ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ಹಿಂದಿ ಹೇರಿಕೆ ಬೇಡ
ಮಹಾರಾಷ್ಟ್ರದಲ್ಲಿ 1ರಿಂದ 5ನೇ ತರಗತಿವರೆಗೆ ಹಿಂದಿ ಕಲಿಕೆಯನ್ನು ಕಡ್ಡಾಯ ಮಾಡಿದ್ದರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಗುಜರಾತ್, ಅಸ್ಸಾಂನಲ್ಲಿ ಇಲ್ಲದ ಕಡ್ಡಾಯ ಹಿಂದಿ ಕಲಿಕೆಯು ಮಹಾರಾಷ್ಟ್ರದಲ್ಲಿ ಏಕೆ ಎನ್ನುವುದು ಅಲ್ಲಿನವರ ಪ್ರಶ್ನೆ. ಹಾಗೆ ನೋಡಿದರೆ ಮರಾಠಿ ಮತ್ತು ಹಿಂದಿ ಲಿಪಿ ಎರಡೂ ಒಂದೇ. ಅದು ದೇವನಾಗರಿ. ಆದರೆ, ಬರೆಯುವಲ್ಲಿ ಮತ್ತು ಮಾತನಾಡುವಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಇದು ಮಕ್ಕಳಿಗೆ ಗೊಂದಲ ಉಂಟು ಮಾಡುತ್ತದೆ ಎಂಬುದು ಮರಾಠಿಗರ ಆಕ್ಷೇಪ.
ಪ್ರತಿಭಟನೆ ತೀವ್ರಗೊಂಡಿದ್ದರಿಂದ ಎಚ್ಚೆತ್ತುಕೊಂಡ ಅಲ್ಲಿನ ಸರ್ಕಾರ ಮೂರನೇ ಭಾಷೆಯಾಗಿ ಹಿಂದಿ ಕಲಿಕೆ ಕಡ್ಡಾಯವಲ್ಲ. ಭಾರತದ ಯಾವುದೇ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೊಸ ಆದೇಶ ಹೊರಡಿಸಿದೆ.
ಕನ್ನಡಕ್ಕೆ ಸಂಪೂರ್ಣ ಭಿನ್ನವಾದ ಹಿಂದಿಯನ್ನು ರಾಜ್ಯದ ಶಾಲೆಗಳಲ್ಲಿ ಕಲಿಸಲಾಗುತ್ತಿದೆ. ಇದು ಮಕ್ಕಳ ಒಟ್ಟಾರೆ ಕಲಿಕೆ ಮೇಲೆ ಪರಿಣಾಮ ಬೀರುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಿಂದಿ ವಿಷಯದಲ್ಲಿ ಹಲವು ವಿದ್ಯಾರ್ಥಿಗಳು
ಅನುತ್ತೀರ್ಣರಾಗುತ್ತಿದ್ದಾರೆ. ಸರ್ಕಾರವು ದ್ವಿಭಾಷಾ ಸೂತ್ರ ಅಳವಡಿಸಿಕೊಂಡು ಕನ್ನಡ ಮತ್ತು ಇಂಗ್ಲಿಷ್ ಕಲಿಕೆಗಷ್ಟೇ ಒತ್ತು ನೀಡುವುದು ಸಮಂಜಸ ಎನಿಸುತ್ತದೆ.
⇒ವೆಂಕಟೇಶ ಮಾಚಕನೂರ, ಧಾರವಾಡ
ಲೋಕಾಯುಕ್ತ: ವಿಶ್ವಾಸಾರ್ಹತೆ ಉಳಿಸಿ
ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ನಿವೃತ್ತ ಹೆಡ್ ಕಾನ್‌ಸ್ಟೆಬಲ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು, ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವುದು ವರದಿಯಾಗಿದೆ
(ಪ‍್ರ.ವಾ., ಜೂನ್ 18). ಈ ಪ್ರಕರಣವು ಬೇಲಿಯೇ ಎದ್ದು ಹೊಲ ಮೇಯ್ದ ಗಾದೆಯನ್ನು ನೆನಪಿಸುತ್ತದೆ. ಐಪಿಎಸ್ ಅಧಿಕಾರಿಯೇ ಇಂತಹ ಕೃತ್ಯಕ್ಕೆ ಇಳಿದರೆ ಜನಸಾಮಾನ್ಯರು ನ್ಯಾಯಕ್ಕಾಗಿ ಯಾರ ಮೊರೆ ಹೋಗಬೇಕು ಎಂಬುದು ಅರ್ಥ ವಾಗುವುದಿಲ್ಲ. ಈ ಪ್ರಕರಣವು ಲೋಕಾಯುಕ್ತ ಸಂಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದರತ್ತ ಬೊಟ್ಟು ಮಾಡುತ್ತದೆ. ತನ್ನ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ತನ್ನನ್ನು ತಾನು ಮೊದಲು ಸ್ವಚ್ಛಗೊಳಿಸಿಕೊಳ್ಳುವತ್ತ ಹೆಜ್ಜೆ ಇಡುವ ತುರ್ತಿದೆ.
