ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ವಾರ್ಷಿಕ ಟೋಲ್ ಪಾಸ್ ಸ್ವಾಗತಾರ್ಹ
ಕೇಂದ್ರ ಸರ್ಕಾರವು ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ವ್ಯವಸ್ಥೆ ರೂಪಿಸಿರುವುದು ಒಳ್ಳೆಯ ನಿರ್ಧಾರ (ಪ್ರ.ವಾ., ಜೂನ್ 19). ಇದರಿಂದ ವಾಹನ ಸವಾರರಿಗೆ ಅನುಕೂಲವಾಗಲಿದೆ. ಜೊತೆಗೆ, ಸರ್ಕಾರವು ಟೋಲ್ ಪ್ಲಾಜಾಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಜನಸ್ನೇಹಿ ಕ್ರಮಕ್ಕೂ ಮುಂದಾಗಬೇಕಿದೆ.
ಹೆದ್ದಾರಿ ಬಳಕೆ ಶುಲ್ಕ ಎಷ್ಟು ಸಂಗ್ರಹವಾಗುತ್ತಿದೆ ಎಂಬುದು ನಾಗರಿಕರಿಗೂ ತಿಳಿಯಬೇಕಿದೆ. ಇದಕ್ಕಾಗಿ ಪ್ಲಾಜಾಗಳ ಪಕ್ಕದಲ್ಲಿ ಡಿಜಿಟಲ್ ಫಲಕ ಅಳವಡಿಸ
ಬೇಕಿದೆ. ಇದರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶ್ವಾಸಾರ್ಹತೆ ಉಳಿಯಲಿದೆ.
⇒ಪ್ರವೀಣ್ ನಾಗಪ್ಪ ಯಲವಿಗಿ, ಮುಂಡಗೋಡು
ನ್ಯಾಯದಾನ ವಿಳಂಬ
ಬೆಳಗಾವಿಯಲ್ಲಿ 30 ವರ್ಷಗಳ ಹಿಂದೆ ಜಮೀನಿನ ಖಾತೆ ಮಾಡಿಕೊಡಲು
₹500 ಲಂಚ ಪಡೆದಿದ್ದ ಗ್ರಾಮ ಲೆಕ್ಕಿಗನಿಗೆ ಸುಪ್ರೀಂ ಕೋರ್ಟ್ ಶಿಕ್ಷೆ ವಿಧಿಸಿದೆ (ಪ್ರ.ವಾ., ಜೂನ್ 19). ದೇಶದಲ್ಲಿನ ನ್ಯಾಯದಾನ ವಿಳಂಬಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ಈ ವಿಳಂಬಕ್ಕೆ ಕಾರಣ ಯಾರು? ನ್ಯಾಯಾಲಯ ಅಂತೂ ಆಗಿರಲಾರದು. ಲೋಕಾಯುಕ್ತ ಸಂಸ್ಥೆಯದ್ದೇ ಇದಕ್ಕೆ ಕಾರಣವಿರಬಹುದು. ತ್ವರಿತಗತಿಯಲ್ಲಿ ಈ ಪ್ರಕರಣದ ತೀರ್ಪು ಹೊರಬಿದ್ದಿದ್ದರೆ ಲಂಚ ಪಡೆಯುವ ಬೇರೆ ಅಧಿಕಾರಿಗಳಿಗೆ ಕನಿಷ್ಠ ಭಯವಾದರೂ ಕಾಡುತ್ತಿತ್ತು. ಈ ಬಗೆಯ ವಿಳಂಬವು ನೌಕರರಲ್ಲಿ ಇನ್ನಷ್ಟು ಭಂಡತನ ಬೆಳೆಸುತ್ತದೆ. ಭ್ರಷ್ಟ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೆ ಲಂಚ ಪಡೆಯುವುದನ್ನು ಮುಂದುವರಿಸುತ್ತಾರೆ. ತನಿಖಾ ಸಂಸ್ಥೆಗಳ ಆತ್ಮಾವಲೋಕನಕ್ಕೆ ಇದು ಸಕಾಲ. ⇒ಮಲ್ಲತಹಳ್ಳಿ ಎಚ್. ತುಕಾರಾಂ, ಬೆಂಗಳೂರು
ಯುವಪೀಳಿಗೆ ದಾರಿ ತಪ್ಪುತ್ತಿದೆ...
‘ವಿದ್ಯಾರ್ಥಿ ಜೀವನ, ಆಗಲಿ ನಂದನ’ ಕುರಿತ ಎಲ್ಲಪ್ಪ ಜಿ. ಅವರ ಲೇಖನವು
(ಪ್ರ.ವಾ., ಜೂನ್ 19) ವಿದ್ಯಾರ್ಥಿ ಜೀವನದ ಮೇಲೆ ಬೆಳಕು ಚೆಲ್ಲಿದೆ. ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷೆಗಳು ಕೊಠಡಿಯೊಳಗಿನ ಪಾಠಕ್ಕಿಂತ ಅತ್ಯಮೂಲ್ಯ ನಿಜ. ಆದರೆ, ತರಗತಿಗಳಲ್ಲಿ ಹಾಜರಿರದ, ಹಾಜರಿದ್ದೂ ಪಾಠದತ್ತ ಗಮನ
ಹರಿಸದ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ಅದನ್ನೇ ಮಹತ್ವದ ಸಾಧನೆ ಎಂಬಂತೆ ಬೀಗುವುದು ವಿಪರ್ಯಾಸ. ಅವರ ನಿಜವಾದ ಪರೀಕ್ಷೆ ಪ್ರಾರಂಭ
ವಾಗುವುದು ಕಾಲೇಜಿನ ಹೊರಗೆ. ಭವಿಷ್ಯದ ಜೀವನ ಕುರಿತು ಕಲ್ಪನೆಯೂ ಇಲ್ಲದಂತೆ ಮೋಜು- ಮಸ್ತಿಯಲ್ಲಿ ನಿರತರಾದ ಯುವಜನಾಂಗ ದಾರಿ
ತಪ್ಪುತ್ತಿರುವುದು ದಿಟ.
