರಬೇತಿಗೆ ಶಾಸಕ– ಸಚಿವರು– ಅಧಿಕಾರಿಗಳ ತಂಡ ಕಳುಹಿಸುವ ಸಾಧ್ಯತೆಯಿದೆ. ಇಲ್ಲಿ ಪೋಲಾಗುವುದು ಮತ್ತೆ ನಮ್ಮ , ಅಂದರೆ ಬಡಪಾಯಿಗಳಾದ ಗುಂಡಿ ಸಂತ್ರಸ್ತರ ಹಣವೇ ಅಲ್ಲವೇ! ನಮ್ಮ ಮೇಲೆ ಇನ್ನಷ್ಟು ತೆರಿಗೆ ಹೊರೆ ಬಿದ್ದರೇನು ಗತಿ. ಇದನ್ನು ಭರಿಸುವ ಗುಂಡಿಗೆ ನಮಗಂತೂ ಇಲ್ಲ.

-ಸುಧಾ ಕೆ., ಬೆಂಗಳೂರು

ADVERTISEMENT

ಜಾತಿ ನೆತ್ತರಿನ ನಂಜನ್ನು ಮೀರಲಾಗದೆ?

ದೇಶವು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಮುನ್ನಡೆ ಸಾಧಿಸಿದೆ. ಆದರೆ, ಜಾತಿಯ ವ್ಯಸನದಿಂದ ಮುಕ್ತವಾಗಿಲ್ಲ ಎಂಬುದಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಕನ್ನಡಿ ಹಿಡಿದಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ ಮೇಲೆ ಶೂ ಎಸೆಯುವ ಪ್ರಯತ್ನದ ಹಿಂದೆಯೂ ಜಾತೀಯತೆಯ ಷಡ್ಯಂತ್ರವಿದೆ. ಹೀಗಿದ್ದಾಗ ಮನುಷ್ಯ ಜಾತಿ, ಧರ್ಮದ ಅಮಲನ್ನು ಮೀರಲು ಸಾಧ್ಯವೇ? ನಮ್ಮ ದೇಶದಲ್ಲಿ ಜಾತಿಯ ಘಟಸರ್ಪದ ಫೂತ್ಕಾರ ಹೆಚ್ಚುತ್ತಿರುವುದು ವಿಷಾದನೀಯ.

-ಷಣ್ಮುಖ ಎಸ್.ಎಚ್., ಹಳೇಬಾತಿ

‘ಬಸವ ಮೆಟ್ರೊ’ ಸ್ವಾಗತಾರ್ಹ ಪ್ರಸ್ತಾಪ

ನಮ್ಮ ಮೆಟ್ರೊಗೆ ‘ಬಸವ ಮೆಟ್ರೊ’ ಎಂದು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಸ್ವಾಗತಾರ್ಹ. ನಾಡಿನ ಪುಣ್ಯ ಪುರುಷರಲ್ಲಿ ಬಸವಣ್ಣ ಅಗ್ರಗಣ್ಯರು. ಈಗಾಗಲೇ, ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಲಾಗಿದೆ.

ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಹೆಸರಿಸಲಾಗಿದೆ. ಸಮಾಜದಲ್ಲಿನ ಅಂಧಕಾರದ ನಿರ್ಮೂಲನೆಗೆ ಬಸವಣ್ಣ ಶ್ರಮಿಸಿದ್ದಾರೆ. ಮೆಟ್ರೊಗೆ ಅವರ ಹೆಸರಿಡುವ ಮೂಲಕ ಅವರನ್ನು ಸ್ಮರಿಸುವುದು ಒಳ್ಳೆಯ ನಡೆಯಾಗಿದೆ.

- ಅಶೋಕ ಉಗಾರ, ವಿಜಯಪುರ

ಕನ್ನಡ ಕಲಿಕೆ: ಮುಗಿಯದ ಜಿಜ್ಞಾಸೆ

‘ಕಡ್ಡಾಯ ಕನ್ನಡ ಪರೀಕ್ಷೆ: ಅಸ್ಪಷ್ಟ ನಿರೀಕ್ಷೆ’ ಲೇಖನ (ಪ್ರೊ. ಅಬ್ದುಲ್ ರೆಹಮಾನ್ ಪಾಷ, ಪ್ರ.ವಾ., ಅ. 9) ಕುರಿತು ಎರಡು ಅಂಶಗಳನ್ನು ಹೇಳಬೇಕೆನಿಸಿತು. ಒಂದು, ‘ಕನ್ನಡೇತರರು ಗದ್ಯ, ಪದ್ಯ, ಸಂಧಿ, ಸಮಾಸ, ಛಂದಸ್ಸು ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಕೂಡಿರುವ 6ನೇ ತರಗತಿ ಪಠ್ಯ ಓದುವುದರಿಂದ ಪ್ರಯೋಜನವಿಲ್ಲ’. ಎರಡು, ‘ಇಂಗ್ಲಿಷ್–ಕನ್ನಡ ಅನುವಾದ ಅಗತ್ಯವಿಲ್ಲ.’ ಆಡಳಿತ ಕನ್ನಡ ಕಲಿಸಬೇಕು ಎಂಬುದು ಲೇಖಕರ ಉದ್ದೇಶ.

