ADVERTISEMENT

ವಾಚಕರ ವಾಣಿ: ವಿ.ವಿ: ಸಂಖ್ಯೆಯಲ್ಲಿ ಹೆಚ್ಚಳ, ಗುಣಮಟ್ಟದಲ್ಲಿ ಕುಸಿತ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 20:21 IST
Last Updated 29 ಡಿಸೆಂಬರ್ 2022, 20:21 IST

ವಿ.ವಿ: ಸಂಖ್ಯೆಯಲ್ಲಿ ಹೆಚ್ಚಳ, ಗುಣಮಟ್ಟದಲ್ಲಿ ಕುಸಿತ

ರಾಜ್ಯ ಸರ್ಕಾರವು ಯಾರನ್ನು ಮೆಚ್ಚಿಸುವ ಸಲುವಾಗಿ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಹೊರಟಿದೆ ಎಂಬ ಎಂ.ಎಸ್‌.ರಘುನಾಥ್‌ ಅವರ ಪ್ರಶ್ನೆ (ಸಂಗತ, ಡಿ. 27) ಸಕಾಲಿಕವಾಗಿದೆ. ಒಂದು ಕಾಲದಲ್ಲಿ ರಾಜ್ಯದಲ್ಲಿ
ವಿಶ್ವವಿದ್ಯಾಲಯಗಳು ಬೆರಳೆಣಿಕೆಯಷ್ಟಿದ್ದು, ಇದ್ದುದರಲ್ಲೇ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದವು. ಕಾಲಕ್ರಮೇಣ ಅವುಗಳ ಸಂಖ್ಯೆ ಹೆಚ್ಚಾಗುತ್ತಾ ಗುಣಮಟ್ಟ ಕ್ಷೀಣಿಸುತ್ತಾ ಬಂದಿತು. ಬೋಧನೆಯ ಮಟ್ಟ ಕುಸಿಯುತ್ತಿರುವುದು, ವಿದ್ಯಾರ್ಜನೆ ಬಗೆಗಿನ ಆಸಕ್ತಿ ಕಡಿಮೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.

ರಮೇಶ್,ಬೆಂಗಳೂರು

ADVERTISEMENT

ಭ್ರಷ್ಟಾಚಾರ: ಇಲ್ಲೂ ಆಗಲಿ ‘ಮೇಜರ್ ಸರ್ಜರಿ’

ದೂರಸಂಪರ್ಕ ಇಲಾಖೆಯ ಹತ್ತು ಕಳಂಕಿತ ಹಿರಿಯ ಅಧಿಕಾರಿಗಳನ್ನು ಇತ್ತೀಚೆಗೆ ಕಡ್ಡಾಯವಾಗಿ ನಿವೃತ್ತಿ
ಗೊಳಿಸಲಾಗಿದೆ. ಈ ಮೂಲಕ, ಭ್ರಷ್ಟಾಚಾರವನ್ನು ಕಿಂಚಿತ್ತೂ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಸರ್ಕಾರ ರವಾನೆ ಮಾಡಿದೆ. 2014ರಿಂದ ನಿಷ್ಕ್ರಿಯತೆ ಮತ್ತು ಅಪ್ರಾಮಾಣಿಕತೆಗಾಗಿ ಸುಮಾರು 400 ಅಧಿಕಾರಿಗಳನ್ನು
ಕೇಂದ್ರವು ನಿವೃತ್ತಿಗೊಳಿಸಿದೆ. ಕರ್ನಾಟಕದಲ್ಲಿಯೂ ಇಂತಹ ಒಂದು ‘ಮೇಜರ್ ಸರ್ಜರಿ’ಯ ಅಗತ್ಯವಿದೆ.

