ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಪತ್ರಗಳು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 1:13 IST
Last Updated 17 ಅಕ್ಟೋಬರ್ 2025, 1:13 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಸಚಿವರಿಗೆ ಕೊಲೆ ಬೆದರಿಕೆ ಅಕ್ಷಮ್ಯ

ಸರ್ಕಾರಿ ಕಚೇರಿಗಳಲ್ಲಿ ಮತ್ತು ಶಾಲಾ–ಕಾಲೇಜು ಆವರಣಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂಬುದು ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಮುಖ್ಯಮಂತ್ರಿಗೆ ಬರೆದಿರುವ ಪತ್ರದ ಸಾರ. ಆದರೆ, ಸಂಘ ಪರಿವಾರದ ಮನಸ್ಸುಗಳು ಈ ಅಂಶಕ್ಕೆ ಸುಳ್ಳಿನ ಲೇಪನ ಹಚ್ಚಿವೆ. ಸಂಘಟನೆಯನ್ನು ನಿಷೇಧಿ
ಸುವಂತೆ ಹೇಳಿದ್ದಾರೆಂದು ಬಿಂಬಿಸಲಾಗುತ್ತಿದೆ. ಅಲ್ಲದೆ, ಪ್ರಿಯಾಂಕ್‌ ಖರ್ಗೆ ವಿರುದ್ಧ ವ್ಯಕ್ತಿಗತ ನೆಲೆಯಲ್ಲಿ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು, ಹತ್ಯೆಯ ಬೆದರಿಕೆ ಹಾಕಿರುವುದು ಅಕ್ಷಮ್ಯ. ಸಚಿವರ ಹೇಳಿಕೆ ಸರಿ ಇಲ್ಲದಿದ್ದರೆ ಕಾನೂನಾತ್ಮಕ ಹೋರಾಟಕ್ಕೆ ಅವಕಾಶವಿದೆ. ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ.

ADVERTISEMENT

⇒ಪವನ್ ಜಯರಾಂ, ಚಾಮರಾಜನಗರ

ಬಡವರಿಗೆ ‘ಸರ್ಕಾರಿ ಮಾರ್ಕೆಟ್‌’ ಬೇಡವೆ?

ರಾಜ್ಯ ಸರ್ಕಾರಿ ನೌಕರರಿಗೆ ಎಂಎಸ್‌ಐಎಲ್‌ನಿಂದ ಸರ್ಕಾರಿ ಮಾರ್ಕೆಟ್ ಪ್ರಾರಂಭಿಸುವುದಾಗಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಇದು ಒಳ್ಳೆಯ ಕ್ರಮವೇ. ಹಾಗೆಯೇ ದಿನಗೂಲಿ ನೌಕರರು, ಗಾರ್ಮೆಂಟ್ ನೌಕರರು, ಕಟ್ಟಡ ಕಾರ್ಮಿಕರು, ಮನೆಗೆಲಸದವರು, ಪೌರಕಾರ್ಮಿಕರು, ರೈತ ಕಾರ್ಮಿಕರು ಹೀಗೆ ದುಡಿಯುವ ಎಲ್ಲಾ ವರ್ಗದವರಿಗೂ ಇಂತಹ ಮಾರ್ಕೆಟ್‌ ಸ್ಥಾಪಿಸಬೇಕಿದೆ.

ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ಸಂಬಳ, ಸಾರಿಗೆ ಸೇರಿ ಎಲ್ಲ ಅನುಕೂಲ ಸಿಗುತ್ತದೆ. ಬೆಲೆ ಸೂಚ್ಯಂಕದ ಆಧಾರದ ಮೇಲೆ ತುಟ್ಟಿಭತ್ಯೆ, ನಿವೃತ್ತಿ ವೇತನ, ಜೀವ ವಿಮಾ ಸೌಲಭ್ಯ ಉಂಟು. ಹಾಗಾಗಿ, ದಿನದ ದುಡಿಮೆಯನ್ನೇ ನಂಬಿ ಬದುಕುವ ಅಸಂಘಟಿತ ವಲಯದವರಿಗೆ ಇಂತಹ ಮಾರ್ಕೆಟ್‌ನ ಅಗತ್ಯತೆ ಹೆಚ್ಚಿದೆ.