⇒ತಿಪ್ಪೂರು ಪುಟ್ಟೇಗೌಡ, ಬೆಂಗಳೂರು
ಅತಿಥಿ ಶಿಕ್ಷಕರ ನೇಮಕ ಗೊಂದಲ
ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಪ್ರಾಥಮಿಕ ಶಾಲೆಗಳಿಗೆ 34,000 ಹಾಗೂ ಪ್ರೌಢಶಾಲೆಗಳಿಗೆ 6,000 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ ಹೊರಡಿಸಿದೆ. ಆದರೆ, ಶಿಕ್ಷಕರ ನೇಮಕವು ವಿಷಯವಾರು ಹಾಗೂ ಮೆರಿಟ್ ಆಧಾರದ ಮೇಲೆ ನಡೆಯುತ್ತಿಲ್ಲ. ಸರ್ಕಾರದ ಆದೇಶವನ್ನು ಬಿಇಒಗಳು ಗಾಳಿಗೆ ತೂರಿ ನೇಮಕ ಮಾಡುತ್ತಿದ್ದಾರೆ. ಶಾಸಕರು ಮೂಗು ತೂರಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಈ ಬೆಳವಣಿಗೆಯು ಮುಖ್ಯ ಶಿಕ್ಷಕರಿಗೆ ನುಂಗಲಾರದ ತುತ್ತಾಗಿದೆ. ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಈ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಬೇಕಿದೆ. ಮೆರಿಟ್ ಆಧಾರದ ಮೇಲೆ ನೇಮಕಕ್ಕೆ ಕ್ರಮ ವಹಿಸಬೇಕಿದೆ.⇒ಮಹಾಂತೇಶ್, ಧಾರವಾಡ
ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ
ರಾಜ್ಯದಲ್ಲಿ ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯ ನಿಯಂತ್ರಣಕ್ಕಾಗಿ ಬಾಟಲ್‌ಗಳ ಉತ್ಪಾದಕರು ಮರು ಖರೀದಿಸುವ ಹೊಣೆಗಾರಿಕೆ ನಿರ್ವಹಿಸುತ್ತಿರುವ ಬಗ್ಗೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ರಚನೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ (ಪ್ರ.ವಾ., ಜೂನ್ 18). ಪ್ಲಾಸ್ಟಿಕ್‌ನಿಂದ ಅನೇಕ ಪ್ರಯೋಜನಗಳಿವೆ. ಇದರಿಂದ ಬದುಕು ಸುಲಭವಾಗಿರುವುದು ನಿಜ. ಆದರೆ, ಇದನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಪರಿಸರಕ್ಕೆ ಮಾರಕವಾಗಲಿದೆ.
ಮೊದಲಿಗೆ ನಾವೇ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಿದೆ.
⇒ಮಹೇಂದ್ರ ಟಿ.ಎಂ., ಶಂಕರಘಟ್ಟ
ಸುಳ್ಳು ಸುದ್ದಿಗೆ ಕಡಿವಾಣ ಬೇಕು
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವಿಕೆ ಉಲ್ಬಣಿಸಿದೆ. ರಾಜಕಾರಣಿಗಳ ಅವಹೇಳನ ಮತ್ತು ಕೋಮು ಸೌಹಾರ್ದ ಹಾಳು ಮಾಡುವ ಪೋಸ್ಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕಾಗಿ ಜಾಲ ತಾಣಿಗರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವುದಾಗಿ ಈ ಹಿಂದೆ ರಾಜ್ಯ ಸರ್ಕಾರ ಹೇಳಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವವರ ವಿರುದ್ಧ ಪೊಲೀಸರು ಸ್ವಯಂ
ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕಿದೆ.
⇒ಜಿ. ನಾಗೇಂದ್ರ ಕಾವೂರು, ಸಂಡೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.