ಲಂಚ ಕೊಡದೆ ಯಾವುದೇ ಕಡತ ಮುಂದೆ ಹೋಗುವುದಿಲ್ಲ ಎಂದು ಹೈಕೋರ್ಟ್‌ ಇತ್ತೀಚೆಗೆ ಅಸಮಾಧಾನ
ವ್ಯಕ್ತಪಡಿಸಿತ್ತು. ಕೆಲವು ಐಎಎಸ್ ಅಧಿಕಾರಿಗಳು ನಿವೃತ್ತಿಯ ವೇಳೆಗೆ 500 ಕೋಟಿ ರೂಪಾಯಿ ಬೆಲೆಬಾಳುತ್ತಾರೆ ಎಂದು ಶಾಸಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದರು. ಬಹುತೇಕ ಅಧಿಕಾರಿಗಳು ಮತ್ತು ನೌಕರರ ಹೊಣೆಗೇಡಿತನ ದಿಂದಾಗಿ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಒಂದು ಪ್ರಹಸನದ ಮಟ್ಟಕ್ಕೆ ಕುಸಿದಿರುವುದು ಸಾಮಾನ್ಯ ಜನರ ಅನುಭವಕ್ಕೆ ಬಂದಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯಲ್ಲಿ ಅದಕ್ಷರು ಮತ್ತು ಭ್ರಷ್ಟರ ಕಡ್ಡಾಯ ನಿವೃತ್ತಿಗೆ ಅವಕಾಶ ಇದೆ.

ಸಿ.ರುದ್ರಪ್ಪ,ಬೆಂಗಳೂರು

ಮೂದಲಿಕೆಗೆ ಬ್ರೇಕ್‌ ಬೀಳಬಹುದೇ?

‘ಸೈಜುಗಲ್ಲು ಹೊತ್ತೋರ ಮೇಲೆತ್ತೋರ್‍ಯಾರು?’ ಶೀರ್ಷಿಕೆಯ ರವೀಂದ್ರ ಭಟ್ಟ ಅವರ ಲೇಖನ (ಪ್ರ.ವಾ., ಡಿ. 29) ಹೃದಯಸ್ಪರ್ಶಿ ಆಗಿತ್ತು. ಧರ್ಮರಾಯನ ರೂಪಕದ ಸಾಲುಗಳು ತಾಯಿ ಹೃದಯದ್ದಾಗಿವೆ. ಮನೆಯಲ್ಲಿರುವ ಎಲ್ಲರ ಊಟವಾದ ಮೇಲೆ ಊಟ ಮಾಡುವುದು ಈ ನೆಲದ ಹೆಣ್ಣುಕುಲದ ಗುಣವಿರಬಹುದು.