ಮೊಬೈಲ್ ಫೋನ್ ಸಂಸ್ಕೃತಿಯು ತರಗತಿಯ ಪಾಠಗಳತ್ತ ಗಮನಹರಿಸುವ ದಿಕ್ಕನ್ನೇ ಬದಲಿಸಿದೆ. ವಿಷಯ ಸಂಗ್ರಹಣೆ, ಪಾಠಗಳಿಗೆ ಪೂರಕವಾಗಿ ಜ್ಞಾನ ಸಂಗ್ರಹಿಸಲು ಈ ಸಾಧನವನ್ನು ಬಳಸುವ ಬದಲು, ಕೇವಲ ಮನರಂಜನೆಗಾಗಿ ಬಳಸುವವರ ಸಂಖ್ಯೆ ಹೆಚ್ಚಿದೆ. ವಿದ್ಯಾರ್ಥಿ ಜೀವನದ ಅಮೂಲ್ಯ ಸಮಯ ಈ ಮೂಲಕ ವ್ಯರ್ಥವಾಗುತ್ತಿರುವುದು ಕಟುಸತ್ಯ. ಈ ಬಗ್ಗೆ ವಿದ್ಯಾರ್ಥಿಗಳು ಗಂಭೀರವಾಗಿ ಚಿಂತನೆ ನಡೆಸಬೇಕಿದೆ.
⇒ಬಸಪ್ಪ ಯ. ಬಂಗಾರಿ, ಬೆಂಗಳೂರು
ಮತ್ತಷ್ಟು ಸಾಧನೆ ಮಾಡಲಿ
ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ‘ಯುವ ಪುರಸ್ಕಾರ’ಕ್ಕೆ
ಚಾಮರಾಜನಗರದ ಕವಿ, ವಿಮರ್ಶಕ ಹಾಗೂ ಸಂಶೋಧಕ ಆರ್. ದಿಲೀಪ್ ಕುಮಾರ್ ಭಾಜನರಾಗಿರುವುದು ಹೆಮ್ಮೆಯ ಸಂಗತಿ.
ಪುರಸ್ಕಾರವು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಇದನ್ನು ಅವರು ತಂದೆ- ತಾಯಿ ಮತ್ತು ತಮ್ಮನಿಗೆ ಅರ್ಪಿಸಿದ್ದಾರೆ. ತನಗೆ ಪಾಠ ಮಾಡಿದ ಶಿಕ್ಷಕರ ಕೊಡುಗೆಯನ್ನೂ ಸ್ಮರಿಸಿದ್ದಾರೆ. ಇದು ಬೆಳೆಯುವ ಸಾಹಿತಿಗೆ ಇರುವ ಗುಣವಾಗಿದೆ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲೆಂದು ಆಶಿಸೋಣ.
⇒ರಾಜಶೇಖರಮೂರ್ತಿ ಬೆಳಗನಹಳ್ಳಿ, ಎಚ್.ಡಿ ಕೋಟೆ
ಸಂಗೊಳ್ಳಿ ರಾಯಣ್ಣನ ಹೆಸರು ಸೂಕ್ತ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಕಿತ್ತೂರು ರಾಣಿ ಚೆನ್ನಮ್ಮನವರ
ಹೆಸರಿಡಲು ಚಿಂತನೆ ನಡೆದಿದೆ ಎಂದು ನಿಗಮದ ಅಧ್ಯಕ್ಷ ರಾಜು ಕಾಗೆ ಹೇಳಿರುವುದು ವರದಿಯಾಗಿದೆ. ಈಗಾಗಲೇ, ಬೆಳಗಾವಿಯ ವಿಶ್ವವಿದ್ಯಾಲಯಕ್ಕೆ ಕಿತ್ತೂರು ರಾಣಿ ಚೆನ್ನಮ್ಮನವರ ಹೆಸರಿಡಲಾಗಿದೆ. ಹಾಗಾಗಿ, ಸಾರಿಗೆ ನಿಗಮಕ್ಕೂ ಚೆನ್ನಮ್ಮನವರ ಹೆಸರಿಡುವ ಬದಲು, ಆಕೆಯ ಬಲಗೈ ಬಂಟನಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹೆಸರಿಡುವುದು ಸೂಕ್ತ. ಈ ಬಗ್ಗೆ ನಿಗಮವು ಚಿಂತನೆ ನಡೆಸಲಿ.
⇒ಸಿ. ಪುಟ್ಟಯ್ಯ ಹಂದನಕೆರೆ, ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.