⇒ಅತ್ತಿಹಳ್ಳಿ ದೇವರಾಜ್, ಬೆಂಗಳೂರು

ಕ್ರೌರ್ಯದ ಸುಳಿಗೆ ಸಿಲುಕಿದ ಮನಸ್ಸು

ಅರಿವಳಿಕೆ ಚುಚ್ಚುಮದ್ದು ನೀಡಿ ತನ್ನ ವೈದ್ಯೆ ಪತ್ನಿಯನ್ನು ಕೊಂದ ವೈದ್ಯನ ಸುದ್ದಿ ಓದಿ ಮನಸ್ಸು ವಿಹ್ವಲಗೊಂಡಿತು. ಜನರ ಜೀವದ ಹೊಣೆ ಹೊತ್ತಿರುವ ವೈದ್ಯನೇ ಎಸಗಿರುವ ಈ ದುಷ್ಕೃತ್ಯವು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಅನ್ವರ್ಥವಾಗಿದೆ. ಇದೊಂದು ವೈಯಕ್ತಿಕ ಘಟನೆಯಾದರೂ ಸಮಾಜದಲ್ಲಿ ಅಭದ್ರತೆಯ ಎಳೆಯೊಂದು ಹಾಸು ಹೊಕ್ಕಂತೆ. ಅಸಹನೀಯವಾದ ಸಿಟ್ಟು, ರೋಷ ಇವೆಲ್ಲವೂ ಮನುಷ್ಯನಿಗೆ ಸಹಜವಾದ ಭಾವನೆಗಳು. ಅವುಗಳಿಗೆ ಒಂದು ಮಿತಿ ಹಾಕಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು.

⇒ಆಶಾ ಅಪ್ರಮೇಯ, ದಾವಣಗೆರೆ ‌

ಕನ್ನಡ ಕಲಿಕೆಗೆ ‘ಪ್ರಜಾವಾಣಿ’ ಪ್ರೇರಣೆ

ಸುಮಾರು ಐವತ್ತೈದು ವರ್ಷಗಳಿಂದ ನಾನು ‘ಪ್ರಜಾವಾಣಿ’ಯ ಓದುಗ ಮತ್ತು ಅಭಿಮಾನಿ. ನನ್ನ ಮಾತೃಭಾಷೆ ಹಿಂದಿ. ಆದಾಗ್ಯೂ, ಉತ್ತಮ ಲೇಖನಗಳನ್ನು ಬರೆಯುವ ಎತ್ತರಕ್ಕೆ ಕನ್ನಡ ಕಲಿಯಲು ನನಗೆ ‘ಪ್ರಜಾವಾಣಿ’ ಪ್ರೇರಣೆ ನೀಡಿದೆ. ಪ್ರತಿ ದಿನ ಮಾಡೆಸ್ಟಿ ಬ್ಲೇಸ್, ಫ್ಯಾಂಟಮ್ ಮತ್ತು ಮೊದ್ದುಮಣಿ ನೋಡುವುದರಿಂದ ಪತ್ರಿಕೆ ಓದುವ ಹವ್ಯಾಸ ಪ್ರಾರಂಭವಾಯಿತು. ಪತ್ರಿಕೆಯು ಮುಂಜಾನೆ ಕೈಗೆ ಬರುವವರೆಗೂ ಒಂದು ರೀತಿಯ ಚಡಪಡಿಕೆ ಇದ್ದೇ ಇರುತ್ತದೆ. 77 ವರ್ಷಗಳಿಂದ ಕರ್ನಾಟಕದ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ನನ್ನ ಏಕಾಂತದ ಅಂತರಂಗದ ಮಿತ್ರ ‘ಪ್ರಜಾವಾಣಿ’ಗೆ ಅನಂತಾನಂತ ಶುಭಾಶಯಗಳು.