ಶೋಷಿತ ಸಮುದಾಯಗಳನ್ನು ನೋಡಿ ‘ಇವರಿಗೆ ಇನ್ನೂ ಎಷ್ಟು ದಿನ ಮೀಸಲಾತಿ ಕೊಡುವುದು’ ಎಂದು ಮೂದಲಿಸುತ್ತಿದ್ದ ಸಮುದಾಯಗಳೇ ಈಗ ತಮಗೂ ಮೀಸಲಾತಿ ಕೇಳುತ್ತಿರುವುದರಿಂದ ಇಷ್ಟೂ ದಿನಗಳ ಕಾಲ ಮಾಡಿದ ಮೂದಲಿಕೆಗೆ ಇನ್ನಾದರೂ ಬ್ರೇಕ್‌ ಬೀಳಬಹುದೇ? ಲೇಖನ ಓದಿ ಮುಗಿಸಿದಾಗ, ಬಸವಣ್ಣನವರ ಒಂದು ವಚನ ನೆನಪಾಯಿತು. ಅದರ ಸಾರಾಂಶ ಹೀಗಿದೆ: ಬಸವಣ್ಣನವರ ಪತ್ನಿ ನೀಲಾಂಬಿಕೆ, ಗಂಡನೆಂಬ ಪ್ರೇಮದಿಂದ ಪತಿಗೆ ಊಟವನ್ನು ಸ್ವಲ್ಪ ಜಾಸ್ತಿ ಬಡಿಸುತ್ತಾರೆ. ತಕ್ಷಣ ಬಸವಣ್ಣನವರು ‘ನನ್ನ ಹೊಟ್ಟೆಗೆ ಎಷ್ಟು ಬೇಕೊ ಅಷ್ಟು ಬಡಿಸಬೇಕು. ಊಟ ಮಾಡಬೇಕು. ಅಗತ್ಯಕ್ಕಿಂತ ಹೆಚ್ಚು ಒಂದು ತುತ್ತಲ್ಲ, ಒಂದು ಅಗುಳು ಕೂಡ ನನ್ನದಲ್ಲ’ ಎನ್ನುತ್ತಾರೆ. ಈ ಮಾತು ಪ್ರಕೃತಿಯ ನುಡಿಯಂತೆ ಇದೆ. ಇದು ನೀಲವ್ವನ ಕಣ್ಣು ತೆರೆಸಿತು. ಹಾಗೇ ನಮ್ಮೆಲ್ಲರ ಕಣ್ಣು ಕೂಡ ತೆರೆಸಬೇಕಲ್ಲ.ಯಾರ ಅನ್ನವನ್ನು ಯಾರೂ ಕದಿಯದಂತೆ ಎಲ್ಲರನ್ನೂ ತಾಯಿ ಮಮತೆಯಿಂದ ನೋಡಿಕೊಳ್ಳಬೇಕಾದುದು ನಮ್ಮ ನಾಗರಿಕ ಸಮಾಜ ಮತ್ತು ನಮ್ಮನ್ನು ಆಳುವ ಸರ್ಕಾರದ ಹೊಣೆ. ಇಂತಹ ಬರಹಗಳನ್ನು ಓದಿದ ಬಳಿಕ ಕನಿಷ್ಠ ನಮ್ಮ ನೆರಳಿಗಾದರೂ ಅಂಜಿ, ಆಚರಣೆಗೆ ತಂದುಕೊಳ್ಳುವುದರಲ್ಲಿ ಮನುಷ್ಯನ ಘನತೆ ಇದೆ.

ಸುಬ್ಬು ಹೊಲೆಯಾರ್‌,ಬೆಂಗಳೂರು

ಹೈನುಗಾರನದೂ ಮೂಕವೇದನೆ

ಜಾನುವಾರುಗಳಿಗೆ ವ್ಯಾಪಿಸಿದ ಚರ್ಮಗಂಟು ರೋಗದ ಬಗೆಗಿನ ಲೇಖನದಲ್ಲಿ (ಸಂಗತ, ಡಿ. 28)
ಡಾ. ಮುರಳೀಧರ ಕಿರಣಕೆರೆ ಅವರು ರೈತನ ಸಂದೇಹಕ್ಕೆ ಬಹುಮಟ್ಟಿನ ಸಾಂತ್ವನವನ್ನೇನೋ ನೀಡಿದ್ದಾರೆ. ಆದರೆ ಈ ರೋಗದ ವ್ಯಾಪಕತೆಯಿಂದಾಗಿ ಹೈನುಗಾರ ಇನ್ನೊಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾನೆ.