ಒಂದು, ಯಾರೂ ಆಡಳಿತ ಕನ್ನಡವನ್ನು ಕಲಿತುಕೊಂಡು ಕೆಲಸಕ್ಕೆ ಸೇರುವುದಿಲ್ಲ. ಅವರಿಗೆ ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಬಂದರೆ ಅವರಿಗೆ ಆಡಳಿತ ಕನ್ನಡ ಕುರಿತು ತರಬೇತಿ ನೀಡಬಹುದು. ಎರಡು, ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳನ್ನು ಎಷ್ಟರಮಟ್ಟಿಗೆ ತಿಳಿದುಕೊಂಡಿದ್ದಾರೆ ಎಂದು ಪರೀಕ್ಷಿಸಲು, ಕನ್ನಡ–ಇಂಗ್ಲಿಷ್ ಭಾಷಾಂತರ ಪರೀಕ್ಷೆ ಇರುತ್ತದೆಯೇ ವಿನಾ, ಅವರು ಕಚೇರಿಯಲ್ಲಿ ಕನ್ನಡ–ಇಂಗ್ಲಿಷ್ ಅನುವಾದ ಮಾಡಲಿ ಎಂದಲ್ಲ.‌

- ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪರಿಹಾರಕ್ಕೂ ಲಂಚ: ಗಾಯದ ಮೇಲೆ ಬರೆ

ಮಳೆ-ಬೆಳೆ ಏರಿಳಿತದಲ್ಲಿ, ಪ್ರವಾಹ ಪರಿಸ್ಥಿತಿಯಲ್ಲಿ ಹೆಚ್ಚಾಗಿ ನೋವು ಅನುಭವಿಸುವ ವರು‌ ಉತ್ತರ ಕರ್ನಾಟಕದ ಜನ. ಅದರಲ್ಲೂ ರೈತಾಪಿ ವರ್ಗವೇ ಅಧಿಕ. ಸರ್ಕಾರ ಕಣ್ತೆರೆದು ಪರಿಹಾರ ಘೋಷಣೆ ಮಾಡಿದರೆ ಅದನ್ನು ಪಡೆಯಲು ಹೋರಾಟ ಮಾಡಬೇಕಾದ ಸಂದಿಗ್ಧತೆ ಸೃಷ್ಟಿಯಾದರೆ ಹೇಗೆ?

ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ವರದಿಯಾಗಿರುವ ಘಟನೆಯೊಂದು ಮಾನವೀಯತೆ ಯನ್ನೇ ಅಣಕಿಸುವಂತಿದೆ. ಬೆಳೆ ಪರಿಹಾರದ ಅರ್ಜಿ ಸ್ವೀಕರಿಸಲು ಗ್ರಾಮ ಲೆಕ್ಕಾಧಿಕಾರಿಯೊಬ್ಬರು ₹9 ಸಾವಿರ ಲಂಚ ಪಡೆದಿರುವುದು ಹೇಸಿಗೆ ವಿಚಾರವೇ ಸರಿ. ಅಂತಹ ಅಧಿಕಾರಿಯನ್ನು ಅಮಾನತುಗೊಳಿಸಿದರೆ ಸಾಲದು. ಕೆಲಸದಿಂದಲೇ ವಜಾಗೊಳಿಸಬೇಕು. ಲಂಚಬಾಕರಿಗೆ ಅದೊಂದು ಪಾಠವಾಗಬೇಕು. ಪರಿಹಾರ ಕೊಡುವ ಸಂದರ್ಭದಲ್ಲೂ ನೋವಿನ ಮೇಲೆ ಬರೆ ಎಳೆಯುವ ದುರಾತ್ಮರಿಗೆ ಸರಿಯಾದ ಪಾಠ ಕಲಿಸಬೇಕಿದೆ.

-ಪ್ರಕಾಶ್ ಮಲ್ಕಿ ಒಡೆಯರ್‌, ಹೂವಿನ ಹಡಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.