⇒ಜಯಚಂದ್ ಜೈನ್, ದಾವಣಗೆರೆ

ರಾಜೀವ ತಾರಾನಾಥರ ಹೆಸರು ಹಸಿರಾಗಿಸಿ

ಸರೋದ್ ವಾದಕ ಪಂ. ರಾಜೀವ ತಾರಾನಾಥರ ಜನ್ಮದಿನವಿಂದು (ಅ. 17). ಅವರು ಎಂ‌.ಎ ಇಂಗ್ಲಿಷ್ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯ ದಿಂದ. ಪ್ರಶಾಂತ ಮತ್ತು ಸಂಗೀತಕ್ಕೆ ಆದ್ಯತೆಯ ಜಾಗವೆಂದು ಮೈಸೂರಿನಲ್ಲಿ ನೆಲೆಗೊಂಡರು. ಇದಕ್ಕಾಗಿ ಬೆಂಗಳೂರಿನ ತಮ್ಮ ಮನೆ ಮಾರಿ ಬಂದರು. ಆದರೆ‌,
ಮನೆ ಕೊಳ್ಳದೆ ಕೊನೆಯವರೆಗೂ ಮೈಸೂರಿನ ಸರಸ್ವತಿಪುರಂ, ನಂತರ ಕುವೆಂಪುನಗರದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಅವರ ನೆನಪಿಗೆ ಸರಸ್ವತಿಪುರಂನ 14ನೇ ಮುಖ್ಯರಸ್ತೆಗೆ ಇಲ್ಲವೆ ಕುವೆಂಪುನಗರದ ಯಾವುದಾದರೊಂದು ರಸ್ತೆಗೆ ಅವರ ಹೆಸರಿಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಬೇಕು. ಹಾಗೆಯೇ, ರಾಜ್ಯದ ಯಾವುದಾದರೂ ವಿ.ವಿ.ಯ ಸಂಗೀತ ವಿಭಾಗಕ್ಕೆ ಅವರ ಹೆಸರಿಡಬೇಕಿದೆ.

⇒ಗಣೇಶ ಅಮೀನಗಡ, ಮೈಸೂರು

ಚರಂಡಿ ಸ್ವಚ್ಛತೆ ಜಿಲ್ಲಾಧಿಕಾರಿ ಕೆಲಸವಲ್ಲ

ಕೆಲವು ವರ್ಷಗಳ ಹಿಂದೆ ಪ್ರಧಾನಿ ಅವರು, ತಮಿಳುನಾಡಿನ ಸಮುದ್ರದ ಕಿನಾರೆಯಲ್ಲಿ ಬಿದ್ದಿರುವ ಖಾಲಿ ಪ್ಲಾಸ್ಟಿಕ್‌ ಬಾಟಲಿಗಳನ್ನು ಹೆಕ್ಕಿ ಚೀಲಕ್ಕೆ ಹಾಕಿಕೊಂಡು, ಸಮುದ್ರದ ದಂಡೆಯನ್ನು ಸ್ವಚ್ಛ ಮಾಡಿದ್ದ ದೃಶ್ಯ ಇನ್ನೂ ಜನರ ಸ್ಮೃತಿಪಟಲ ದಲ್ಲಿದೆ. ಪ್ರಸ್ತುತ ಕೊಡಗು ಜಿಲ್ಲಾಧಿಕಾರಿಯು ಮಡಿಕೇರಿಯಲ್ಲಿ ಚರಂಡಿ ಸ್ವಚ್ಛ ಮಾಡುತ್ತಿರುವ ಫೋಟೊ ಪ್ರಕಟವಾಗಿದೆ (ಪ್ರ.ವಾ., ಅ. 16). ಇದನ್ನು ನೋಡಿದ ಓದುಗರಿಗೆ ಅವರ ಬಗ್ಗೆ ಅಭಿಮಾನ ಮೂಡುವುದರಲ್ಲಿ ಅನುಮಾನವಿಲ್ಲ. ಆದರೆ, ಯಾವುದೋ ಒಂದು ದಿನ ಸ್ವಚ್ಛತಾ ಕಾರ್ಯ ಕೈಗೊಂಡರೆ ಮಡಿಕೇರಿಯ ಚರಂಡಿಗಳು ಸ್ವಚ್ಛವಾಗುವುದಿಲ್ಲ. ಇದಕ್ಕಾಗಿಯೇ ಇರುವ ಸಿಬ್ಬಂದಿಯಿಂದ ಕೆಲಸ ಮಾಡಿಸಬೇಕು. ಅದೇ ಸರಿಯಾದ ಕ್ರಮ.

⇒ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.