ತನ್ನ ಎರಡೋ ಮೂರೋ ಹಸುಗಳು ಕಡಿಮೆ ದಿನಗಳ ಅಂತರದಲ್ಲಿ ಕರು ಹಾಕಿದಾಗ, ಮುಂದಿನ ಬೇಸಿಗೆಯಲ್ಲಿ ಉಂಟಾಗಬಹುದಾದ ನೀರು ಹಾಗೂ ಹಸಿರು ಹುಲ್ಲಿನ ಕೊರತೆಯನ್ನು ಮನಗಂಡು, ಒಂದು ಹಸುವನ್ನಾದರೂ ಮಾರೋಣವೆಂದರೆ ಪ್ರಸ್ತುತ ಕಾಲಘಟ್ಟದಲ್ಲಿ ಸರ್ಕಾರದ ಕಟ್ಟುನಿಟ್ಟಿನ ನಿಯಮ ಅಡ್ಡಬರುತ್ತದೆ. ರೋಗದ ಕಾರಣದಿಂದ ದನ ಖರೀದಿಗೆ ಇನ್ನೊಬ್ಬ ರೈತ ಹಿಂದೇಟು ಹಾಕುವುದು ಸಹಜವೇ. ಪರಿಣಾಮ ತನ್ನನ್ನೂ ಬಾಧಿಸುವ ವಯೋಸಹಜವಾದ ಕೈ, ಕಾಲು, ಮಂಡಿ ನೋವಿನಿಂದಾಗಿ ಹಾಗೂ ಕೂಲಿಯಾಳಿನ ಅಲಭ್ಯತೆಯಂತಹ ಹಲವು ಸಮಸ್ಯೆಗಳ ಸುಳಿಯಲ್ಲಿ ಸ್ವತಃ ಸಿಲುಕಿದ ಹೈನುಗಾರನದೂ ಮೂಕವೇದನೆಯೇ!

ಗೋಪು ಗೋಖಲೆ,ಶಿಶಿಲ, ಬೆಳ್ತಂಗಡಿ

ವಿದ್ಯಾರ್ಥಿವೇತನಕ್ಕೆ ಅರ್ಜಿ: ಅಡ್ಡಿ ನಿವಾರಣೆಯಾಗಲಿ

ಸ್ಟೇಟ್‌ ಸ್ಕಾಲರ್‌ಶಿಪ್‌ ಪೋರ್ಟಲ್‌ (ಎಸ್‌ಎಸ್‌ಪಿ) ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆ ಎದುರಿಸುವುದು, ಸರ್ಕಾರ ಸಮಯಾವಕಾಶ ವಿಸ್ತರಿಸುವುದು ಸಾಮಾನ್ಯ ಎನ್ನುವಂತಾಗಿದೆ. ಈ ವರ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕುಟುಂಬದ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ. ಇದರಿಂದ ಅನೇಕ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ. ಏಕೆಂದರೆ ಕುಟುಂಬದ ಐ.ಡಿ ಇಲ್ಲದ ವಿದ್ಯಾರ್ಥಿಗಳಿಗೆ ಇದುವರೆಗೂ ಪೋರ್ಟಲ್‌ನಲ್ಲಿ ಖಾತೆ ಸೃಜಿಸಲು ಸಾಧ್ಯವಾಗಿಲ್ಲ. ಇಲ್ಲಿಯೇ ನೀಡಿರುವ ಕುಟುಂಬ ಪೋರ್ಟಲ್ ಲಿಂಕ್‌ ಬಳಸಿ ನೋಂದಾಯಿಸಿಕೊಂಡರೂ ಐ.ಡಿ ಸಿಗುತ್ತಿಲ್ಲ. ಕುಟುಂಬ ಸಹಾಯವಾಣಿ ‘ಸದಾ ಕಾರ್ಯನಿರತ’ವಾಗಿರುತ್ತದೆ.

ಪಡಿತರ ಚೀಟಿದಾರರು ‘ಎಲೆಕ್ಟ್ರಾನಿಕ್‌ ನೊ ಯುವರ್‌ ಕಸ್ಟಮರ್‌’ (ಇ-ಕೆವೈಸಿ) ಪ್ರಕ್ರಿಯೆ ಮಾಡಿಸದಿರುವುದೇ ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಆಹಾರ ಇಲಾಖೆ ತುರ್ತಾಗಿ ಇದಕ್ಕೆ ಅವಕಾಶ ಮಾಡಿಕೊಟ್ಟು ಸಹಕರಿಸಬೇಕಾಗಿದೆ.

ದೇವರಾಜ ದೊಡ್ಡಗೌಡ್ರ,ನಾಗವಂದ, ರಟ್ಟೀಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.